Advertisement

ನೋಬಾಲ್‌ ತೀರ್ಪು ನೀಡಲಿದ್ದಾರೆ ತೃತೀಯ ಅಂಪಾಯರ್‌!

09:53 AM Dec 06, 2019 | Team Udayavani |

ದುಬಾೖ: ಭಾರತ-ವೆಸ್ಟ್‌ ಇಂಡೀಸ್‌ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಐಸಿಸಿ ಮಹತ್ವದ ಪ್ರಯೋಗವೊಂದನ್ನು ಮಾಡಲಿದೆ. ಈ ಸರಣಿಯಲ್ಲಿ ಬೌಲರ್‌ಗಳು ಮುಂಗಾಲಿಟ್ಟು ಮಾಡುವ ನೋಬಾಲ್‌ ತೀರ್ಪನ್ನು ತೃತೀಯ ಅಂಪಾಯರ್‌ ನೀಡಲಿದ್ದಾರೆ. ಇದುವರೆಗೆ ಆ ಕೆಲಸ ಮೈದಾನದ ಅಂಪಾಯರ್‌ಗಳ ಜವಾಬ್ದಾರಿಯಾಗಿತ್ತು. ಇಲ್ಲಿನ ಫ‌ಲಿತಾಂಶ ನೋಡಿಕೊಂಡು ಈ ಪ್ರಯೋಗವನ್ನು ಮುಂದುವರಿಸುವುದೋ, ಬೇಡವೋ ಎಂದು ಐಸಿಸಿ ತೀರ್ಮಾನಿಸಲಿದೆ.

Advertisement

ಈ ವರ್ಷ ಆಗಸ್ಟ್‌ನಲ್ಲೇ ಐಸಿಸಿ, ತಂತ್ರಜ್ಞಾನವನ್ನು ಬಳಸಿ ನೋಬಾಲ್‌ ತೀರ್ಪು ನೀಡುವ ನಿರ್ಧಾರ ಮಾಡಿತ್ತು. 2016ರಲ್ಲೊಮ್ಮೆ ಈ ಪ್ರಯೋಗ ಇಂಗ್ಲೆಂಡ್‌-ಪಾಕಿಸ್ಥಾನ ಸರಣಿಯಲ್ಲಿ ನಡೆದಿತ್ತು. ಒಂದು ವೇಳೆ ಇದು ಯಶಸ್ವಿಯಾದರೆ, ಅಂತಾರಾಷ್ಟ್ರೀಯ ಕ್ರಿಕೆಟಿನ ಕ್ರಾಂತಿಕಾರಕ ನಿರ್ಧಾರವಾಗಲಿದೆ. ಹಾಗೆಯೇ ದೀರ್ಘ‌ಕಾಲದಿಂದ ಮೈದಾನದ ಅಂಪಾಯರ್‌ ಮೇಲೆ ಇರುವ ಆಟಗಾರರ ಸಿಟ್ಟನ್ನು ಕಡಿಮೆ ಮಾಡಲಿದೆ.

ಭಾರತ-ವಿಂಡೀಸ್‌ ಸರಣಿಯಲ್ಲಿ ಪ್ರತೀ ಎಸೆತವನ್ನು ಪರಿಶೀಲಿಸಿ ಮುಂಗಾಲಿನ ನೋಬಾಲ್‌ ತೀರ್ಪು ನೀಡುವ ಕೆಲಸವನ್ನು ತೃತೀಯ ಅಂಪಾಯರ್ ಮಾಡಲಿದ್ದಾರೆ. ಒಂದು ವೇಳೆ ನೋಬಾಲ್‌ ಆಗಿದ್ದರೆ, ಕೂಡಲೇ ಅದನ್ನು ಮೈದಾನದ ಅಂಪಾಯರ್‌ಗಳಿಗೆ ತಿಳಿಸಲಾಗುತ್ತದೆ. ತುಸು ತಡವಾಗಿ ನೋಬಾಲ್‌ ತೀರ್ಪು ಹೊರಬಿದ್ದರೆ, ಅದೇ ವೇಳೆ ಬ್ಯಾಟ್ಸ್‌ಮನ್‌ ಔಟಾಗಿ (ರನೌಟ್‌ ಹೊರತುಪಡಿಸಿ) ಹೊರನಡೆದಿದ್ದರೆ, ತೀರ್ಪನ್ನು ಮೈದಾನದ ಅಂಪಾಯರ್‌ ಹಿಂದಕ್ಕೆ ಪಡೆಯಲು ಅವಕಾಶವಿದೆ. ಮಹತ್ವದ ನೋಬಾಲ್‌ ತೀರ್ಪು ತೆಗೆದುಕೊಳ್ಳುವ ಹಂತದಲ್ಲಿ ಅಂಪಾಯರ್‌ಗಳು ತಪ್ಪು ಮಾಡಿದ್ದು ಭಾರೀ ತಕರಾರಿಗೆ ಕಾರಣವಾಗಿದೆ. ಹೀಗಾಗಿ ಈಗ ತಂತ್ರಜ್ಞಾನದ ಮೊರೆಹೋಗಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next