Advertisement

Bahrain ತೃತೀಯ ವಾರ್ಷಿಕೋತ್ಸವ, ಪಟ್ಲ ಸಂಭ್ರಮ-2023

07:44 PM Nov 25, 2023 | Team Udayavani |

ಬಹ್ರೈನ್‌: ಯಕ್ಷಧ್ರುವ ಪಟ್ಲ ಫೌಂಡೇಶನ್‌ (ರಿ.) ಮಂಗಳೂರು, ಇದರ ಬಹ್ರೈನ್‌ ಸೌದಿ ಘಟಕದ ತೃತೀಯ ವಾರ್ಷಿಕೋತ್ಸವ “ಪಟ್ಲ ಸಂಭ್ರಮ – 2023′ ಅನ್ನು ಇಲ್ಲಿನ ಕನ್ನಡ ಸಂಘದ ಸಭಾಂಗಣದಲ್ಲಿ ಅದ್ದೂರಿಯಿಂದ ಆಚರಿಸಲಾಯಿತು.

Advertisement

ಈ ವಾರ್ಷಿಕೋತ್ಸವದ ಮುಖ್ಯ ಅತಿಥಿಗಳಾಗಿ ಯಕ್ಷಧ್ರುವ ಪಟ್ಲ ಫೌಂಡೇಶನ್‌ ಕತಾರ್‌ ಘಟಕದ ಗೌರವಾಧ್ಯಕ್ಷರಾದ ಡಾ| ಮೂಡಂಬೈಲು ರವಿ ಶೆಟ್ಟಿ, ಅಭ್ಯಾಗತರಾಗಿ ಶೋಭಾ ಪುರುಷೋತ್ತಮ ಪೂಂಜ, ಸ್ಥಾಪಕಾಧ್ಯಕ್ಷ ಯಕ್ಷಧ್ರುವ ಪಟ್ಲ ಸತೀಶ್‌ ಶೆಟ್ಟಿ ಪಾಲ್ಗೊಂಡಿದ್ದರು.

ಅತಿಥಿ ಗಣ್ಯರಿಂದ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮ ಶುಭಾರಂಭಗೊಂಡಿತು. ಈ ಬಾರಿಯ ಪಟ್ಲ ಸಂಭ್ರಮದಲ್ಲಿ ಅಭಿನವ ವಾಲ್ಮೀಕಿ ಬಿರುದಾಂಕಿತ ಬೊಟ್ಟಿಕೆರೆ ಪುರುಷೋತ್ತಮ ಪೂಂಜರ ಸಂಸ್ಮರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ತಾಯ್ನಾಡಿಂದ ಆಗಮಿಸಿದ್ದ ಪೂಂಜರ ಶಿಷ್ಯ ದೀವಿತ್‌ ಕೋಟ್ಯಾನ್‌ರವರು ಪೂಂಜರಿಗೆ ನುಡಿನಮನ ಸಲ್ಲಿಸಿದರು. ಈ ವೇಳೆ ಶೋಭಾ ಪುರುಷೋತ್ತಮ ಪೂಂಜರನ್ನು ಶಾಲು, ಸ್ಮರಣಿಕೆ, ಹಣ್ಣುಹಂಪಲು, ಸಮ್ಮಾನ ಪತ್ರದ ಮೂಲಕ ಗೌರವಿಸಲಾಯಿತು.

ಮುಖ್ಯ ಅತಿಥಿ ಡಾ| ಮೂಡಂಬೈಲು ರವಿ ಶೆಟ್ಟಿಯವರನ್ನು ಸಾಂಪ್ರದಾಯಿಕವಾಗಿ ಸಮ್ಮಾನಿಸಲಾಯಿತು. ಅನಂತರ ಮಾತನಾಡಿದ ಡಾ| ರವಿ ಶೆಟ್ಟಿಯವರು ಅಶಕ್ತ ಕಲಾವಿದರಿಗೆ ವಿವಿಧ ಯೋಜನೆಗಳ ಸೇವಾಸಹಾಯನ್ನು ದೇಶವಿದೇಶಗಳ ಕಲಾಭಿಮಾನಿಗಳ ಸಹಕಾರದಿಂದ ನೀಡುತ್ತಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್‌ನನ್ನು ಅಭಿನಂದಿಸಿದರು.

ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್‌ ಶೆಟ್ಟಿಯವರು ಕೀರ್ತಿಶೇಷ ಬೊಟ್ಟಿಕೆರೆ ಫೌಂಡೇಶನ್‌ನ ವಿವಿಧ ಯೋಜನೆಗಳು, ಯಕ್ಷಶಿಕ್ಷಣ ಅಭಿಯಾನದ ಬಗ್ಗೆ ಉಲ್ಲೇಖೀಸಿದರು. ಬಹ್ರೈನ್‌ ಸೌದಿ ಘಟಕದ ಗೌರವಾಧ್ಯಕ್ಷರಾದ ಸುಭಾಶ್ಚಂದ್ರ, ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಧ್ಯೇಯೋದ್ದೇಶಗಳು ಸಾಕಾರವಾಗುವಂತೆ ಶುಭಹಾರೈಸಿದರು.

Advertisement

ವೇದಿಕೆಯಲ್ಲಿ ಕನ್ನಡ ಸಂಘ ಬಹ್ರೈನ್‌ ಅಧ್ಯಕ್ಷರಾದ ಅಮರನಾಥ್‌ ರೈ, ಬಂಟ್ಸ್‌ ಕತಾರ್‌ನ ಅಧ್ಯಕ್ಷ ನವೀನ್‌ ಶೆಟ್ಟಿ ಇರುವೈಲ್‌, ಘಟಕದ ಗೌರವ ಗೋಪಾಲ್‌ ಶೆಟ್ಟಿ, ಕಲಾಪೋಷಕ ರವಿ ಕರ್ಕೇರ, ಸೌದಿ ಅರೇಬಿಯ, ಉಪಾಧ್ಯಕ್ಷ ನರೇಂದ್ರ ಶೆಟ್ಟಿ ಉಪಸ್ಥಿತರಿದ್ದರು.

ಪಟ್ಲ ಸಂಭ್ರಮದ ಕಲಾಪೋಷಕರನ್ನು ಗೌರವ ಸ್ಮರಣಿಕೆಯ ಮೂಲಕ ಅಭಿನಂದಿಸಲಾಯಿತು. ಸಾಂಪ್ರದಾಯಿಕ ವಿಶೇಷ ರಂಗಸ್ಥಳ ದಿ| ಬೊಟ್ಟಿಕೆರೆ ಪುರುಷೋತ್ತಮ ಪೂಂಜ ರಂಗಮಂಟಪದಲ್ಲಿ ಪುರುಷೋತ್ತಮ ಪೂಂಜ ವಿರಚಿತ “ಮಾನಿಷಾದ’ ಯಕ್ಷಗಾನ ಪ್ರದರ್ಶನವನ್ನು ಬಹ್ರೈನ್‌ ಹಾಗೂ ಸೌದಿಯ ಯಕ್ಷಗಾನ ಕಲಾವಿದರು ಮತ್ತು ಅತಿಥಿ ಕಲಾವಿರ ಸಮಾಗಮದಲ್ಲಿ ನೂರಾರು ಕಲಾಪ್ರೇಕ್ಷಕರು ವೀಕ್ಷಿಸಿದರು. ನಾಟ್ಯಗುರು ದೀಪಕ್‌ ರಾವ್‌ ಪೇಜಾವರ ಅವರ ನಿರ್ದೇಶನದಲ್ಲಿ ಸ್ಥಳೀಯ ಕಲಾವಿದರು, ತಾಯ್ನಾಡಿಂದ ಆಗಮಿಸಿದ್ದ ತೆಂಕು- ಬಡಗುತಿಟ್ಟಿನ ಸುಪ್ರಸಿದ್ಧ ಯಕ್ಷಗಾನ ಕಲಾವಿದ ಶಶಿಕಾಂತ್‌ ಶೆಟ್ಟಿ ಕಾರ್ಕಳ ಅವರು ಸ್ವೆ„ರಿಣಿ ಹಾಗೂ ಸೀತೆಯ ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿದರು. ಯುವ ಹಿಮ್ಮೇಳವಾದಕ ರೋಹಿತ್‌ ಉಚ್ಚಿಲ್‌ ಅವರು ತಮ್ಮ ಚೆಂಡೆ -ಮದ್ದಳೆಯ ಕೈಚಳಕದಿಂದ ಮಿಂಚಿದರು.

ದುಬೈಯ ಹಿರಿಯ ಯಕ್ಷಗಾನ ಕಲಾವಿದ, ನಾಟ್ಯಗುರು ಶೇಖರ್‌ ಶೆಟ್ಟಿಗಾರ್‌ ಕಿನ್ನಿಗೋಳಿಯವರು ಶ್ರೀರಾಮನ ಪಾತ್ರದಲ್ಲಿ ಹೃದಯಂಗಮವಾಗಿ ಅಭಿನಯಿಸಿದರು. ಯಕ್ಷಧ್ರುವ ಪಟ್ಲ ಸತೀಶ್‌ ಶೆಟ್ಟಿಯವರ ಸಿರಿಕಂಠದ ಭಾಗವತಿಕೆ, ಯುವ ಭಾಗವತ ರೋಶನ್‌ ಎಸ್‌.ಕೋಟ್ಯಾನ್‌ ಅವರ ಸುಶ್ರಾವ್ಯ ಭಾಗವತಿಕೆಯೊಂದಿಗೆ ಸ್ಥಳೀಯ ಹಿಮ್ಮೇಳ ಕಲಾವಿದರಾದ ಧನಂಜಯ ಕಿನ್ನಿಗೋಳಿ, ಗಣೇಶ್‌ ಕಟೀಲು, ಅಕ್ಷಿತ್‌ ಸುವರ್ಣ ಪಾಲ್ಗೊಂಡಿದ್ದರು.

ಹಿರಿಯ ಕಲಾವಿದ ಮೋಹನ್‌ ಎಡನೀರು ನಿರ್ವಹಣೆ ಸಹಕಾರ ನೀಡಿದ್ದರು. ಘಟಕದ ಪ್ರಧಾನ ಸಂಚಾಲಕ ರಾಮಪ್ರಸಾದ್‌ ಅಮ್ಮೆನಡ್ಕ ವೇಷಭೂಷಣ ಹಾಗೂ ಸಮಗ್ರ ನಿರ್ವಹಣೆ ವಹಿಸಿದ್ದರು. ಯಕ್ಷಧ್ರುವ ಪಟ್ಲ ಫೌಂಡೇಶನ್‌ ಬಹ್ರೈನ್‌ ಸೌದಿ ಘಟಕದ ರಾಜೇಶ್‌ ಬಿ. ಶೆಟ್ಟಿಯವರು ಪ್ರಾಸ್ತಾವಿಕ ನುಡಿಯನ್ನಾಡಿದರು. ಕಮಲಾಕ್ಷ ಅಮೀನ್‌ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ನರೇಂದ್ರ ಶೆಟ್ಟಿ ವಂದನಾರ್ಪಣೆಗೈದರು.

 

Advertisement

Udayavani is now on Telegram. Click here to join our channel and stay updated with the latest news.

Next