ಕಲಬುರಗಿ: ನಗರದಲ್ಲಿ ಅಟೋರಿಕ್ಷಾಗಳಿಂದ ಉಂಟಾಗಿರುವ ವಾಯುಮಾಲಿನ್ಯ ತಗ್ಗಿಸಲು ಎಲೆಕ್ಟ್ರಿಕಲ್ ಆಟೋರಿಕ್ಷಾ ಪ್ರಾರಂಭಿಸುವ ಯೋಜನೆಗೆ ಚಿಂತಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಎಲೆಕ್ಟ್ರಿಕ್ ಆಟೋರಿಕ್ಷಾ ಪ್ರಾರಂಭಿಸಲು ಕರೆದ ಅಭಿಪ್ರಾಯ ಸಂಗ್ರಹ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಾಯೋಗಿಕವಾಗಿ ಕಲಬುರಗಿ ನಗರದಲ್ಲಿ 100 ಎಲೆಕ್ಟ್ರಿಕ್ ಆಟೋರಿಕ್ಷಾ ಪ್ರಾರಂಭಿಸಲು ಚಿಂತನೆ ನಡೆಸಲಾಗಿದೆ ಎಂದರು.
ಎಲೆಕ್ಟ್ರಿಕ್ ಆಟೋರಿಕ್ಷಾಗಳು ಬ್ಯಾಟರಿ ಚಾಲಿತವಾಗಿರುವುದರಿಂದ ಬ್ಯಾಟರಿ ರಿಚಾರ್ಜ್ ಮಾಡಲು ಕೇಂದ್ರಗಳನ್ನು ಪ್ರಾರಂಭಿಸಬೇಕಾಗುತ್ತದೆ. ಮಹಾನಗರ ಪಾಲಿಕೆಯಿಂದ ಬ್ಯಾಟರಿ ರಿಚಾರ್ಜ್ ಮಾಡುವ ಕೇಂದ್ರ ಸ್ಥಾಪಿಸಲು ಸ್ಥಳ ಗುರುತಿಸಬೇಕು. ಬ್ಯಾಟರಿ ರಿಚಾರ್ಜ್ ಮಾಡುವ ಕೇಂದ್ರಗಳನ್ನು ನಿರ್ವಹಣೆ ಮಾಡಿಕೊಂಡು ಹೋಗಲು ಟೆಂಡರ್ ಕರೆಯಬೇಕು. 100 ಎಲೆಕ್ಟ್ರಿಕ್ ಆಟೋರಿಕ್ಷಾಗಳನ್ನು ಚಾರ್ಜ ಮಾಡಲು ಬೇಕಾಗುವ ಕೇಂದ್ರಗಳ ಸಂಖ್ಯೆಯ ಬಗ್ಗೆ ವರದಿ ನೀಡಬೇಕೆಂದು ತಿಳಿಸಿದರು.
ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಡಾ| ರಾಗಪ್ರಿಯಾ. ಆರ್. ಮಾತನಾಡಿ, ಎಲೆಕ್ಟ್ರಿಕ್ ಆಟೋರಿಕ್ಷಾದಲ್ಲಿರುವ ಬ್ಯಾಟರಿ ಚಾರ್ಜ ಮಾಡಲು ಗರಿಷ್ಠ 4 ಗಂಟೆಗಳ ಸಮಯಾವಕಾಶ ಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಕಡಿಮೆ ಅವ ಧಿಯಲ್ಲಿ ಬ್ಯಾಟರಿ ಚಾರ್ಜ್ ಮಾಡುವ ಯಂತ್ರಗಳು ಬರಬಹುದು. ಒಂದು ಬ್ಯಾಟರಿ ಸಂಪೂರ್ಣವಾಗಿ ಚಾರ್ಜ್ ಆದಲ್ಲಿ ಸುಮಾರು 130 ಕಿ.ಮೀ. ಕ್ರಮಿಸಬಹುದಾಗಿದೆ ಎಂದರು. ಮಹಾನಗರ ಪಾಲಿಕೆ ಆಯುಕ್ತ ಆರ್. ಪೆದ್ದಪ್ಪಯ್ಯ, ಜಿಲ್ಲಾ ಮಟ್ಟದ ಅಧಿಕಾರಿಗಳು, ಆಟೋರಿಕ್ಷಾ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.