Advertisement

ಒಂಟಿ ಮನೆಗಳಲ್ಲಿ ಕ್ವಾರಂಟೈನ್‌ಗೆ ಚಿಂತನೆ : ಶೋಭಾ

05:58 AM May 23, 2020 | mahesh |

ಕುಂದಾಪುರ: ಕ್ವಾರಂಟೈನ್‌ ಕೇಂದ್ರಗಳಲ್ಲಿ ಕೋವಿಡ್ ಹರಡುವುದನ್ನು ತಪ್ಪಿಸುವ ಸಲುವಾಗಿ ಗ್ರಾಮೀಣ ಭಾಗದಲ್ಲಿರುವ ಒಂಟಿ ಮನೆಗಳಲ್ಲಿ ಸರಕಾರದ ನಿಯಮಾವಳಿಯಂತೆ ಕ್ವಾರಂಟೈನ್‌ಗೆ ಅವಕಾಶ ನೀಡುವಂತೆ ಅನೇಕ ಮಂದಿ ಕೇಳಿಕೊಂಡಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಸಿಎಂ ಮತ್ತು ಮುಖ್ಯ ಕಾರ್ಯದರ್ಶಿಯವರಿಗೆ ಮನವಿ ಮಾಡಿರುವುದಾಗಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

Advertisement

ಅವರು ಶುಕ್ರವಾರ ಇಲ್ಲಿನ ತಾ.ಪಂ.ನ ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ನಡೆದ ಸಮಾಲೋಚನ ಸಭೆಯಲ್ಲಿ ಮಾತನಾಡಿದರು.
ಕುಂದಾಪುರ ಮತ್ತು ಬೈಂದೂರು ತಾಲೂಕಿನ ಕ್ವಾರಂಟೈನ್‌ ಕೇಂದ್ರಗಳಲ್ಲಿ ಈಗಾಗಲೇ 4,013 ಮಂದಿ ಇದ್ದಾರೆ. ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಗಲ್ಫ್ ಮತ್ತು ಐರೋಪ್ಯ ರಾಷ್ಟ್ರಗಳಿಂದ ಬರುವವರನ್ನು ಆಯಾ ವಿಮಾನ ನಿಲ್ದಾಣಗಳ ಸಮೀಪದಲ್ಲಿಯೇ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಲಾಗುತ್ತಿದೆ. ಮಕ್ಕಳು, ವಯಸ್ಸಾದವರು ಮತ್ತು ಇತರ ಕಾಯಿಲೆ ಹೊಂದಿದವರ ಬಗ್ಗೆ ಜಾಗೃತಿ ಅಗತ್ಯ ಎಂದರು.

400 ಮಂದಿಗೆ ಪರೀಕ್ಷೆ
ಡಿಸಿ ಜಿ. ಜಗದೀಶ್‌ ಮಾತನಾಡಿ, ಜಿಲ್ಲೆಗೆ ಹೊರರಾಜ್ಯದಿಂದ 7,872 ಮಂದಿ ಬಂದಿದ್ದು, 6,800 ಮಂದಿ ಮಹಾರಾಷ್ಟ್ರದಿಂದ, 450 ಮಂದಿ ತೆಲಂಗಾಣದಿಂದ ಬಂದಿದ್ದಾರೆ. ಹೊರ ರಾಜ್ಯದಿಂದ ಬರುವ ಶೇ.10 ಮಂದಿಗೆ ಸೋಂಕು ಕಾಣಿಸಿಕೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಇದಕ್ಕಾಗಿ ಉಡುಪಿ, ಕುಂದಾಪುರ, ಉದ್ಯಾವರ ಮತ್ತು ಕಾರ್ಕಳದಲ್ಲಿ 400 ಹಾಸಿಗೆಗಳಿಗೆ ಅವಕಾಶವಿರುವ ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಕೋವಿಡ್ ಆಸ್ಪತ್ರೆಗಳಿಗಾಗಿ ಪ್ರತ್ಯೇಕ ವೈದ್ಯರು ಮತ್ತು ಸಿಬಂದಿ ನಿಯೋಜನೆ ಮಾಡಲಾಗುತ್ತಿದೆ. ಐಎಂಎ ಸಂಘಟನೆಯ ನೆರವನ್ನು ಪಡೆದುಕೊಳ್ಳಲಾಗುತ್ತದೆ. ಗಂಭೀರ ಪ್ರಕರಣಗಳ ಚಿಕಿತ್ಸೆ ಬಗ್ಗೆ 12 ತಜ್ಞ ವೈದ್ಯರ ಸಮಿತಿ ರಚಿಸಲಾಗಿದ್ದು, ಸಲಹೆ ಪಡೆದುಕೊಳ್ಳಲಾಗುತ್ತಿದೆ. ಪ್ರತಿ ದಿನ ಗರಿಷ್ಠ 400 ಮಂದಿಯ ಪರೀಕ್ಷಾ ವರದಿ ಪಡೆಯಲು ಪ್ರಯತ್ನ ಮಾಡಲಾಗುತ್ತಿದೆ. ಜಿಲ್ಲೆಯ ಬೇಡಿಕೆಗೆ ಪೂರಕವಾಗಿ 2 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾಸ್ಪತ್ರೆಯಲ್ಲಿಯೇ ಲ್ಯಾಬ್‌ ಆರಂಭಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದರು.

ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿಷ್ಣುವರ್ಧನ್‌, ಉಪ ವಿಭಾಗಾಧಿಕಾರಿ ಕೆ. ರಾಜು, ಎಎಸ್‌ಪಿ ಹರಿರಾಂ ಶಂಕರ್‌, ತಾ. ಆರೋಗ್ಯಾಧಿಕಾರಿ ಡಾ| ನಾಗಭೂಷಣ ಉಡುಪ, ತಹಶೀಲ್ದಾರ್‌ಗಳಾದ ತಿಪ್ಪೇಸ್ವಾಮಿ, ಕಿರಣ್‌ ಗೋರಯ್ಯ, ತಾ.ಪಂ. ಉಪಾಧ್ಯಕ್ಷ ರಾಮ್‌ಕಿಶನ್‌ ಹೆಗ್ಡೆ, ಜಿ.ಪಂ. ಸದಸ್ಯರು, ಬಿಜೆಪಿ ಮುಖಂಡರು, ಪುರಸಭೆ ಸದಸ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next