ಬೆಂಗಳೂರು: ಸರಕಾರಿ ಕಟ್ಟಡಗಳು ಹಾಗೂ ಖಾಸಗಿ ಮನೆಗಳ ಮೇಲ್ಛಾವಣಿಗಳ ಮೇಲೆ ಸೋಲಾರ್ ವಿದ್ಯುತ್ ಘಟಕಗಳನ್ನು ಕಡ್ಡಾಯಗೊಳಿಸಲು ಚಿಂತನೆ ನಡೆಸ ಲಾಗಿದೆ ಎಂದು ಇಂಧನ ಸಚಿವ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಎಂ. ನಾರಾಯಣ ಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸೌರಶಕ್ತಿ ಮೇಲ್ಛಾವಣಿ (ಸೋಲಾರ್ ರೂಫ್ಟಾಪ್) ಯೋಜನೆಯನ್ನು ಪ್ರೋತ್ಸಾಹಿಸಲು ಸರಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. 5 ಎಸ್ಕಾಂಗಳಲ್ಲಿ 2020-21ನೇ ಸಾಲಿನಲ್ಲಿ 233.49 ದಶಲಕ್ಷ ಯೂನಿಟ್ ಸೌರಶಕ್ತಿ ಮೇಲ್ಛಾವಣಿ ವಿದ್ಯುತ್ ಉತ್ಪಾದನೆ ಮಾಡಲಾಗಿದೆ ಎಂದರು.
ರಾಜ್ಯದಲ್ಲಿ ಸೌರನೀತಿ 2014-21ರನ್ವಯ ಒಟ್ಟು 6 ಸಾವಿರ ಮೆ.ವ್ಯಾ. ಸೌರಶಕ್ತಿ ವಿದ್ಯುತ್ ಉತ್ಪಾದಿಸುವ ಗುರಿ ಸರಕಾರದ್ದಾಗಿದೆ. ಅದರಂತೆ, 2021-22ನೇ ಸಾಲಿನಲ್ಲಿ 375 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆಯ ಗುರಿ ಇಟ್ಟುಕೊಳ್ಳಲಾಗಿದೆ. ಜುಲೈ ಅಂತ್ಯದವರೆಗೆ 48.85 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸಲಾಗಿದೆ ಎಂದರು.
ಖರೀದಿ ಪ್ರಸ್ತಾಪವಿಲ್ಲ :
ರಾಜ್ಯದ ವಿದ್ಯುತ್ ಸರಬರಾಜು ಕಂಪೆನಿಗಳಲ್ಲಿ ನವೀಕರಿಸಬಹುದಾದ ಇಂಧನ ಮೂಲಗಳಿಂದ ವಿದ್ಯುತ್ ಸೇರ್ಪಡೆ ಸಾಮರ್ಥ್ಯ 1,5193 ಮೆ.ವ್ಯಾ. ಆಗಿದ್ದು, ಇಂಧನ ಖರೀದಿ ಬಾಧ್ಯತೆ (ಪಿಆರ್‌ಒ) ಗುರಿ ಈಗಾಗಲೇ ಸಾಧಿಸಿರುವುದರಿಂದ ಬೇರೆ ಕಡೆಗಳಿಂದ ನವೀಕರಿಸಬಹುದಾದ ವಿದ್ಯುತ್ ಖರೀದಿಸುವ ಪ್ರಸ್ತಾಪ ಸರಕಾರದ ಮುಂದಿಲ್ಲ ಎಂದು ಇಂಧನ ಸಚಿವ ವಿ. ಸುನಿಲ್ ಕುಮಾರ್ ಅವರು ಜೆಡಿಎಸ್ ಸದಸ್ಯ ಬಿ.ಎಂ. ಫಾರೂಕ್ ಪ್ರಶ್ನೆಗೆ ಉತ್ತರಿಸಿದ್ದಾರೆ.