Advertisement

ಬಾಳುಗೋಡಿನಲ್ಲಿ ಕೊಡವ ಕೌಟುಂಬಿಕ ಉತ್ಸವಕ್ಕೆ ಚಿಂತನೆ

08:36 PM May 13, 2019 | Team Udayavani |

ಮಡಿಕೇರಿ: ಕರ್ನಾಟಕ ರಾಜ್ಯ ಸರಕಾರ ಬಿಡುಗಡೆ ಮಾಡಿರುವ 15 ಕೊಟಿ ರೂ. ಅನುದಾನದ ನೆರನಿಂದ ಬಾಳುಗೋಡುನಲ್ಲಿ ವ್ಯವಸ್ಥಿತವಾದ ಹಾಕಿ ಸ್ಟೇಡಿಯಂ ನಿರ್ಮಾಣ ಮಾಡುವ ಮೂಲಕ, ಮುಂಬರುವ ವರ್ಷಗಳಲ್ಲಿ ಕೊಡವ ಕುಟುಂಬಗಳ ಹಾಕಿ ಉತ್ಸವವನ್ನು ಅಲ್ಲೇ ನಡೆಸುವ ಕುರಿತಾಗಿ ಕೊಡವ ಸಮಾಜಗಳ ಒಕ್ಕೂಟ ಮತ್ತು ಕೊಡವ ಹಾಕಿ ಅಕಾಡೆಮಿಯ ಜಂಟಿ ಸಭೆಯಲ್ಲಿ ಸುದೀರ್ಘ‌ವಾಗಿ ಚರ್ಚಿಸಲಾಯಿತು.

Advertisement

ಬಾಳುಗೋಡುನಲ್ಲಿರುವ ಒಕ್ಕೂಟದ ಸಭಾಂಗಣದಲ್ಲಿ ಒಕ್ಕೂಟದ ಅಧ್ಯಕ್ಷರಾದ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚೆಗಳಿಂದ ಹೊರಬಂದ ಸಲಹೆ ಸೂಚನೆಗಳನ್ನು ಕ್ರೋಡೀಕರಿಸಿ, ಕೊಡವ ಹಾಕಿ ಅಕಾಡೆಮಿಯ ಮುಂದಿನ ಜುಲೈ ತಿಂಗಳಿನ ವಿಶೇಷ ಮಹಾ ಸಭೆಯಲ್ಲಿ ಎಲ್ಲ ಕೊಡವ ಕುಟುಂಬಗಳ ಪ್ರತಿನಿಧಿಗಳನ್ನು, ತೀರ್ಪುಗಾರರ ಸಂಘದ ಪ್ರತಿನಿಧಿಗಳನ್ನು ಸೇರಿಸಿ ಚರ್ಚಿಸಿ ನಿರ್ಣಯವನ್ನು ಕೈಗೊಳ್ಳಲು ನಿರ್ಧರಿಸಲಾಯಿತು.

ಸಭಾಧ್ಯಕ್ಷತೆ ವಹಿಸಿದ್ದ ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷರಾದ ವಿಷ್ಣು ಕಾರ್ಯಪ್ಪ ಅವರು ಮಾತನಾಡಿ, ಸರಕಾರದಿಂದ ಬಿಡುಗಡೆಯಾದ 15 ಕೋಟಿ ಅನುದಾನಕ್ಕೆ ಅನುಗುಣವಾಗಿ ಕ್ರಿಯಾಯೋಜನೆ ರೂಪಿಸಿ, ಬಾಳು ಗೋಡುನಲ್ಲಿ ಹಾಕಿ ಸ್ಟೇಡಿಯಂ ಮತ್ತು ಫೆಲಿಯನ್‌ ಪೂರ್ಣಗೊಳಿಸಿ, 2020ರಲ್ಲಿ ಹಾಕಿ ಉತ್ಸವದ ಆತಿಥ್ಯ ವಹಿಸಿರುವ ಹರಿಹರ ಮುಕ್ಕಾಟಿರ ಕುಟುಂಬಸ್ಥರಿಗೆ ಕೌಟುಂಬಿಕ ಹಾಕಿ ಉತ್ಸವ ನಡೆಸಲು ಅನುವು ಮಾಡಿಕೊಡಬೇಕೆನ್ನುವ ಆಶಯ ವನ್ನು ವ್ಯಕ್ತಪಡಿಸಿದರು.

ಕೊಡವ ಹಾಕಿ ಅಕಾಡೆಮಿ ಉಪಾಧ್ಯ ಕ್ಷರಾದ ಕಲಿಯಂಡ ನಾಣಯ್ಯ ಮಾತ ನಾಡಿ, ಕೊಡವ ಕೌಟುಂಬಿಕ ಹಾಕಿ ಉತ್ಸವವನ್ನು ಬಾಳುಗೋಡುನಲ್ಲಿ ನಡೆ ಸಲು ಅಕಾಡೆಮಿ ಇಚ್ಛಿಸುತ್ತದೆ. ಆದರೆ, ಈ ವಿಚಾರವನ್ನು ಮುಂದಿನ ವರ್ಷಗಳಲ್ಲಿ ಉತ್ಸವವನ್ನು ನಡೆಸುವ ಕುಟುಂಬಗಳ ಜತೆ ಚರ್ಚಿಸಿ ಹಾಗೂ ಅಕಾಡೆಮಿಯ ವಿಶೇಷ ಮಹಾಸಭೆಯನ್ನು ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವ ಅಭಿಪ್ರಾಯ ವ್ಯಕ್ತಪಡಿಸಿದರು.

ಒಕ್ಕೂಟದ ಪದಾಧಿಕಾರಿಗಳು ಕಳೆದ ಸಾಲಿನಲ್ಲಿ ಮಾಜಿ ಪ್ರಧಾನ ಮಂತ್ರಿ ಹೆಚ್‌.ಡಿ. ದೇವೆಗೌಡರನ್ನು ಭೇಟಿ ಯಾಗಿ, ಹಣಕಾಸಿನ ಕೊರತೆಯಿಂದಾಗಿ ಬಾಳುಗೋಡಿನ ಒಕ್ಕೂಟದ ಆವರಣದಲ್ಲಿ ಕ್ರೀಡೆ ಮತ್ತು ಕಲಾ ಚಟುವಟಿಕೆಗಳ ಆಯೋಜನೆಗೆ ಸುಸಜ್ಜಿತವಾದ ಕ್ರೀಡಾಂ ಗಣ ಇಲ್ಲದಿರುವುದರಿಂದ ವರ್ಷಂಪ್ರತಿ ಕೊಡವ ಕೌಟುಂಬಿಕ ಹಾಕಿ ಉತ್ಸವವನ್ನು ನಡೆಸುವಾಗ ಸಮಸ್ಯೆಗಳಾಗುತ್ತಿದ್ದವು.ಸಭೆಯಲ್ಲಿ ಒಕ್ಕೂಟದ ಕಾರ್ಯಕಾರಿ ಮಂಡಳಿಯವರು, ಕೊಡವ ಸಮಾಜದ ಎಲ್ಲ ಅಧ್ಯಕ್ಷರುಗಳು, ಕೊಡವ ಹಾಕಿ ಅಕಾಡೆಮಿಯ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.

Advertisement

ಹೆಮ್ಮೆಯ ವಿಚಾರ
ಕೊಡವ ಸಮಾಜಗಳ ಒಕ್ಕೂಟದ ಸ್ಥಾಪಕರ ಮೇರಿಯಂಡ ಸಿ. ನಾಣಯ್ಯ ಅವರು ಮಾತನಾಡಿ,ಕೊಡವ ಯುವ ಸಮೂಹದಲ್ಲಿನ ಕ್ರೀಡೆ,ಕಲೆ,ಸಾಂಸ್ಕೃತಿಕ ಪ್ರತಿಭೆಗಳನ್ನು ಗುರುತಿಸಿ,ಪೋತಾಹ್ಸಿಸುವ ಮತ್ತು ಅವರ ಸರ್ವಾಂಗೀಣ ಏಳಿಗೆಗೆ ಶ್ರಮಿಸುವ ಕೇಂದ್ರವಾಗಿ ಒಕ್ಕೂಟವನ್ನು ಸ್ಥಾಪನೆ ಮಾಡಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಕೊಡವ ಕೌಟುಂಬಿಕ ಹಾಕಿ ಉತ್ಸವವು ರಾಜ್ಯ ರಾಷ್ಟ್ರ ಮಟ್ಟದಲ್ಲಿ ಪ್ರಖ್ಯಾತಿಯನ್ನು ಪಡೆದಿದ್ದು, ಲಿಮ್ಕಾ ಬುಕ್‌ ಆಫ್ ರೆಕಾರ್ಡ್‌ನಲ್ಲಿ ದಾಖಲಾಗಿರುವುದು ಹೆಮ್ಮೆಯ ವಿಚಾರವೆಂದರು.

Advertisement

Udayavani is now on Telegram. Click here to join our channel and stay updated with the latest news.

Next