ಬೆಂಗಳೂರು: ರಾಜ್ಯ ವಿಧಾನ ಮಂಡಲದ ಮಳೆಗಾಲದ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸುವ ಕುರಿತು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.
ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಅಧ್ಯಕ್ಷತೆಯ ವಿಶೇಷ ಮಂಡಳಿಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ವಿಧಾನ ಪರಿಷತ್ ಸಭಾಪತಿ ಪ್ರತಾಪ್ ಚಂದ್ರಶೆಟ್ಟಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಈ ಬಗ್ಗೆ ಚರ್ಚೆ ನಡೆಸಿದ್ದಾರೆಂದು ತಿಳಿದು ಬಂದಿದೆ.
ಜುಲೈ ಎರಡನೇ ವಾರದಲ್ಲಿ ಬಜೆಟ್ ಮುಂದುವರೆದ ಅಧಿವೇಶನ ನಡೆಸುವ ಕುರಿತು ದಿನಾಂಕ ನಿಗದಿ ಮಾಡಲು ಮುಖ್ಯಮಂತ್ರಿಗೆ ಸಂಪುಟ ಅಧಿಕಾರ ನೀಡಿದೆ. ಬೆಳಗಾವಿಯಲ್ಲಿ ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ಚಳಿಗಾಲದ ಅಧಿವೇಶನ ನಡೆಸುವುದರಿಂದ
-ಉ.ಕ. ಭಾಗದಲ್ಲಿ ಕಬ್ಬು ಕಟಾವು ನಡೆಯುವುದರಿಂದ ಕಬ್ಬು ಬೆಳೆಗಾರರು ಬೆಲೆ ನಿಗದಿ ಮಾಡುವ ಕುರಿತು ಪ್ರತಿಭಟನೆ ನಡೆಸಿದರೆ ಸುಗಮ ಕಲಾಪ ನಡೆಸಲು ತೊಂದರೆಯಾಗುತ್ತದೆ ಎನ್ನುವ ಕಾರಣಕ್ಕೆ ಆ ಭಾಗದ ಶಾಸಕರು ಮಳೆಗಾಲದ ಅಧಿವೇಶವನ್ನೇ ಬೆಳಗಾವಿಯಲ್ಲಿ ಮಾಡಬೇಕು ಎಂದು ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಮಳೆಗಾಲದ ಅಧಿವೇಶನ ನಡೆಸುವ ಕುರಿತಂತೆ ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.