Advertisement

ಹೆದ್ದಾರಿ ನಿರ್ಮಾಣಕ್ಕೆ ಕೆರೆ‌ ಮಣ್ಣು ಬಳಸಲು ಚಿಂತನೆ

06:44 AM Jan 25, 2019 | Team Udayavani |

ಮಂಡ್ಯ: ಹೂಳಿನಿಂದ ತುಂಬಿರುವ ಜಿಲ್ಲೆಯ ಬಹಳಷ್ಟು ಕೆರೆಗಳಿಗೆ ಹೊಸ ಕಾಯಕಲ್ಪ ನೀಡುವುದಕ್ಕೆ ಜಿಲ್ಲಾ ಪಂಚಾಯಿತಿ ಮುಂದಾಗಿದೆ. ಬೆಂಗಳೂರು- ಮೈಸೂರು ಹೆದ್ದಾರಿ ರಸ್ತೆಗೆ ಅವಶ್ಯವಿರುವ ಮಣ್ಣನ್ನು ಕೆರೆಗಳಿಂದಲೇ ಒದಗಿಸಿ ಕೆರೆಗಳ ಜೀರ್ಣೋದ್ಧಾರಗೊಳಿಸುವ ಹೊಸ ಮಾರ್ಗವನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿದೆ.

Advertisement

ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ವಿಭಾಗ, ಕಾವೇರಿ ನೀರಾವರಿ ನಿಗಮ ಹಾಗೂ ಸಣ್ಣ ನೀರಾವರಿ ಇಲಾಖೆಗೆ ಸೇರಿದ ನೂರಾರು ಕೆರೆಗಳು ನೀರಿಲ್ಲದೆ ಬರಿದಾಗಿರುವುದಲ್ಲದೆ, ತನ್ನ ಒಡಲಲ್ಲಿ ಭರ್ತಿ ಹೂಳನ್ನು ತುಂಬಿಕೊಂಡಿವೆ. ಹಿಂದಿನ ಸರ್ಕಾರಗಳು ಕೆರೆಗಳ ಹೂಳೆತ್ತುವುದಕ್ಕೆ ಯೋಜನೆಯನ್ನು ರೂಪಿಸಿ ಕೋಟ್ಯಂತರ ರೂ. ಹಣ ಖರ್ಚು ಮಾಡಿದ್ದರೂ ನಿರೀಕ್ಷಿತ ಮಟ್ಟದ ಯಶಸ್ಸು ಕಂಡಿಲ್ಲ. ಇದೀಗ ಕೆರೆಗಳ ಮಣ್ಣನ್ನು ಹೆದ್ದಾರಿ ಕಾಮಗಾರಿಗೆ ನೀಡುವ ಮೂಲಕ ಅದರೊಳಗಿನ ಹೂಳೆತ್ತಲು ಆಲೋಚಿಸುತ್ತಿದೆ.

ರೈತರಿಂದ ಮಣ್ಣು ಖರೀದಿ ಇಲ್ಲ: ಮದ್ದೂರು ತಾಲೂಕಿನ 109, ಮಂಡ್ಯ ತಾಲೂಕಿನ 19 ಹಾಗೂ ಶ್ರೀರಂಗಪಟ್ಟಣ ತಾಲೂಕಿನ 8 ಕೆರೆಗಳಲ್ಲಿ ಹೂಳು ತೆಗೆಯುವುದಕ್ಕೆ ಅವಕಾಶ ಮಾಡಿಕೊಡಲು ಕೆರೆಗಳನ್ನು ಗುರುತಿಸಲಾಗಿದೆ. ಇದುವರೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಹೆದ್ದಾರಿಗಳನ್ನು ನಿರ್ಮಿಸುವ ವೇಳೆ ಅಗತ್ಯವಿರುವ ಮಣ್ಣನ್ನು ಗುತ್ತಿಗೆದಾರರು ರೈತರಿಂದಲೇ ಕೊಂಡುಕೊಳ್ಳುತ್ತಿದ್ದರು.

ಆದರೆ, ಕೆರೆಯ ಮಣ್ಣನ್ನು ಬಳಕೆ ಮಾಡಿಕೊಂಡಲ್ಲಿ ಆ ಮಣ್ಣು ಹೆದ್ದಾರಿ ನಿರ್ಮಾಣದ ಉಪಯೋಗಕ್ಕೆ ಬಳಕೆಯಾಗುವುದಲ್ಲದೆ, ಕೆರೆಯಲ್ಲಿ ತುಂಬಿರುವ ಹೂಳು ಖಾಲಿಯಾಗಿ ಹೆಚ್ಚಿನ ನೀರು ಶೇಖರಿಸಲು ಸಾಮರ್ಥ್ಯ ವೃದ್ಧಿಸಿಕೊಂಡಂತಾ ಗುತ್ತದೆ.

ನೀರು ಶೇಖರಣಾ ಸಾಮರ್ಥ್ಯ ಕುಂಠಿತ: ಜಿಲ್ಲೆಯ ಬಹಳಷ್ಟು ಕೆರೆಗಳು ಹೂಳಿನಿಂದ ತುಂಬಿರುವುದರಿಂದ ನೀರಿನ ಶೇಖರಣಾ ಸಾಮರ್ಥ್ಯ ಕುಂಠಿತಗೊಂಡಿದೆ. ಬಹಳಷ್ಟು ಕೆರೆಗಳು ಭರ್ತಿಗೆ ಮಳೆಯನ್ನೇ ಅವಲಂಬಿ ಸಿವೆ. ಜಿಲ್ಲೆಯಲ್ಲಿ ವಿಶ್ವೇಶ್ವರಯ್ಯ ನಾಲೆ ಹಾದು ಹೋಗಿದ್ದರೂ ನಾಲೆಗಳಿಂದ ಕೆರೆಗಳಿಗೆ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಇಲ್ಲದಿರುವುದರಿಂದ ಕೆರೆಗಳ ಪುನಶ್ಚೇತನ ಈವರೆಗೂ ಸಾಧ್ಯವಾಗಿಲ್ಲ. ಇಂದಿಗೂ ಕೆರೆಗಳು ಹೂಳು ತುಂಬಿಕೊಂಡು ಬರಡಾಗಿ ನಿಂತಿವೆ.

Advertisement

ಬಳಕೆಯಾಗದ ಕೆರೆ ಮಣ್ಣು: ಹಿಂದೆಲ್ಲಾ ಬೇಸಿಗೆ ಬಂದ ಸಮಯದಲ್ಲೆಲ್ಲಾ ಗ್ರಾಮೀಣ ಜನರೆಲ್ಲರೂ ಸೇರಿಕೊಂಡು ಕೆರೆಯ ಮಣ್ಣನ್ನು ಎತ್ತಿನ ಗಾಡಿಗಳ ಮೂಲಕ ಜಮೀನುಗಳಿಗೆ ಕೊಂಡೊಯ್ಯುತ್ತಿದ್ದರು. ಹೊಲ, ಗದ್ದೆ, ತೋಟಗಳಿಗೆ ಹೊಸ ಮಣ್ಣು ಹಾಕಿಕೊಂಡು ಭೂಮಿಯ ಫ‌ಲವತ್ತತೆಯನ್ನು ಹೆಚ್ಚಿಸಿಕೊಳ್ಳುವ ಕಾಯಕದಲ್ಲಿ ನಿರತರಾಗಿದ್ದರು. ಕೆರೆಯ ಮಣ್ಣು ಕೃಷಿ ಭೂಮಿಗೆ ಶ್ರೇಷ್ಠವಾದುದು ಎಂಬ ಭಾವನೆ ಅವರಲ್ಲಿತ್ತು. ಇತ್ತೀಚಿನ ದಿನಗಳಲ್ಲಿ ಕೃಷಿಯಲ್ಲಿ ತೊಡಗುವವರ ಸಂಖ್ಯೆಯೇ ಕಡಿಮೆಯಾಗಿರುವುದರಿಂದ ಕೆರೆಯ ಮಣ್ಣು ಕೆರೆಯಲ್ಲೇ ಉಳಿಯುವಂತಾಗಿದೆ. ಆ ಮಣ್ಣನ್ನು ಕೃಷಿ ಭೂಮಿಗೆ ಸಾಗಿಸಲು ಇಂದಿನವರು ಮನಸ್ಸು ಮಾಡುತ್ತಿಲ್ಲ. ಬಹುತೇಕ ಕೃಷಿ ಭೂಮಿಗಳು ಪಾಳು ಬಿದ್ದಿದ್ದು, ಕೆರೆಗಳು ಜೊಂಡು, ಕಸ-ಕಡ್ಡಿ, ಹೂಳಿನಿಂದ ತುಂಬಿಕೊಂಡು ಅನಾಥವಾಗಿ ಉಳಿದುಕೊಂಡಿವೆ.

ನೀರು ಶೇಖರಣಾ ಸಾಮರ್ಥ್ಯ ವೃದ್ಧಿ: ಈ ಕಾರಣದಿಂದ ಹೆದ್ದಾರಿ ನಿರ್ಮಾಣ ಕಾರ್ಯಕ್ಕೆ ಕೆರೆಯ ಮಣ್ಣನ್ನು ಬಳಸಿಕೊಳ್ಳುವ ಪ್ರಯತ್ನದಿಂದ ಜಿಲ್ಲೆಯ ಸುಮಾರು 136 ಕೆರೆಗಳಲ್ಲಿ ತುಂಬಿರುವ ಹೂಳನ್ನು ಹೊರತೆಗೆದಂತಾಗುವುದು. ಇದರ ಜೊತೆಯಲ್ಲೇ ಕೆರೆಗಳ ನೀರು ಶೇಖರಣಾ ಸಾಮರ್ಥ್ಯವೂ ವೃದ್ಧಿಸಲಿದೆ ಎನ್ನುವುದು ಪಂಚಾಯತ್‌ ರಾಜ್‌ ಇಲಾಖೆ ಅಧಿಕಾರಿಗಳು ಹೇಳುವ ಮಾತು.

ಜಿಲ್ಲೆಯಲ್ಲೇ ಮದ್ದೂರು ತಾಲೂಕಿನಲ್ಲಿ ಅತಿ ಹೆಚ್ಚು 109 ಕೆರೆಗಳ ಮಣ್ಣನ್ನು ತೆಗೆಯುವುದಕ್ಕೆ ಗುರುತಿಸ ಲಾಗಿದೆ. ಈಗಾಗಲೇ ಮಂಡ್ಯ, ಶ್ರೀರಂಗಪಟ್ಟಣ, ಮದ್ದೂರು ತಾಲೂಕುಗಳು ಬರಪೀಡಿತ ಪ್ರದೇಶಗಳೆಂದು ಘೋಷಿಸಿರುವುದರಿಂದ ಬರ ಪರಿಹಾರ ಕಾಮಗಾರಿಯಡಿ ಕೆರೆಗಳ ಹೂಳೆತ್ತುವುದಕ್ಕೂ ಇದು ನೆರವಾಗಲಿದೆ.

ಆದಾಯಕ್ಕೆ ಪಂಚಾಯಿತಿಗಳ ಆಲೋಚನೆ: ಕೆರೆಗಳಲ್ಲಿ ತುಂಬಿರುವ ಮಣ್ಣನ್ನು ಹೆದ್ದಾರಿ ನಿರ್ಮಾಣ ಕಾಮಗಾರಿಗೆ ನೀಡಲು ಜಿಲ್ಲಾ ಪಂಚಾಯಿತಿ ತೀರ್ಮಾನ ಕೈಗೊಳ್ಳುವ ಹಂತದಲ್ಲಿದೆ. ಇದೇ ವೇಳೆ ಕೆರೆಗಳಿಂದ ಹೊರತೆಗೆಯುವ ಮಣ್ಣಿನಿಂದ ಆದಾಯ ಸೃಷ್ಟಿಸಿಕೊಳ್ಳುವುದಕ್ಕೂ ಗ್ರಾಮ ಪಂಚಾಯಿತಿಗಳು ಆಲೋಚನೆ ನಡೆಸುತ್ತಿವೆ.

ಹೆದ್ದಾರಿ ನಿರ್ಮಾಣ ಗುತ್ತಿಗೆದಾರರು ರೈತರಿಂದ ಪಡೆದುಕೊಳ್ಳುತ್ತಿದ್ದ ಮಣ್ಣಿಗೆ ಹಣ ನೀಡುತ್ತಿದ್ದ ಮಾದರಿಯಲ್ಲೇ ಪಂಚಾಯಿತಿಗೂ ಹಣ ಪಾವತಿಸಿ ಮಣ್ಣನ್ನು ಪಡೆದುಕೊಳ್ಳಲಿ. ಇದರಿಂದ ಪಂಚಾಯಿತಿ ಮೂಲ ಸೌಕರ್ಯಗಳಿಗೆ ಆದಾಯ ಸೃಷ್ಟಿಸಿಕೊಂಡಂತಾಗುತ್ತದೆ ಎಂಬ ಅಭಿಪ್ರಾಯವನ್ನು ಜನಪ್ರತಿನಿಧಿಗಳು ಮಂಡಿಸುತ್ತಿದ್ದಾರೆ.

* ಮಂಡ್ಯ ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next