Advertisement

ಹಳೆಯ ವಾಹನಗಳ ನಿಷೇಧಕ್ಕೆ ಚಿಂತನೆ

12:18 PM Dec 18, 2018 | Team Udayavani |

ಸುವರ್ಣಸೌಧ(ವಿಧಾನಸಭೆ): ಹದಿನೈದು ವರ್ಷಕ್ಕಿಂತ ಹಳೆಯ ವಾಹನಗಳನ್ನು ನಿಷೇಧಿಸುವ ಸಂಬಂಧ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದ್ದಾರೆ.

Advertisement

ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆ ಬಗ್ಗೆ ಬಿಜೆಪಿ ಶಾಸಕರು ಪ್ರಸ್ತಾಪಿಸಿದ ವಿಚರಗಳಿಗೆ ಪ್ರತಿಕ್ರಿಯಿಸಿದ ಅವರು, ಬೆಂಗಳೂರಿನ ಸಮಸ್ಯೆ ಸಾರಿಗೆ ಇಲಾಖೆಗೆ ಮಾತ್ರ ಸೀಮಿತವಾಗಿಲ್ಲ. ಬಿಬಿಎಂಪಿ, ನಗರಾಭಿವೃದ್ಧಿ ಇಲಾಖೆ ಹೀಗೆ ಮೂರ್‍ನಾಲ್ಕು ಇಲಾಖೆಗಳು ಒಂದಾಗಿ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.

ಜಾಗೃತಿ ಅಗತ್ಯ: ನಗರದ ಜನಸಂಖ್ಯೆ ಬೆಳೆಯುತ್ತಿದೆ. ಒಂದೊಂದು ಮನೆಯಲ್ಲಿ ಮೂರ್‍ನಾಲ್ಕು ಕಾರುಗಳಿವೆ. ಹೊಸ ವಾಹನ ನೋಂದಣಿ ನಿಷೇಧಿಸಲು ಸಾಧ್ಯವಿಲ್ಲ. ಹೀಗೆ ಮಾಡಿದರೆ ಹೈಕೋರ್ಟ್‌ನಿಂದ ತಡೆಯಾಜ್ಞೆ ತರುತ್ತಾರೆ. ಪೆಟ್ರೋಲ್‌ ಜತೆ ಸೀಮೆಎಣ್ಣೆ ಹಾಕಿ ಆಟೋ ಓಡಿಸುವುದು ಹೆಚ್ಚಾಗುತ್ತಿದೆ. ನಗರದಲ್ಲಿ ಸಂಭವಿಸಿದ 4800 ಪ್ರಾಣಹಾನಿಗೆ ಸಂಚಾರದಟ್ಟಣೆ ಹಾಗೂ ರಸ್ತೆ ಅಪಘಾತಗಳು ಕಾರಣ 198 ವಾರ್ಡ್‌ನ ಸದಸ್ಯರು, ಶಾಸಕರು, ಸಂಸದರು ಸೇರಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

 ಮಾಲಿನ್ಯ ತಪಾಸಣೆಗಾಗಿ ಹೊಸ ಕಾಯ್ದೆಯನ್ನು ಜಾರಿಗೆ ತಂದಿದ್ದೇವೆ. ವಿದ್ಯಾರ್ಥಿಗಳ ರಿಯಾಯಿತಿ ದರದ ಪಾಸ್‌ಗಳಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಶೇ.75ರಷ್ಟು ಹಾಗೂ ವಿದ್ಯಾರ್ಥಿಗಳಿಂದ ಶೇ.25ರಷ್ಟು ಹಣ ಸಂಗ್ರಸುತ್ತಿದ್ದೇವೆ. ಸಾರಿಗೆ ಇಲಾಖೆ 650 ಕೋಟಿ ರೂ. ನಷ್ಟದಲ್ಲಿದೆ ಎಂದರು.

ರೇಸ್‌ ಕೋರ್ಸ್‌ ಮುಚ್ಚಲು ಸಲಹೆ: ಈ ಸಂದರ್ಭದಲ್ಲಿ ಬಿಜೆಪಿಯ ಆರ್‌. ಅಶೋಕ್‌, ಬೆಂಗಳೂರಿನಲ್ಲಿ 300 ಮಾರ್ಗಗಳಲ್ಲಿ ಬಸ್‌ಗಳು ಸಂಚರಿಸುತ್ತಿಲ್ಲ. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸಾರಿಗೆ ಹೆಚ್ಚು ಮಾಡಲೇಬೇಕು. ಲಾಭನಷ್ಟ ನೋಡುವುದು ಸರಿಯಲ್ಲ. ಆಟೋ ನಿಷೇಧ ಬದಲಿಗೆ ರೇಸ್‌ಕೋರ್ಸ್‌, ಗಾಲ್ಫ್ ಕ್ಲಬ್‌ ಮುಚ್ಚುವುದು ಒಳ್ಳೆಯದು ಎಂದರು. ಇದಕ್ಕೆ ಆಡಳಿತ ಪಕ್ಷದ ಸದಸ್ಯರಾದ ಅನ್ನದಾನಿ ಹಾಗೂ ಬೈರತಿ ಸುರೇಶ್‌ ಮೊದಲಾದವರು ಧ್ವನಿಗೂಡಿಸಿ, ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಲಾಭನಷ್ಟ ಮುಖ್ಯವಲ್ಲ ಎಂದು ಹೇಳಿದರು.

Advertisement

ನಂತರ ಪ್ರತಿಕಿಕ್ರಿಯಿಸಿದ ಸಚಿವ ಡಿ.ಸಿ.ತಮ್ಮಣ್ಣ, ಮೂರು ಸಾವಿರ ಬಸ್‌ಗೆ ಸರ್ಕಾರ ಅನುಮೋದನೆ ನೀಡಿದ್ದರೂ, ಹಸಿರು ನ್ಯಾಯಪೀಠ ಅವಕಾಶ ನೀಡುತ್ತಿಲ್ಲ. ಬಿಎಂಟಿಸಿಯಿಂದ 250 ಕೋಟಿ ನಷ್ಟವಾಗಿದೆ. ಮೆಟ್ರೋ ಮತ್ತು ಬಿಎಂಟಿಸಿ ಸೇವೆ ಜೋಡಿಸುವ ಕೆಲಸ ಆಗುತ್ತಿಲ್ಲದೆ. ಮಿನಿ ಬಸ್‌ಗಳಿಂದ ನಷ್ಟ ಜಾಸ್ತಿ ಎಂದು ಹೇಳಿದರು.

ವ್ಯಾಪಕ ಚರ್ಚೆ: ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಿವಾರಣೆ, ಸಾಮೂಹಿಕ ಸಾರಿಗೆ ಉತ್ತೇಜನದ ಅನಿವಾರ್ಯತೆ ಹಾಗೂ ವಾಹನ ನಿಲುಗಡೆ ಸಮಸ್ಯೆಯಿಂದ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ಸದನದಲ್ಲಿ ಸೋಮವಾರ ವ್ಯಾಪಕ ಚರ್ಚೆ ನಡೆಯಿತು.

ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌, ಮಾಜಿ ಸಚಿವರಾದ ಸುರೇಶ್‌ ಕುಮಾರ್‌, ಸೋಮಣ್ಣ ಸೇರಿದಂತೆ ಪಕ್ಷಾತೀತವಾಗಿ ನಗರದ ಬಹುತೇಕ ಶಾಸಕರು ಬೆಂಗಳೂರಿನಲ್ಲಿನ ಸಂಚಾರದಟ್ಟಣೆ ದಿನೇದಿನೆ ಉಲ್ಬಣವಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿ, ಇದಕ್ಕೆ ಪರಿಹಾರ ಕಂಡಕೊಳ್ಳದೇ ಇದ್ದರೆ ನಗರದಲ್ಲಿ ನೆಮ್ಮದಿಯ ಜೀವನ ಅಸಾಧ್ಯ ಎಂದು ಹೇಳಿದರು.

ವಿಷಯ ಪ್ರಸ್ತಾಪಿಸಿದ ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌, ವಾಹ‌ ದಟ®rಣೆ ಹೆಚ್ಚುತ್ತಿರುವುದರಿಂದ ಬೆಂಗಳೂರು ಕಲುಷಿತ ನಗರವಾಗುತ್ತಿದೆ. ವೈಟ್‌ಫೀಲ್ಡ್‌ನಿಂದ ಬೆಂಗಳೂರಿನ ಹೃದಯಭಾಗಕ್ಕೆ ಬರಲು ಎರಡು ಗಂಟೆ ಬೇಕಾಗುತ್ತದೆ. ಬೆಂಗಳೂರಿಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಕೂಡ ವಾಹನ ದಟ್ಟಣೆಗೆ ಕಾರಣವಾಗುತ್ತಿದೆ. ಇದಕ್ಕೆ ಸರ್ಕಾರದಿಂದ ಯಾವ ಕ್ರಮ ತೆಗೆದುಕೊಳ್ಳಲಾಗಿದೆ? ಎಂದು ಕಳವಳ ವ್ಯಕ್ತಪಡಿಸಿದರು.

ಮಾಜಿ ಸಚಿವ ವಿ. ಸೋಮಣ್ಣ ಮಾತನಾಡಿ, ಅಧಿಕಾರಿಗಳು ಇಚ್ಛಾಶಕ್ತಿ ಕೊರತೆ ಹಾಗೂ ದೂರದೃಷ್ಟಿ ಇಲ್ಲದೇ ಕೂಪಮಂಡೂಕಗಳಾಗಿದ್ದಾರೆ. ರಿಂಗ್‌ರಸ್ತೆ, ಸಮುದಾಯಕೇಂದ್ರಗಳನ್ನು ಮಾನದಂಡಲ್ಲದೇ ನಿರ್ಮಿಸುತ್ತಿದ್ದೇವೆ. ಜನಪ್ರತಿನಿಧಿಗಳಲ್ಲಿ ಅಸಡ್ಡೆ ಹೆಚಾಗುತ್ತಿದ್ದು, ಅಧಿಕಾರಿಗಳಲ್ಲಿ ಕಾರ್ಯವೈಖರಿಯ ಬದ್ಧತೆಯೂ ಕುಂಠಿತವಾಗುತ್ತಿದೆ ಎಂದು ಹೇಳಿದರು.

ಬೆಂಗಳೂರು ನಗರಕ್ಕಾಗಿ ನಿರ್ಮಿಸಿದ್ದ ಮಾಸ್ಟರ್‌ ಪ್ಲಾನ್‌ ಎಲ್ಲಿ ಹೋಗಿದೆ? ಎಲ್ಲ ರೀತಿಯ ಸೌಲಭ್ಯ ಇಲ್ಲಿದೆ. ಆದರೆ ಸರ್ಕಾರಿ ಆಸ್ಪತ್ರೆಗೆ ಹೋಗದ ಪರಿಸ್ಥಿತಿ ಇದೆ. ಲಾಲ್‌ಬಾಗ್‌, ಕಬ್ಬನ್‌ಪಾರ್ಕ್‌ ಬಿಟ್ಟರೇ ಹಸಿರು ಕಾಣುವುದಿಲ್ಲ. ಎಲ್ಲ ಇಲಾಖೆಯ ಸಮನ್ವಯದಿಂದ ಮಾಲಿನ್ಯ ನಿಯಂತ್ರಣ ಮಾಡಬೇಕು. ಸ್ಯಾಟಲೈಟ್‌ ಬಸ್‌ ನಿಲ್ದಾಣ ಮಾದರಿಯಲ್ಲಿ ನಗರದ ನಾಲ್ಕು ಭಾಗದಲ್ಲಿ ಬಸ್‌ನಿಲ್ದಾಣ ಮಾಡಿ ಸಂಚಾರ ದಟ್ಟಣಿಗೆ ಕಡಿವಾಣ ಹಾಕಬಹುದು ಎಂದರು.

ಮಾಜಿ ಸಚಿವ ಸುರೇಶ್‌ ಕುಮಾರ್‌ ಮಾತನಾಡಿ, ಬೆಂಗಳೂರಿನ ಟ್ರಾಫಿಕ್‌ ಸಮಸ್ಯೆಯಿಂದ ಹೆಚ್ಚಿನ ಪ್ರದೇಶಗಳು ಪರಿಸರ ಮಾಲಿನ್ಯದ ಸ್ಥಿತಿಮೀರಿ ಹೋಗಿವೆ. ಬಿಬಿಎಂಪಿ, ಬಿಎಂಟಿಸಿ ಮೊದಲಾದ ಸಂಸ್ಥೆಗಳು ಪರಿಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡುವ ಬದಲಿಗೆ ಒಬ್ಬರನ್ನೊಬ್ಬರು ದೂಷಿಸಿಕೊಂಡು ಕೆಲಸ ಮಾಡುತ್ತಿವೆ. ಇದಕ್ಕೆ ಸಮನ್ವಯ ಸಮಿತಿ ಅಗತ್ಯವಿದೆ ಎಂದು ಹೇಳಿದರು.

ವಾಹನ ದಟ್ಟಣೆ ಕಡಿಮೆ ಮಾಡಲು ಸಾರ್ವಜನಿಕ ವ್ಯವಸ್ಥೆಯನ್ನು ಬಲಪಡಿಸಬೇಕು. ಬಸ್‌ ದರ ಹೆಚ್ಚಿಸಬಾರದು, ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ನೀಡಿ, ಅದರ ಹಣವನ್ನು ಬಸ್‌ಟಿಕೆಟ್‌ ಮೂಲಕ ವಸೂಲಿ ಮಾಡುವುದನ್ನು ನಿಲ್ಲಿಸಬೇಕು. ಬೆಂಗಳೂರು ಕಮ್ಯೂಟರ್‌ ರೈಲು ವ್ಯವಸ್ಥೆಯನ್ನು ಸಮರ್ಪಕಗೊಳಿಸಬೇಕು. ಪಾರ್ಕಿಂಗ್‌ ನೀತಿ ಜಾರಿಗೆ ತರಬೇಕು.
-ಡಾ.ಸಿ.ಎನ್‌.ಅಶ್ವತ್ಥ್ ನಾರಾಯಣ, ಶಾಸಕ 

ನಗರದ ಪ್ರಮುಖ ಬಡಾವಣೆಗಳಿಗೆ ಬಿಎಂಟಿಸಿ ಬಸ್‌ಗಳು ಹೋಗುತ್ತಿಲ್ಲ ಹೀಗಾಗಿ ಮಿನಿಬಸ್‌ಗಳಿಗೆ ಹೆಚ್ಚಿನ ಒತ್ತು ನೀಡಬೇಕು.
-ರವಿ ಸುಬ್ರಹ್ಮಣ್ಯ, ಶಾಸಕ 

ಮೆಟ್ರೋ ವ್ಯವಸ್ಥೆ ತುಂಬಾ ಚೆನ್ನಾಗಿದೆ. ಆದರೆ ಫೀಡರ್‌ ಬಸ್‌ ಸೇವೆಯನ್ನು ಇನ್ನಷ್ಟು ಉತ್ಕೃಷ್ಟಗೊಳಿಸಬೇಕು. ಮೆಟ್ರೋ ನಿಲ್ದಾಣದಿಂದ ಬಸ್‌ಸೇವೆ ಜಾಸ್ತಿ ಮಾಡಬೇಕು.
-ಸೌಮ್ಯರೆಡ್ಡಿ ,ಶಾಸಕಿ

Advertisement

Udayavani is now on Telegram. Click here to join our channel and stay updated with the latest news.

Next