Advertisement

ಕಾಲೇಜು ಶಿಕ್ಷಣದಲ್ಲಿ ಎನ್‌ಎಸ್‌ಎಸ್‌ ಕಡ್ಡಾಯಕ್ಕೆ ಚಿಂತನೆ

06:05 AM Aug 25, 2018 | |

ಬೆಂಗಳೂರು: ಕಾಲೇಜು ಶಿಕ್ಷಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯನ್ನು (ಎನ್‌ಎಸ್‌ಎಸ್‌) ಕಡ್ಡಾಯಗೊಳಿಸುವ ಬಗ್ಗೆ ಚಿಂತಿಸಲಾಗಿದ್ದು, ಸಂಬಂಧಪಟ್ಟ ಇಲಾಖೆಗಳೊಂದಿಗೆ ಚರ್ಚಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಹೇಳಿದರು.

Advertisement

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ವಿಕಾಸಸೌಧದಲ್ಲಿ ಶುಕ್ರವಾರ ಎನ್‌ಎಸ್‌ಎಸ್‌ ರಾಜ್ಯ ಮಟ್ಟದ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಹಿಂದೆ ಎನ್‌ಸಿಸಿಯನ್ನು ಕಡ್ಡಾಯಗೊಳಿಸಿ ನಂತರ ಐಚ್ಛಿಕಗೊಳಿಸಲಾಗಿತ್ತು. ಈಗಲೂ ಕೆಲ ವಿಶ್ವವಿದ್ಯಾಲಯ, ಕಾಲೇಜುಗಳು ಎನ್‌ಸಿಸಿ ಕಡ್ಡಾಯಗೊಳಿಸಿವೆ. ಹಾಗಾಗಿ ಎನ್‌ಎಸ್‌ಎಸ್‌ ಕಡ್ಡಾಯಗೊಳಿಸುವುದು, ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ಪೂರಕವಾಗಿ ಯುವಜನತೆಯನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಕ್ರಿಯಾಶೀಲ ಯೋಜನೆ ರೂಪಿಸಲು ಸಮಿತಿ ರಚಿಸಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

ರಾಷ್ಟ್ರೀಯತೆ ಮೂಡಿಸಲು ಸಹಕಾರಿ
ರಾಷ್ಟ್ರೀಯತೆ, ಸಂಸ್ಕೃತಿ, ಸಂಸ್ಕಾರದ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಬೇಕಿದೆ. ಈ ನಿಟ್ಟಿನಲ್ಲಿ ಗಮನ ಹರಿಸದಿದ್ದರೆ ಮುಂದೆ ಗಾಂಧೀಜಿ ಪ್ರಸ್ತುತತೆ ಬಗ್ಗೆ ಹೇಳುವುದೇ ಸವಾಲಾಗಬಹುದು. ಈ ಅಂಶಗಳ ನಿರ್ಲಕ್ಷ್ಯಕ್ಕೆ ಈಗಾಗಲೇ ಬೆಲೆ ತೆರುತ್ತಿದ್ದೇವೆ. ಅಪರಾಧ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಯುವಜನತೆ ಕುರಿತಂತೆ ಹೆಚ್ಚು ದೂರುಗಳು ಸಲ್ಲಿಕೆಯಾಗುತ್ತಿವೆ. ರಾಷ್ಟ್ರೀಯತೆ, ಸಂಸ್ಕೃತಿ, ಭಾವೈಕ್ಯತೆಯ ಭಾವನೆಯನ್ನು ವಿದ್ಯಾರ್ಥಿಗಳಲ್ಲಿ ಎನ್‌ಎಸ್‌ಎಸ್‌ ಸಹಕಾರಿಯಾಗಿದೆ. ಹಾಗಾಗಿ ಇದನ್ನು ಕಡ್ಡಾಯಗೊಳಿಸುವತ್ತ ಗಮನ ಹರಿಸಬೇಕು ಎಂದು ತಿಳಿಸಿದರು.

ಜೀವನ ಶೈಲಿ, ಆಚರಣೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಆದರೆ ಜಪಾನ್‌ ಸೇರಿದಂತೆ ಇತರೆ ಕೆಲ ರಾಷ್ಟ್ರಗಳು ತಮ್ಮ ಸಂಸ್ಕೃತಿಯನ್ನು ಸಂರಕ್ಷಿಸಿಕೊಂಡು ಅನುಸರಿಸುತ್ತಿವೆ. ಆದರೆ ನಮ್ಮಲ್ಲಿ ಸಂಸ್ಕೃತಿ, ಸಂಸ್ಕಾರದ ಪಾಲನೆಗೆ ಅಂಜಿಕೆ ಪಡುವ ಮನಸ್ಥಿತಿ ಇದೆ. ಸಂಸ್ಕೃತಿ, ಸಂಸ್ಕಾರಗಳನ್ನು ಪಾಲಿಸುವ ಮನಸ್ಥಿತಿಯನ್ನು ಮೂಡಿಸುವ ಜತೆಗೆ ಪೂರಕ ವಾತಾವರಣ ಸೃಷ್ಟಿಸಬೇಕು ಎಂದು ಅಭಿಪ್ರಾಯಪಟ್ಟರು.

ಸಾಮಾನ್ಯವಾಗಿ ಎನ್‌ಎಸ್‌ಎಸ್‌ಗೆ ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳು ಸೇರುತ್ತಾರೆ ಎಂಬ ಮಾಹಿತಿ ಇದೆ. ಎಲ್ಲ ವರ್ಗದ ವಿದ್ಯಾರ್ಥಿಗಳು, ಹೆಚ್ಚು ಅಂಕ ಗಳಿಸುವಂತಹ ವಿದ್ಯಾರ್ಥಿಗಳು ಪಾಲ್ಗೊಳ್ಳುವಂತೆ ಮಾಡುವ ಸಲುವಾಗಿ ಎನ್‌ಎಸ್‌ಎಸ್‌ ಕಡ್ಡಾಯಗೊಳಿಸುವ ಬಗ್ಗೆ ಚರ್ಚೆ ಶುರುವಾಗಿದೆ. ಎನ್‌ಸಿಸಿ ಮಾದರಿಯಲ್ಲಿ ಎನ್‌ಎಸ್‌ಎಸ್‌ಗೂ ಉತ್ತೇಜನಗಳನ್ನು ನೀಡಿದರೆ ವಿದ್ಯಾರ್ಥಿಗಳು ಹೆಚ್ಚು ಆಸಕ್ತಿ ತೋರಬಹುದು. ಈ ಬಗ್ಗೆಯೂ ಪರಿಶೀಲಿಸಲಾಗುವುದು ಎಂದು ತಿಳಿಸಿದರು.

Advertisement

ಮಾದಕ ವಸ್ತು ಬಳಕೆ ವಿರುದ್ಧ ಆಂದೋಲನ
ಬಹಳಷ್ಟು ಯುವಜನತೆ ಮಾದಕ ವಸ್ತು ಬಳಕೆಯತ್ತ ಆಕರ್ಷಿತರಾಗುತ್ತಿದ್ದಾರೆ. ಮಾದಕ ವಸ್ತುಗಳನ್ನು ಬಳಸದಂತೆ ರಾಜ್ಯಾದ್ಯಂತ ಪೊಲೀಸ್‌ ಇಲಾಖೆ ಆಂದೋಲನ ನಡೆಸುತ್ತಿದ್ದು, ಮಾರಾಟ ಜಾಲದ ವಿರುದ್ಧವೂ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ. ಈ ಬಗ್ಗೆ ಎನ್‌ಎಸ್‌ಎಸ್‌ ಕಾರ್ಯಕ್ರಮಗಳ ಮೂಲಕವೂ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಉದ್ಯೋಗ ಪಡೆಯಲು ಅನುಕೂಲವಾಗುವ ಅಂಶಗಳನ್ನು ಎನ್‌ಎಸ್‌ಎಸ್‌ನಲ್ಲಿ ಅಳವಡಿಸಿದರೆ ಸಹಾಯಕವಾಗಲಿದೆ. ಎನ್‌ಎಸ್‌ಎಸ್‌ನಲ್ಲಿ ತೊಡಗಿಸಿಕೊಂಡವರು ನಂತರ ಏನಾದರೂ ಎಂಬ ಬಗ್ಗೆ ಪರಿಣಾಮ ಕುರಿತ ಅಧ್ಯಯನವೇ ನಡೆದಿಲ್ಲ. ಈ ಬಗ್ಗೆಯೂ ಪ್ರಯತ್ನ ನಡೆಯಬೇಕಿದೆ. ಸಭೆಯಲ್ಲಿ ಉತ್ತಮ ಸಲಹೆಗಳು ಕೇಳಿಬಂದಿದ್ದು, ಎನ್‌ಎಸ್‌ಎಸ್‌ಗೆ ಹೊಸ ರೂಪ ನೀಡಬೇಕಾದ ಅಗತ್ಯವಿದೆ ಎಂದು ಹೇಳಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯೆಲ್‌, ರಾಜ್ಯ ಎನ್‌ಎಸ್‌ಎಸ್‌ ಕೋಶದ ರಾಜ್ಯ ಎನ್‌ಎಸ್‌ಎಸ್‌ ಅಧಿಕಾರಿ ಡಾ.ಗಣನಾಥ ಶೆಟ್ಟಿ ಎಕ್ಕಾರು, ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕ ಡಾ.ವಿಶಾಲ್‌ ಇತರರು ಉಪಸ್ಥಿತರಿದ್ದರು.

ಬಳಕೆಯಾಗದ 2.49 ಕೋಟಿ ರೂ.
ಕೇಂದ್ರ ಸರ್ಕಾರವು ಎನ್‌ಎಸ್‌ಎಸ್‌ ಚಟುವಟಿಕೆಗಳಿಗೆ 2017-18ನೇ ಸಾಲಿನಲ್ಲಿ ಬಿಡುಗಡೆ ಮಾಡಿದ ಅನುದಾನದಲ್ಲಿ 2.49 ಕೋಟಿ ರೂ. ಬಳಕೆಯಾಗಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಅನುದಾನ ಬಳಕೆ ಬಗ್ಗೆ ತ್ತೈಮಾಸಿಕ ಸಭೆಗಳಲ್ಲಿ ಪರಿಶೀಲನೆ ನಡೆಸಿದರೆ ಸಕಾಲದಲ್ಲಿ ಸಮರ್ಪಕ ಬಳಕೆಗೆ ಅನುಕೂಲವಾಗಲಿದೆ ಎಂದು ಸಲಹೆ ನೀಡಿದರು.

ಹಾಗೆಯೇ ಎಲ್ಲ ವಿಶ್ವವಿದ್ಯಾಲಯಗಳು ವರ್ಷದಲ್ಲೊಮ್ಮೆ ಭಾವೈಕ್ಯತಾ ಶಿಬಿರವನ್ನು ಆಯೋಜಿಸಬೇಕು. ಅಗತ್ಯಬಿದ್ದರೆ ಈ ಸಂಬಂಧ ಸುತ್ತೋಲೆ ಹೊರಡಿಸಲಾಗುವುದು ಎಂದು ಹೇಳಿದರು.2018-19ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಯೋಜನೆಗಳಡಿ ಎನ್‌ಎಸ್‌ಎಸ್‌ ಚಟುವಟಿಕೆಗಳಿಗೆ 13.21 ಕೋಟಿ ರೂ. ಅನುದಾನ ಹಾಗೂ ರಾಜ್ಯ ಸರ್ಕಾರದ ಪ್ರಾಯೋಜಿತ ಕಾರ್ಯಕ್ರಮಗಳಿಗೆ 6.44 ಕೋಟಿ ರೂ. ಮೊತ್ತದ ಕ್ರಿಯಾಯೋಜನೆ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.

ಕಾನೂನು ಅರಿವು ಅಗತ್ಯ
ನಗರದ ಅಂದಗೆಡಿಸುತ್ತಿರುವ ಪ್ಲಾಸ್ಟಿಕ್‌ ಫ್ಲೆಕ್ಸ್‌ಗಳನ್ನು ಹಿಂದೆಯೇ ನಿಷೇಧಿಸಿದ್ದರೂ ಜನ ಪ್ಲಾಸ್ಟಿಕ್‌ ಕೈಚೀಲ ಬಳಸುತ್ತಿದ್ದಾರೆ. ಹಲವೆಡೆ ದಾಳಿ ನಡೆಸಿ 20- 30 ಕೈಗಾರಿಕೆಗಳನ್ನು ಬಂದ್‌ ಮಾಡಿಸಿದರೂ ಫ‌ಲ ನೀಡಲಿಲ್ಲ. ಫ್ಲೆಕ್ಸ್‌ಗಳನ್ನು ತೆರವುಗೊಳಿಸುವ ಬಗ್ಗೆ ಪ್ರಸ್ತಾಪಿಸಿದಾಗ ಸಾವಿರಾರು ಕೋಟಿ ರೂ. ಆದಾಯ ಬರಲಿದೆ ಎಂಬುದಾಗಿ ಪಾಲಿಕೆ ಆಯುಕ್ತರು ಹೇಳಿದ್ದರು. ಆದರೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಪಟ್ಟಂತೆ ಹೈಕೋರ್ಟ್‌ ನೀಡಿದ ಒಂದು ಆದೇಶದಿಂದ ಇಡೀ ನಗರವೆಲ್ಲಾ ಜಾಲಾಡಿ ಫ್ಲೆಕ್ಸ್‌ ತೆರವುಗೊಳಿಸಲಾಗಿದೆ. ಬೆಂಗಳೂರು ಈಗ ಅಂದವಾಗಿದೆ. ಹಾಗಾಗಿ ಕಾನೂನಿನ ಮಹತ್ವದ ಬಗ್ಗೆಯೂ ವಿದ್ಯಾರ್ಥಿಗಳಲ್ಲಿ ಕಾನೂನು ಅರಿವು ಮೂಡಿಸುವ ಅಗತ್ಯವಿದೆ.
– ಡಾ.ಜಿ.ಪರಮೇಶ್ವರ್‌, ಉಪ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next