ಬೆಂಗಳೂರು: ಕೇಂದ್ರ ಸಚಿವ ಅನಂತ ಕುಮಾರ್(59ವರ್ಷ) ಸೋಮವಾರ ನಸುಕಿನ ವೇಳೆ ಇಹಲೋಕ ತ್ಯಜಿಸಿದ್ದರು, ಅನಂತ ಕುಮಾರ್ ಅವರು ತಮ್ಮ ರಾಜಕೀಯದ ಪಯಣದಲ್ಲಿ ಉನ್ನತ ಮಟ್ಟಕ್ಕೆ ಏರಿದ್ದರು. ಕರ್ನಾಟಕದಲ್ಲಿ ಬಿಜೆಪಿ ಬಲವರ್ಧನೆಗೆ ಅವಿರತವಾಗಿ ಶ್ರಮಿಸಿದವರಲ್ಲಿ ಅವರು ಕೂಡಾ ಒಬ್ಬರು.
ಸಂಘ ಪರಿವಾರದ ವಿದ್ಯಾರ್ಥಿ ಸಂಘಟನೆಯಾಗಿದ್ದ ಎಬಿವಿಪಿ ಮೂಲಕ ಅನಂತಕುಮಾರ್ ಅವರು ತಮ್ಮ ಸಾರ್ವಜನಿಕ ಬದುಕನ್ನು ಆರಂಭಿಸಿದ್ದರು. ಆರ್ ಎಸ್ ಎಸ್ ಸಿದ್ಧಾಂತಕ್ಕೆ ನಿಷ್ಠರಾಗಿದ್ದ ಅನಂತ ಕುಮಾರ್ ಸ್ನೇಹ ಜೀವಿಯಾಗಿ ಗುರುತಿಸಿಕೊಂಡಿದ್ದರು.
ಇಂದಿರಾಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದ ಸಂದರ್ಭದಲ್ಲಿ ಅನಂತಕುಮಾರ್ ಕೂಡಾ ಪ್ರತಿಭಟನೆಯಲ್ಲಿ ತೊಡಗಿಸಿಕೊಂಡಿದ್ದರು. ಅಷ್ಟೇ ಅಲ್ಲದೇ 30 ದಿನಗಳ ಸೆರೆಮನೆವಾಸ ಕೂಡಾ ಅನುಭವಿಸಿದ್ದರು.
1987ರಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಮೂಲಕ ರಾಜಕೀಯಕ್ಕೆ ಕಾಲಿಟ್ಟಿದ್ದರು. ಬಿಜೆಪಿ ರಾಜ್ಯಘಟಕದ ಕಾರ್ಯದರ್ಶಿಯಾಗಿ ಹೊಣೆಗಾರಿಕೆ ವಹಿಸಿಕೊಂಡಿದ್ದರು, ಬಿಜೆಪಿ ಯುವ ಮೋರ್ಚಾದ ರಾಜ್ಯಾಧ್ಯಕ್ಷರಾಗಿ, ಪ್ರಧಾನ ಕಾರ್ಯದರ್ಶಿಯಾಗಿ, ರಾಷ್ಟ್ರೀಯ ಕಾರ್ಯದರ್ಶಿಯಾಗಿ ಬಿಜೆಪಿ ಪಕ್ಷ ಕಟ್ಟುವಲ್ಲಿ ದುಡಿದಿದ್ದರು.
ಬಿಎಸ್ ಯಡಿಯೂರಪ್ಪ ಅವರ ಜೊತೆ ಅನಂತಕುಮಾರ್ ಹಾಗೂ ಇತರ ಕೆಲವು ಮುಖಂಡರ ಜೊತೆ ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಬಲಾಢ್ಯವಾಗಿ ಬೆಳೆಯಲು ಪ್ರಮುಖ ಶಕ್ತಿಯಾಗಿ ದುಡಿದಿದ್ದರು. 1996ರಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದು, ಸತತ ಆರು ಬಾರಿ ಸಂಸದರಾಗಿ ಆಯ್ಕೆಯಾಗುವ ಮೂಲಕ ಸೋಲಿಲ್ಲದ ಸರದಾರ ಎನ್ನಿಸಿಕೊಂಡಿದ್ದರು.
ರಸಗೊಬ್ಬರ, ಔಷಧ ಮಾಫಿಯಾದಿಂದ ಪ್ರಾಣ ಬೆದರಿಕೆ ಎದುರಿಸಿದ್ದರು!
ದೆಹಲಿಯಲ್ಲಿ ಕನ್ನಡ ಧ್ವನಿಯಾಗಿದ್ದ ಅನಂತ ಕುಮಾರ್ ಕರ್ನಾಟಕದ ಸಮಸ್ಯೆ ಬಗೆಹರಿಸುವಲ್ಲಿ ಪ್ರಮುಖ ಶಕ್ತಿಯಾಗಿದ್ದರು. ಎಲ್ ಕೆ ಅಡ್ವಾಣಿ ಬಳಿಕ ಅತೀ ಹೆಚ್ಚು ಸ್ಥಾಯಿ ಸಮಿತಿ ನಿರ್ವಹಣೆ ಮಾಡಿದ ಕೀರ್ತಿ ಅನಂತಕುಮಾರ್ ಅವರದ್ದಾಗಿದೆ.ರಸಗೊಬ್ಬರ, ಔಷಧ ಮಾಫಿಯಾದಿಂದ ಪ್ರಾಣ ಬೆದರಿಕೆಯನ್ನು ಎದುರಿಸಿದ್ದರು. ಕೇಂದ್ರ ಸಂಪುಟದಲ್ಲಿ 10 ವಿಭಿನ್ನ ಖಾತೆಗಳನ್ನು ನಿರ್ವಹಿಸಿದ್ದ ಏಕೈಕ ರಾಜಕಾರಣಿ ಅವರು.
ವಿಶ್ವಸಂಸ್ಥೆಯಲ್ಲಿ ಮೊಟ್ಟ ಮೊದಲ ಬಾರಿಗೆ ಕನ್ನಡದಲ್ಲಿ ಭಾಷಣ ಮಾಡಿದ್ದವರು ಅನಂತಕುಮಾರ್. ಸಬ್ಸಿಡಿ ದರದ ಯೂರಿಯಾ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವುದಕ್ಕೆ ಕಡಿವಾಣ ಹಾಕಿದ್ದರು. ಅಗ್ಗದ ದರದ ಜನೌಷಧಿಯ ರೂವಾರಿ ಕೂಡಾ ಹೌದು.