Advertisement

ಫ‌ಲಿತಾಂಶ ಫ‌ಲದ ಪಾಲು ಪಡೆಯಲು ಕಿತ್ತಾಟ

08:45 PM May 01, 2019 | Lakshmi GovindaRaj |

ಹಾಸನ: ಎಸ್ಸೆಸ್ಸೆಲ್ಸಿ ಪರೀಕ್ಷೆ ಫ‌ಲಿತಾಂಶದಲ್ಲಿ ಹಾಸನ ಜಿಲ್ಲೆ ಈ ಬಾರಿ ರಾಜ್ಯದಲ್ಲಿ ಪ್ರಥಮ ಸ್ಥಾನಕ್ಕೇರಿ ದಾಖಲೆ ನಿರ್ಮಿಸಿದೆ. ಈ ಸಾಧನೆಗೆ ಇಡೀ ಜಿಲ್ಲೆಯೇ ಸಂಭ್ರಮ ಪಡಬೇಕು. ಶಿಕ್ಷಕರು, ವಿದ್ಯಾರ್ಥಿಗಳ ಶ್ರಮ, ಶಿಕ್ಷಣ ಇಲಾಖೆ ಅಧಿಕಾರಿಗಳ ನಿರ್ವಹಣೆಗೆ ಅಭಿನಂದಿಸಬೇಕು. ಆದರೆ ಫ‌ಲಿತಾಂಶದ ಯಶಸ್ಸಿನಲ್ಲಿ ಪಾಲು ಪಡೆಯಲು ಕಿತ್ತಾಟ ಆರಂಭವಾಗಿದೆ.

Advertisement

ಶೈಕ್ಷಣಿಕ ಕ್ರಮಗಳ ಫ‌ಲ: ಶೈಕ್ಷಣಿಕ ಕ್ಷೇತ್ರದಲ್ಲಿ ಹಾಸನ ಜಿಲ್ಲೆ ಹಿಂದೆಂದೂ ಇಂಥ ದಾಖಲಾರ್ಹ ಸಾಧನೆ ಮಾಡಿರಲಿಲ್ಲ. ಫ‌ಲಿತಾಂಶ ಪ್ರಕಟವಾದ ಮಂಗಳವಾರ ಇಡೀ ದಿನ ಜಿಲ್ಲೆಯಲ್ಲಿ ಹರ್ಷದ ಹೊನಲು ಹರಿದಾಡಿತ್ತು. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಯವರು, ಡಿಡಿಪಿಐ ಸೇರಿದಂತೆ ಅಧಿಕಾರಿ ಸಮೂಹ ಶಿಕ್ಷಕರು, ವಿದ್ಯಾರ್ಥಿಗಳ ಶ್ರಮಕ್ಕೆ ಅಭಿನಂದನೆ ಸಲ್ಲಿಸಿತ್ತು.

ಆದರೆ ಸಂಜೆಯ ವೇಳೆಗೆ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನಾನು ಕೈಗೊಂಡ ಕ್ರಮಗಳು ಕಾರಣ ಎಂದು ಕೆಲವು ಮಾಧ್ಯಮಗಳು ವರದಿ ಬಿತ್ತರಿಸಿದವು. ರೋಹಿಣಿ ಸಿಂಧೂರಿಯವರೂ ತಾವು ಜಿಲ್ಲಾಧಿಕಾರಿಯಾಗಿದ್ದಾಗ ಕೈಗೊಂಡ ಕ್ರಮಗಳು ಫ‌ಲ ಕೊಟ್ಟಿವೆ ಎಂಬರ್ಥದ ಹೇಳಿಕೆಗಳನ್ನು ನೀಡಿದರು.

ಅಲ್ಲಿಂದ ಆರಂಭವಾದ ವಿವಾದ ಈಗ ರೋಹಿಣಿ ಸಿಂಧೂರಿ ವರ್ಸಸ್‌ ಎಚ್‌.ಡಿ.ರೇವಣ್ಣ ಎಂಬಷ್ಟರ ಮಟ್ಟಿಗೆ ಯಶಸ್ಸಿನ ಫ‌ಲ ಹಂಚಿಕೆಯ ಕಿತ್ತಾಟ ಆರಂಭವಾಗಿದೆ. ರೋಹಿಣಿ ಸಿಂಧೂರಿ ದಕ್ಷ ಅಧಿಕಾರಿಯೇನೋ ಹೌದು. ಆದರೆ ಅದೇನೋ ಅವರು ಕೈಗೊಂಡ ಕ್ರಮಗಳೆಲ್ಲಾ ವಿವಾದಕ್ಕೀಡಾದವು. ಮಹಾಮಸ್ತಕಾಭಿಷೇಕದ ಕಾಮಗಾರಿಗಳು, ಹಾಸನಾಂಬ ಜಾತ್ರಾ ಮಹೋತ್ಸವದಲ್ಲೂ ವಿವಾದ ಸೃಷ್ಟಿಯಾಯಿತು. ಈಗ ಎಸ್ಸೆಸ್ಸೆಲ್ಸಿ ಫ‌ಲಿತಾಂಶದ ಯಶಸ್ಸು ಕೂಡ ವಿವಾದಕ್ಕೀಡಾಗಿದೆ.

ರೇವಣ್ಣ ಕೊಡುಗೆ: ಎಚ್‌.ಡಿ.ರೇವಣ್ಣ ಹಾಸನ ಜಿಲ್ಲೆಯ ಅಭಿವೃದ್ಧಿಗೆ ನೀಡಿದ ಕೊಡುಗೆ ಪ್ರಶ್ನಾತೀತ. ಅದರಲ್ಲೂ ಶೈಕ್ಷಣಿಕ ಪ್ರಗತಿಗೂ ಅಪಾರ ಕೊಡುಗೆ ನೀಡಿದ್ದಾರೆ. ರೇವಣ್ಣ ಅವರ ಅಧಿಕಾರವಧಿಯಲ್ಲಿ ಜಿಲ್ಲೆಯ ಪ್ರತಿ ಹೋಬಳಿಗೂ ಒಂದೊಂದು ವಸತಿ ಶಾಲೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಮಂಜೂರಾದವು. ಅಷ್ಟೇ ಅಲ್ಲ ಸುಸಜ್ಜಿತ ಕಟ್ಟಡ ಹಾಗೂ ಮೂಲ ಸೌಕರ್ಯಗಳನ್ನೂ ಕಲ್ಪಿಸಿದರು.

Advertisement

ಹಾಸನ ನಗರದಲ್ಲಂತೂ ಯಾವುದೇ ವಿಷಯದ ಉನ್ನತ ಶಿಕ್ಷಣ ಸಂಸ್ಥೆಯ ಕೊರತೆಯಲ್ಲದಂತೆ ನೋಡಿಕೊಂಡಿದ್ದಾರೆ. ಸರ್ಕಾರದಿಂದ ಶೈಕ್ಷಣಿಕ ಮೂಲ ಸೌಕರ್ಯಗಳನ್ನು ಮಂಜೂರು ಮಾಡಿಸಿರುವುದರ ಜೊತೆಗೆ ವೈಯಕ್ತಿಕವಾಗಿ ಶಾಲಾ- ಕಾಲೇಜುಗಳಿಗೆ ಪಠ್ಯವಸ್ತು, ಪೀಠೊಪಕರಣಗಳನ್ನೂ ಕೊಡಿಸಿದ್ದಾರೆ. ಪಿಯುಸಿ, ಎಸ್ಸೆಸ್ಸೆಲ್ಸಿ ಪರೀಕ್ಷಾ ಫ‌ಲಿತಾಂಶಕ್ಕೆ ಹಲವು ಸಭೆಗಳನ್ನು ನಡೆಸಿ ಪ್ರೇರೇಪಿಸಿದ್ದಾರೆ.

ಜಿ.ಪಂ.ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ ಅವರೂ ಜಿ.ಪಂ.ನ ಸಭೆಗಳಲ್ಲಿ ಫ‌ಲಿತಾಂಶದ ಸುಧಾರಣೆಗೆ ಸಲಹೆ ಸೂಚನೆ ನೀಡುತ್ತಾ ಬಂದಿದ್ದರು. ಆದರೆ ಎಸ್ಸೆಸ್ಸೆಲ್ಸಿ ಪರೀಕ್ಷಾ ಫ‌ಲಿತಾಂಶದ ಯಶಸ್ಸಿನ ಫ‌ಲದ ಪಾಲಿಗಾಗಿ ಪೈಪೋಟಿಗೆ ಇಳಿಯಬೇಕಿತ್ತೇ ? ಅದೂ ಅಧಿಕಾರಿಯೊಬ್ಬರ ಹೇಳಿಕೆಯನ್ನು ನಿರ್ಲಕ್ಷಿಸಿ ಮುಂದಿನ ವರ್ಷಕ್ಕೆ ಸಜ್ಜಾಗುವ ಕ್ರಮಗಳತ್ತ ಸಚಿವ ರೇವಣ್ಣ ಅವರು ಮುಂದಾಗಬೇಕಿತ್ತು.

ಸ್ಥಾನ ಉಳಿವು ಅಗತ್ಯ: ಶೇ. 100 ಫ‌ಲಿತಾಂಶ ಪಡೆದಿರುವ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕರನ್ನು ಮುಖ್ಯಮಂತ್ರಿಯವರಿಂದ ಸನ್ಮಾನಿಸುವ , ಕಡಿಮೆ ಫ‌ಲಿತಾಂಶ ಪಡೆದ ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರ ಸಭೆ ಕರೆದು ಸಲಹೆ ಸೂಚನೆ ನೀಡುವ ಸಚಿವ ರೇವಣ್ಣ ಅವರ ಚಿಂತನೆ ಸ್ವಾಗತಾರ್ಹ. ಆದರೆ ಎಸ್ಸೆಸ್ಸೆಲ್ಸಿ ಪರೀಕ್ಷಾ ಫ‌ಲಿತಾಂಶದ ಯಶಸ್ಸಿನ ಫ‌ಲದ ಕಿತ್ತಾಟವನ್ನು ನಿಲ್ಲಲಿ. ಶಿಕ್ಷಕರು, ವಿದ್ಯಾರ್ಥಿಗಳ ಪ್ರೇರೇಪಿಸಿ ಮುಂದಿನ ವರ್ಷದ ಪರೀಕ್ಷೆಯಲ್ಲೂ ಪ್ರಥಮ ಸ್ಥಾನ ಉಳಿಸಿಕೊಳ್ಳುವತ್ತ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿ ಎಂಬುದು ನಾಗರಿಕ ವಲಯದ ಆಶಯವಾಗಿದೆ.

ಎಚ್‌ಡಿಕೆ, ವಿಜಯಭಾಸ್ಕರ್‌, ಭವಾನಿ ರೇವಣ್ಣ ಕೊಡುಗೆ
ಹಾಸನ: ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫ‌ಲಿತಾಂಶದಲ್ಲಿ ಹಾಸನ ಜಿಲ್ಲೆ ರಾಜ್ಯದಲ್ಲೆ ಮೊದಲ ಸ್ಥಾನ ಪಡೆಯಲು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಹಿರಿಯ ಐಎಎಸ್‌ ಅಧಿಕಾರಿ ವಿಜಯಭಾಸ್ಕರ್‌ ಅವರು ಜಿಲ್ಲೆಯ ಶಿಕ್ಷಣ ಕ್ಷೇತ್ರದ ಮೂಲ ಸೌಕರ್ಯಕ್ಕೆ ನೀಡಿದ ಕೊಡುಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವನಾಗಿ ನಾನು ಮತ್ತು ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ಅವರು ಆಗಿಂದಾಗ್ಗೆ ಅಧಿಕಾರಿಗಳ ಸಭೆ ನಡೆಸಿ ನೀಡಿದ ಸಲಹೆ ಕಾರಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಡಿ.ರೇವಣ್ಣ ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್‌.ಡಿ.ಕುಮಾರಸ್ವಾಮಿ 2006 ರಲ್ಲಿ ಮುಖ್ಯಮಂತ್ರಿ, ಬಸವರಾಜ ಹೊರಟ್ಟಿ ಅವರು ಶಿಕ್ಷಣ ಸಚಿವರು, ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ವಿಜಯಭಾಸ್ಕರ್‌ ಅವರು ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ಸಲ್ಲಿಸಿದ ಎಲ್ಲಾ ಪ್ರಸ್ತಾವನೆಗಳಿಗೂ ಮಂಜೂರಾತಿ ನೀಡಿದರು. ಅಂದು ಜಿಲ್ಲೆಯ ಶೈಕ್ಷಣಿಕ ಮೂಲ ಸೌಕರ್ಯಕ್ಕೆ ಭದ್ರ ಬುನಾದಿ ಹಾಕಿದ ನಂತರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 31 ನೇ ಸ್ಥಾನದಲ್ಲಿದ್ದ ಹಾಸನ ಜಿಲ್ಲೆ, 3 ನೇ ಸ್ಥಾನಕ್ಕೆ ಬಂದಿತ್ತು. ಆನಂತರ 13 ನೇ ಸ್ಥಾನಕ್ಕೆ ಹೋಗಿತ್ತು. ಕಳೆದ ವರ್ಷ 7 ಸ್ಥಾನಕ್ಕೇರಿ ಈಗ ಮೊದಲ ಸ್ಥಾನಕ್ಕೆ ಬಂದಿದೆ.

ಪತ್ನಿಯ ಒತ್ತಡ: ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ಅವರು ಪ್ರತಿ ತಿಂಗಳೂ 2 ಸಭೆಗಳನ್ನು ನಡೆಸಿ ಶೈಕ್ಷಣಿಕ ಪ್ರಗತಿಯನ್ನು ಪರಿಶೀಲಿಸಿ ಫ‌ಲಿತಾಂಶ ಸುಧಾರಣೆಗೆ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದರು. ನಾನು ಸಚಿವನಾದ ಮೇಲೆ ಶಿಕ್ಷಣ ಇಲಾಖೆ ಅಧಿಕಾರಿಗಳು, ಎಲ್ಲಾ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರ ಜಿಲ್ಲಾ ಮಟ್ಟದ ಸಭೆಗಳನ್ನು ನಡೆಸಿ ಫ‌ಲಿತಾಂಶ ಸುಧಾರಣೆಗೆ ಸೂಚನೆ ನೀಡಿ ಪೇರೇಪಣಾ ಕ್ರಮಗಳನ್ನು ಕೈಗೊಂಡಿದ್ದೆ.

ಈ ಎಲ್ಲಾ ಕ್ರಮಗಳಿಂದಾಗಿ ಹಾಗೂ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಶ್ರಮದಿಂದ ಜಿಲ್ಲೆಯು ಫ‌ಲಿತಾಂಶದಲ್ಲಿ ಮೊದಲ ಸ್ಥಾನ ಪಡೆಯಲು ಸಾಧ್ಯವಾಯಿತು. ಫ‌ಲಿತಾಂಶದಲ್ಲಿ ಮೊದಲ ಸ್ಥಾನ ಪಡೆಯಲು ಶ್ರಮಿಸಿದ ಶಾಲೆಗಳ ಮುಖ್ಯಶಿಕ್ಷಕರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಅಭಿನಂದಿಸುವೆ ಎಂದರು.

ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಸನ್ಮಾನ: ಜಿಲ್ಲೆಯ 86 ಸರ್ಕಾರಿ ಶಾಲೆಗಳು ಎಸ್ಸೆಸ್ಸೆಲ್ಸಿ ಫ‌ಲಿತಾಂಶದಲ್ಲಿ ಮೊದಲ ಸ್ಥಾನ ಪಡೆದಿವೆ. ಈ ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷರನ್ನು ಸನ್ಮಾನಿಸಿ ಶಾಲೆಗೆ ಜಿಲ್ಲಾಡಳಿತದಿಂದ ಪ್ರಮಾಣಪತ್ರ ವಿತರಣೆಯ ಪ್ರಮಾಣಪತ್ರ ನೀಡುವ ಸಮಾರಂಭವನ್ನು ಚುನಾವಣಾ ನೀತಿ ಸಂಹಿತೆ ಮುಗಿದ ನಂತರ ಹಮ್ಮಿಕೊಳ್ಳಲಾಗುವುದು.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ವಿಜಯಬಾಸ್ಕರ್‌ ಅವರನ್ನೂ ಸಭೆಗೆ ಆಹ್ವಾನಿಸಲಾಗುವುದು. ಕಡಿಮೆ ಫ‌ಲಿತಾಂಶ ಪಡೆದಿರುವ ಶಾಲಾ ಶಿಕ್ಷಕರನ್ನೂ ಸಭೆಗೆ ಕರೆಸಿ ಮುಂದಿನ ದಿನಗಳಲ್ಲಿ ಫ‌ಲಿತಾಂಶ ಸುಧಾರಣೆಗೆ ಕ್ರಮಗಳನ್ನು ಕೈಗೊಳ್ಳುವ ಬಗ್ಗೆಯೂ ಸಲಹೆ ಸೂಚನೆ ನೀಡಲಾಗುವುದು ಎಂದು ರೇವಣ್ಣ ಹೇಳಿದರು.

ಆ ಯಮ್ಮಾ ಏನು ಕಡಿದು ಕಟ್ಟೆ ಹಾಕಿದ್ದು ?-ರೇವಣ್ಣ ಆಕ್ರೋಶ: ಎಸ್ಸೆಸ್ಸೆಲ್ಸಿ ಪರೀಕ್ಷೆ ಫ‌ಲಿತಾಂಶದಲ್ಲಿ ಹಾಸನ ಜಿಲ್ಲೆ ಮೊದಲ ಸ್ಥಾನ ಪಡೆಯುವಲ್ಲಿ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಕೈಗೊಂಡಿದ್ದ ಕ್ರಮಗಳೂ ಕಾರಣವಂತೆ ಎಂಬ ಪ್ರಶ್ನೆಗೆ ಕೆರಳಿ ಕೆಂಡವಾದ ಸಚಿವ ಎಚ್‌.ಡಿ.ರೇವಣ್ಣ ಅವರು, ಆ ಯಮ್ಮಾ ಏನು ಕಡಿದು ಕಟ್ಟೆ ಹಾಕಿದ್ರಾ, ಶೈಕ್ಷಣಿಕ ಪ್ರಗತಿ ಸುಧಾರಣೆಗೆ ಒಂದು ದಿನವಾದ್ರೂ ಸಭೆ ಮಾಡಿದ್ರಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾವು ಮೂಲ ಸೌಕರ್ಯ ಕಲ್ಪಿಸಿ ಪ್ರೇರೇಪಿಸಿದೆವು. ಶಿಕ್ಷಕರು, ವಿದ್ಯಾರ್ಥಿಗಳು ಶ್ರಮ ಪಟ್ಟಿದ್ದಾರೆ. ಶಿಕ್ಷಕರು ರಜೆಯಲ್ಲೂ ವಿಶೇಷ ತರಗತಿಗಳನ್ನು ನಡೆಸಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಜ್ಜುಗೊಳಿಸಿದ್ದರು. ಆದರೆ ಕೆಲವು ಮಾಧ್ಯಮಗಳನ್ನು ಬಳಸಿಕೊಂಡು ಆ ಯಮ್ಮಾ ( ರೋಹಿಣಿ ಸಿಂಧೂರಿ) ಪ್ರಚಾರ ಪಡೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ.

ಅವರು ಯಾವುದಾದರೂ ಶಾಲೆಯಲ್ಲಿ ಒಂದು ದಿನವಾದ್ರೂ ಪಾಠ ಮಾಡಿದ್ರಾ ? ಎಷ್ಟು ದಿನ ಶಿಕ್ಷಕರ ಸಭೆ ಕರೆದು ಪ್ರರೇಪಿಸಿದ್ದಾರೆ ಹೇಳಲಿ ನೋಡೋಣ. ಶಿಕ್ಷಕರ ಬೋಧನಾ ಸಾಮರ್ಥಯ ಪರೀಕ್ಷೆ ನಡೆಸಲು ನೋಟಿಸ್‌ ಕೊಟ್ಟು ವಿವಾದ ಸೃಷ್ಟಿ ಮಾಡಿದ್ದರು. ಅದು ವಿಧಾನಸಭೆಯಲ್ಲೂ ಚರ್ಚೆಯಾಗಿ ಕೊನೆಗೆ ನೋಟಿಸ್‌ ವಾಪಸ್‌ ತೆಗೆದುಕೊಂಡಿ‌ದ್ದರು ಎಂದು ನೆನಪಿಸಿದರು.

ಸಾಧಕ ವಿದ್ಯಾರ್ಥಿಗಳಿಗೆ ಸಚಿವ ರೇವಣ್ಣ ಸನ್ಮಾನ: ಎಸ್ಸೆಸ್ಸೆಲ್ಸಿ ಪರೀಕ್ಷಾ ಫ‌ಲಿತಾಂಶದಲ್ಲಿ ರಾಜ್ಯದಲ್ಲಿ 2 ನೇ ಸ್ಥಾನ ಪಡೆದ ಹಾಸನದ ಇಬ್ಬರು ವಿದ್ಯಾರ್ಥಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಡಿ.ರೇವಣ್ಣ ಅವರು ಬುಧವಾರ ಸನ್ಮಾನಿಸಿದರು.

625ಕ್ಕೆ 624 ಅಂಕಗಳನ್ನು ಪಡೆದಿರುವ ಪ್ರೌಢಶಾಲಾ ಶಿಕ್ಷಕ ದಂಪತಿ ಮಂಜುನಾಥ್‌ ಮತ್ತು ಮಂಜುಳಾ ದಂಪತಿ ಪುತ್ರಿ ಪ್ರಗತಿ ಎಂ.ಗೌಡ ಹಾಗೂ ನಿವೃತ್ತ ಯೋಧನ ಪುತ್ರ ಬೆಟ್ಟೇಗೌಡ ಮತ್ತು ಸುಜಾತ ದಂಪತಿ ಪುತ್ರ ಬಿ.ಅಭಿನ್‌ ಅವರ ನಿವಾಸಕ್ಕೇ ತೆರಳಿ ಸನ್ಮಾನಿಸಿ ಅಭಿನಂದಿಸಿದರು. ಪೋಷಕರ ಪ್ರೋತ್ಸಾಹವನ್ನೂ ಈ ಸಂದರ್ಭದಲ್ಲಿ ಸಚಿವರು ಪ್ರಶಂಸಿದರು.

Advertisement

Udayavani is now on Telegram. Click here to join our channel and stay updated with the latest news.

Next