Advertisement

ಕೋವಿಡ್ ಕಾಲದ ಅಳಲುಗಳು

07:52 PM Dec 09, 2020 | Suhan S |

ರೇಷ್ಮೆ ಸೀರೆಗಳು- “ನಮ್ಮನ್ನು ಹೊರ ತೆಗೆದು ಸ್ವಲ್ಪ ಉಸಿರಾಡಲು ಅವಕಾಶ ಮಾಡಿಕೊಟ್ಟರೆ ಸಾಕು” ಎಂದುಕೊಳ್ಳುತ್ತಿದ್ದವು. ಸಿಂಥೆಟಿಕ್‌ ಸೀರೆಗಳು, ಮನೆಯಾಕೆಯು ತಮ್ಮನ್ನುಕೆಲಸಕ್ಕೆ ಬರುವ ಲಕ್ಷ್ಮಮ್ಮ, ರತ್ನಮ್ಮರಿಗೆ ದಾನ ಮಾಡಿದರೆ, ಅವರಾದರೂ ನಿತ್ಯ ಉಡುವಾಗ ಹೊರ ಹೋಗುವ ಸ್ವಾತಂತ್ರ್ಯ ಸಿಕ್ಕಬಹುದೆಂಬ ಆಸೆಯಲ್ಲಿ ಕಾಯುತ್ತಿದ್ದವು.

Advertisement

ನೀಟಾಗಿ ಗಂಜಿ ಹಾಕಿಸಿಕೊಂಡು ಇಸ್ತ್ರಿ ಮಾಡಿಸಿಕೊಂಡಕಾಟನ್‌ ಸೀರೆಗಳು-” ತಮ್ಮ ಸೌಂದರ್ಯವನ್ನು ಕಂಡು ಯಾರೂ ಹೊಗಳುವ ಅವಕಾಶವೇಕಳೆದ ಏಳೆಂಟು ತಿಂಗಳಿಂದ ದೊರೆತಿಲ್ಲವೆಂದು” ಬೇಸರಿಸುತ್ತಿದ್ದವು.

ನಿತ್ಯದ ಹತ್ತಿಯ ಚೂಡಿದಾರಗಳ ಗೋಳು ಇನ್ನೊಂದು ತರಹ. “ಮನೆ ಎದುರಿನ ತರಕಾರಿ ಅಂಗಡಿಗೆ ಹತ್ತು ನಿಮಿಷ ಹೋಗಿ ಬಂದರೂ ನಮ್ಮನ್ನೆತ್ತಿ ಬಟ್ಟೆ ಒಗೆಯುವ ಯಂತ್ರದೊಳಗೆ ತುರುಕುತ್ತಾಳೆ. ಯಾರೂ ನಮ್ಮನ್ನು ನೋಡಿ ಚೆನ್ನಾಗಿದ್ದೇವೆಂದು ಹೊಗಳಲು ಅವಕಾಶವನ್ನೇ ನೀಡುತ್ತಿಲ್ಲ’. ಮೊದಲು ಸಾಧಾರಣ ನೀರಿನಿಂದ ಒಗೆಯಲ್ಪಡುತ್ತಿದ್ದ ಹತ್ತಿ ಬಟ್ಟೆಗಳು ಈಗ ಬಿಸಿ ನೀರಿನ ಒಗೆತದಿಂದ ಹೈರಾಣಾಗಿ ಹೋಗಿವೆ. ಜೊತೆಗೆ ಬೆಡ್‌ ಶೀಟು, ದಿಂಬಿನ ಹೊದಿಕೆ, ಟವೆಲುಗಳೂ “ಈ ಬಿಸಿನೀರಿನ ಒಗೆತ, ಸೋಪಿನ ಹೊಡೆತ ತಿಂದೂ ತಿಂದೂ ಸಾಕಾಗಿದೆ’ ಎಂದು ಮೊರೆ ಇಡುತ್ತಿದ್ದವು. ದುಪ್ಪಟ್ಟು ಡ್ನೂಟಿ ಮಾಡಿ ಹೈರಾಣಾಗಿದ್ದೇನೆಂಬುದು ಬಟ್ಟೆ ಒಗೆಯುವ ಯಂತ್ರದ ಗೊಣಗು.

ನೆಲ, ಪಾತ್ರೆಗಳು ಸೋಪು, ಸ್ವತ್ಛಗೊಳಿಸುವ ರಾಸಾಯನಿಕಗಳ ವಾಸನೆ ತಿಂದು ಸೋತು ಹೋಗಿದ್ದೇವೆಂದು ತಲೆಮೇಲೆಕೈ ಹೊತ್ತು ಕುಳಿತಿದ್ದರೆ, ಪಾತ್ರೆ ತೊಳೆಯುವ ದ್ರಾವಣ “ನನ್ನನ್ನು ಉಪಯೋಗಿಸಿ ಮನೆ ಯಜಮಾ ನಿಯಕೈಬೆರಳುಗಳೇ ತೊಂದರೆಯಲ್ಲಿವೆ. ಇನ್ನು ನಿಮ್ಮದೇನು? ಅವಳು ಆಗಾಗ್ಗೆಕೈಗಳಿಗೆ ಮುಲಾಮು ತಿಕ್ಕುತ್ತಿರುವುದನ್ನು ನೋಡಿಲ್ಲವೇ?” ಎಂದು ಉಲಿಯಿತು. ಅಪರೂಪಕ್ಕೊಮ್ಮೆ ಹೊರ ಹೋಗುವಾಗ ಮನೆಯೊಡತಿ ತಾನು ಧರಿಸಿರುವ ಚಿನ್ನವನ್ನು ಎತ್ತಿಟ್ಟು, ಗಿಲೀಟು ಆಭರಣಗಳನ್ನು ತೊಟ್ಟು ಹೊರಡುವಾಗ ಚಿನ್ನದ ಮಹಾಕೋಪ ನೆತ್ತಿಯಮೇಲೆ. ಗಿಲೀಟು ಆಭರಣಗಳು, “ಮುಂಚೆ ನಮ್ಮನ್ನು ಕಡೆಗಣಿಸಿ ನಿಮ್ಮನ್ನೇ ಮೆರೆಯಿಸುತ್ತಿದ್ದಳಲ್ಲಾ. ಅದು ಮರೆತೇ ಹೋಯಿತೇನು? ಈಗ ಏನಿದ್ದರೂ ನಮ್ಮದೇ ಹವಾ!” ಎಂದು ಬೆನ್ನು ತಟ್ಟಿಕೊಳ್ಳುತ್ತಿದ್ದವು. ಕೊನೆಗಂತೂ ಕೈಕೈ ಮಿಲಾಯಿಸಿ ಜೋರಾಗಿ ಜಗಳವಾಡತೊಡಗಿದವು.

***

Advertisement

ಜಗಳದ ಶಬ್ದಕೇಳಿ ಕಣ್ತೆರೆದಾಗ ಸೂರ್ಯ ಸಾಕಷ್ಟು ಮೇಲೆ ಬಂದಿದ್ದ. ಎದ್ದು ಗಡಿಬಿಡಿಯಿಂದ ನಿತ್ಯದಕೆಲಸಗಳಲ್ಲಿ ಮಗ್ನಳಾದೆ.ಕೋವಿಡ್ ಮನುಷ್ಯರಿಗಷ್ಟೇ ಅಲ್ಲದೆ ಇತರ ವಸ್ತುಗಳ ಜೀವನದ ಮೇಲೂ ಸಾಕಷ್ಟು ಪ್ರಭಾವ ಬೀರಿರುವ ಕಲ್ಪನೆಯಲ್ಲಿ ಮುಳುಗಿ ಹೋದೆ.

 

ಡಾ. ಉಮಾಮಹೇಶ್ವರಿ. ಎನ್‌.

Advertisement

Udayavani is now on Telegram. Click here to join our channel and stay updated with the latest news.

Next