ಬೆಂಗಳೂರು: ಆಹಾರ ಪ್ರಿಯರಿಗಾಗಿ ದೇಶ, ವಿದೇಶಗಳ ಭಿನ್ನ-ವಿಭಿನ್ನ ಖಾದ್ಯಗಳ ಸವಿಯುವ ಉದ್ದೇಶದಿಂದ ಐ ನೆಟ್ ವರ್ತಿಂಗ್ ಸಂಸ್ಥೆಯಿಂದ ಅ.27ರಿಂದ 29ರವರೆಗೆ 3 ದಿನಗಳ ಕಾಲ “ತಿಂಡಿ ಪೋತರ ಹಬ್ಬ 2023′ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಆಯೋಜಕ ಡಿ. ನರೇಶ್ ಬಾಬು ತಿಳಿಸಿದರು.
ಅತಿ ದೊಡ್ಡ ಫ್ರೀಡಂ ಸನ್ ಫ್ಲವರ್ ಆಯಿಲ್ ಪ್ರಸ್ತುತಪಡಿಸುತ್ತಿರುವ ಸಸ್ಯಹಾರಿ ಆಹಾರ ಮೇಳವನ್ನು ನಾಯಂಡಹಳ್ಳಿಯ ಪಂತರಪಾಳ್ಯದ ನಂದಿ ಲಿಂಕ್ ಮೈದಾನದಲ್ಲಿ ಆಯೋಜಿಸಲಾಗಿದ್ದು, 600ಕ್ಕೂ ಹೆಚ್ಚು ಬಗೆಯ ವಿವಿಧ ಆಹಾರ ಖಾದ್ಯಗಳ ಪ್ರದರ್ಶನ ಮತ್ತು ಮಾರಾಟ ಮೇಳ ಜರುಗಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈ ವೇಳೆ ಮಾತನಾಡಿದ ಒಗ್ಗರಣೆ ಡಬ್ಬಿ ಖ್ಯಾತಿಯ ಮುರಳಿ, ತಿಂಡಿ ಪೋತರ ಹಬ್ಬದಲ್ಲಿ 80ಕ್ಕೂ ಹೆಚ್ಚು ಮಳಿಗೆ ತೆರೆಯಲಾಗುತ್ತಿದ್ದು, ಸಾವಿರಕ್ಕೂ ಅಧಿಕ ಬಾಣಸಿಗರ ಸಸ್ಯಹಾರಿ ಖಾದ್ಯಗಳ ತಯಾರಿಯು ಆಹಾರ ಪ್ರಿಯರನ್ನು ಪುಳಕಿತಗೊಳಿಸಲಿದೆ. ಸ್ಥಳದಲ್ಲಿಯೇ ಅಡುಗೆ ತಯಾರಿಸಿ ಉಣ ಬಡಿಸುವ, ಕೆಲ ಮಳಿಗೆಗಳಲ್ಲಿ ಸಿದ್ಧಪಡಿಸಿ ಪ್ಯಾಕ್ ಮಾಡಿದ ಆಹಾರವನ್ನು ಸಹ ಗ್ರಾಹಕರಿಗೆ ವಿತರಿಸಲಾಗುವುದು. ಮೂರು ದಿನಗಳ ಈ ಹಬ್ಬದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರು ತಿಂಡಿ ಪೋತರ ಹಬ್ಬದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ಇದೊಂದು ಪರಿಸರ ಸ್ನೇಹಿ ಮತ್ತು ಶುಚಿತ್ವಕ್ಕೆ ಒತ್ತು ನೀಡುವ ಹಬ್ಬವಾಗಿದ್ದು, ಹಾಡು, ಕುಣಿತ, ಮನರಂಜನೆ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಸಾಂಪ್ರಾಯಿಕ ಆಹಾರ, ಉತ್ತರ, ದಕ್ಷಿಣ ಭಾರತ, ಸಾಂಪ್ರದಾಯಿಕ, ದೇಶಿ ಅಡುಗೆಗಳ ರುಚಿ ನೋಡಬಹುದಾಗಿದೆ. ಆರೋಗ್ಯಕ್ಕೆ ಪೂರಕವಾದ ಪೌಷ್ಟಿಕ ಆಹಾರವಷ್ಟೇ ಅಲ್ಲದೇ ವಿದೇಶಗಳ ತಿಂಡಿ-ತಿನಿಸುಗಳಿಗೂ ಪ್ರತ್ಯೇಕ ಮಳಿಗೆ ತೆರೆಯಲಾಗಿದೆ ಎಂದು ಕಾರ್ಯಕ್ರಮದ ಆಯೋಜಕ ಡಿ.ಡಿ ಪ್ರಶಾಂತ್ ತಿಳಿಸಿದರು.