ಸಾಗರ: ಬನ್ನಂಜೆ ಗೋವಿಂದಾಚಾರ್ಯ ಅವರು ಜ್ಞಾನದ ಬೆಳಕು. ಅವರ ಜ್ಞಾನ ಸಂಪತ್ತಿನ ಎದುರು ಎಂತಹ ವಾಗ್ಮಿಗಳಾದರೂ ಮೌನಿಯಾಗುತ್ತಿದ್ದರು ಎಂದು ಮಾಜಿ ಶಾಸಕ ಎಲ್.ಟಿ. ತಿಮ್ಮಪ್ಪ ಹೆಗಡೆ ತಿಳಿಸಿದರು. ಇಲ್ಲಿನ ಭಾರತೀತೀರ್ಥ ಸಭಾಭವನದಲ್ಲಿ ಶನಿವಾರ ಬನ್ನಂಜೆ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಲಾಗಿದ್ದ ಪದ್ಮಶ್ರೀ, ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ ಬದುಕು-ಬರಹಗಳ ಚಿಂತನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಯಾ ಕಾಲಘಟ್ಟದಲ್ಲಿ ಒಬ್ಬೊಬ್ಬರು ಮಹಾ ಪುರುಷರು ಜನಿಸಿ ಸಮಾಜವನ್ನು ಸನ್ಮಾರ್ಗದತ್ತ ಕರೆದೊಯ್ಯಲು ತಮ್ಮದೇ ಜ್ಞಾನಮಾರ್ಗದ ಮೂಲಕ ಪ್ರಯತ್ನಿಸುತ್ತಾರೆ. ಪ್ರಸ್ತುತ ಕಾಲಘಟ್ಟದಲ್ಲಿ ಬನ್ನಂಜೆ ತಮ್ಮ ಅಪಾರ ವಿದ್ವತ್ತಿನಿಂದ ಸಮಾಜಮುಖೀ ಚಿಂತನೆಯನ್ನು ತಮ್ಮ ಜ್ಞಾನಧಾರೆ ಮೂಲಕ ಪ್ರಸರಿಸಿದ್ದಾರೆ ಎಂದು ಹೇಳಿದರು.
ಕಳೆದ 15 ವರ್ಷಗಳಿಂದ ಬನ್ನಂಜೆ ಅವರ ಉಪನ್ಯಾಸವನ್ನು ಸಂಕಲನ ಬಚ್ಚಗಾರು ಸಂಸ್ಥೆಯ ಶುಂಠಿ ಸತ್ಯನಾರಾಯಣ ಭಟ್ಟ ಅವರು ಆಯೋಜಿಸುವ ಮೂಲಕ ನಮ್ಮೂರಿನ ಜನರ ಜ್ಞಾನಸಾಗರ ವಿಸ್ತರಿಸುವ ಪ್ರಯತ್ನ ನಡೆಸಿದ್ದರು. ಇದೀಗ ಬನ್ನಂಜೆ ಅವರು ನಮ್ಮ ಜೊತೆ ಇಲ್ಲ. ಅವರು ರಚಿಸಿದ ಗ್ರಂಥಗಳು, ಅವರ ಪ್ರವಚನಗಳು ನಮಗೆ ಅರಿವಿನ ಮಾರ್ಗದಲ್ಲಿ ಸಾಗುವ ಸಾಧನವಾಗಿ ಇದೆ. ಪ್ರತಿವರ್ಷ ಬನ್ನಂಜೆ ಅವರ ಕುರಿತು ಇಂತಹ ಚಿಂತನ- ಮಂಥನ ಕಾರ್ಯಕ್ರಮ ನಡೆಸುವ ಅಗತ್ಯವಿದೆ ಎಂದು ಹೇಳಿದರು.
“ಬನ್ನಂಜೆ ಅವರು ಬದುಕು-ಬರಹ’ ವಿಷಯ ಕುರಿತು ಮಾತನಾಡಿದ ವಿದ್ವಾನ್ ಲಕ್ಷ್ಮೀಶ್ ತೋಳ್ಪಾಡಿ, ಅವರ ಬದುಕು ಮತ್ತು ಬರಹದಲ್ಲಿ ಸಾಮ್ಯತೆ ಇತ್ತು. ಭಾರತೀಯ ವಿಚಾರಧಾರೆಗಳನ್ನು ಇರುವಂತೆಯೆ ಹೇಳುವ ಗಟ್ಟಿತನ ಅವರಲ್ಲಿ ನಾವು ಕಾಣಬಹುದು. ಅವರ ಬರಹದಲ್ಲಿ ಎಲ್ಲಿಯೂ ಅಸ್ಪಷ್ಟತೆಯನ್ನು ಕಾಣಲು ಸಾಧ್ಯವಿಲ್ಲ. ಅತ್ಯಂತ ನಿಖರವಾಗಿ ಅವರ ಬರಹಗಳು ಮೂಡಿ ಬಂದಿವೆ. ಭಾರತೀಯತೆ, ಕನ್ನಡತನ ಕುರಿತು ಅವರು ವಿಶ್ಲೇಷಿಸಿದ ರೀತಿ ಅರ್ಥಪೂರ್ಣವಾಗಿದೆ. ತಮಗೆ ಅನಿಸಿದ್ದನ್ನು ನಿಷ್ಠುರವಾದರೂ ಅದನ್ನು ಹೇಳುವ ಶಕ್ತಿ ಅವರಲ್ಲಿ ಕಾಣಬಹುದು ಎಂದು ಹೇಳಿದರು. “ಸಂಖ್ಯೆಯಲ್ಲಿ ಆಧ್ಯಾತ್ಮ’ ವಿಷಯ ಕುರಿತು ಡಾ| ಶಾಂತರಾಮ ಪ್ರಭು, “ಬನ್ನಂಜೆಯವರ ಒಡನಾಟ’ ಕುರಿತು ವಿದ್ವಾನ್ ಉಮಾಕಾಂತ್ ಭಟ್ಟ, “ಬನ್ನಂಜೆಯವರ ನಾಟಕಗಳು’ ವಿಷಯ ಕುರಿತು ಡಾ| ಕೆ.ಆರ್.ವೆಂಕಟರಮಣ ಐತಾಳ್ ಉಪನ್ಯಾಸ ನೀಡಿದರು.
ಇದನ್ನೂ ಓದಿ:ಅಕಾಲಿಕ ಮಳೆಗೆ ಭತ್ತದ ಫಸಲು ನಷ್ಟ: ಸಮೀಕ್ಷೆಗೆ ಆಗ್ರಹ
ಶೃಂಗೇರಿ ಶಂಕರಮಠದ ಧರ್ಮದರ್ಶಿ ಅಶ್ವಿನಿಕುಮಾರ್, ಸಂಕಲನ ಬಚ್ಚಗಾರು ಸಂಸ್ಥೆಯ ಶುಂಠಿ ಸತ್ಯನಾರಾಯಣ ಭಟ್, ರವೀಂದ್ರ ಪುಸ್ತಕಾಲಯದವೈ.ಎ. ದಂತಿ ಇದ್ದರು. ಮಹಾಬಲೇಶ್ವರ ಭಟ್ ಮತ್ತು ಸಂಗಡಿಗರು ವೇದಘೋಷ ಮೊಳಗಿಸಿದರು. ಪ್ರಭಾವತಿ ಎಸ್.ಕೆ. ಪ್ರಾರ್ಥಿಸಿದರು. ವಿದ್ವಾನ್ ಗಜಾನನ ಭಟ್ಟ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ನಾರಾಯಣಮೂರ್ತಿ ಕಾನುಗೋಡು ವಂದಿಸಿದರು. ಸದಾನಂದ ಶರ್ಮ ನಿರೂಪಿಸಿದರು.