ನವದೆಹಲಿ:ರಾಷ್ಟ್ರರಾಜಧಾನಿ ದೆಹಲಿಯ ಶಾಹದಾರಾ ಪ್ರದೇಶದಲ್ಲಿನ ಯೂನಿಯನ್ ಬ್ಯಾಂಕ್ ಶಾಖೆ ಕಟ್ಟಡದ ಗೋಡೆಯನ್ನು ಕೊರೆದ ಕಳ್ಳರು 55 ಲಕ್ಷ ರೂಪಾಯಿ ನಗದನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆ ಭಾನುವಾರ ((ಜೂನ್ 20) ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ನಿತೀಶ್ ಕುಮಾರ್ ಬಿಟ್ಟು ಹೋದಾಗ ನಾವು ನಿಮ್ಮ ಜೊತೆಯಿದ್ದೆವು: ಬಿಜೆಪಿಗೆ ನೆನಪು ಮಾಡಿದ ಚಿರಾಗ್
ಬ್ಯಾಂಕ್ ಗೋಡೆಯನ್ನು ಕೊರೆದು ಒಳನುಗ್ಗಿದ್ದ ಕಳ್ಳರು ಗ್ಯಾಸ್ ಕಟ್ಟರ್ ಉಪಯೋಗಿಸಿ ಸೇಫ್ ಲಾಕರ್ ನಲ್ಲಿದ್ದ 55 ಲಕ್ಷ ರೂಪಾಯಿ ನಗದು ದೋಚಿಕೊಂಡು ಹೋಗಿರುವುದಾಗಿ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ವರದಿ ವಿವರಿಸಿದೆ.
ಸೋಮವಾರ ಬೆಳಗ್ಗೆ ನೌಕರರು ಬ್ಯಾಂಕ್ ಗೆ ಆಗಮಿಸಿದಾಗ ಸೇಫ್ ಲಾಕರ್ ಅನ್ನು ಕತ್ತರಿಸಿ ಹಣ ದೋಚಿಕೊಂಡು ಹೋಗಿರುವುದು ಪತ್ತೆಯಾಗಿತ್ತು. ಬ್ಯಾಂಕ್ ಅಧಿಕಾರಿಗಳ ಪ್ರಕಾರ, ಶುಕ್ರವಾರ ಮತ್ತು ಶನಿವಾರ ಬ್ಯಾಂಕ್ ಗೆ ಡೆಪಾಸಿಟ್ ಆದ ಸುಮಾರು 55 ಲಕ್ಷ ರೂಪಾಯಿ ನಗದನ್ನು ಕದ್ದೊಯ್ದಿರುವುದಾಗಿ ತಿಳಿಸಿದ್ದಾರೆ.
ಭಾನುವಾರ ರಾತ್ರಿ ಈ ಕಳ್ಳತನ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಕಳ್ಳರ ಗುರುತನ್ನು ಇನ್ನಷ್ಟೇ ಪತ್ತೆಹಚ್ಚಬೇಕಾಗಿದ್ದು, ಬಳಿಕ ಬಂಧನ ಕಾರ್ಯ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳ್ಳರು ಬ್ಯಾಂಕ್ ಒಳಗೆ ಆಗಮಿಸಿದ ಕೂಡಲೇ ಬ್ಯಾಂಕ್ ಒಳಗಿದ್ದ ಸಿಸಿಟಿವಿಯನ್ನು ಸ್ವಿಚ್ ಆಫ್ ಮಾಡಿದ್ದರು. ಅಷ್ಟೇ ಅಲ್ಲ ಡಿಜಿಟಲ್ ವಿಡಿಯೋ ರೆಕಾರ್ಡರ್ ಅನ್ನು ಕೂಡಾ ಬಂದ್ ಮಾಡಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಟೈಮ್ಸ್ ಆಫ್ ಇಂಡಿಯಾಕ್ಕೆ ವಿವರ ನೀಡಿರುವುದಾಗಿ ವರದಿಯಾಗಿದೆ.