Advertisement

ದಡ್ಡರೇ ಹಾಕಿಂಗ್‌ ಆಗ್ತಾರೆ!

05:37 PM Mar 20, 2018 | |

ಸರಿಯಾಗಿ ಓದಲು ಬಾರದ, ಅತ್ಯಂತ ಕೆಟ್ಟ ಕೈ ಬರಹದ, ಯಾವ ವಿಷಯದಲ್ಲೂ ಆಸಕ್ತಿ ತೋರದ ಮಗುವನ್ನು ಈ ಜಗತ್ತು ಹೇಗೆ ನೋಡುತ್ತದೆ? “ಅಯ್ಯೋ, ಅವನಾ ಶತದಡ್ಡ’ ಎಂದು ಶಿಕ್ಷಕರು ದೂರುತ್ತಾರೆ, “ನನ್ನ ಮಗನ್ಯಾಕೆ ಹೀಗಾದ?’ ಎಂದು ಹೆತ್ತವರು ಗಾಬರಿಯಾಗುತ್ತಾರೆ. ಅಂಥ ಹುಡುಗನೊಬ್ಬನಿಗೆ ಅಂಗವೈಕಲ್ಯವೂ ಜೊತೆಯಾದರೆ ಏನಾಗಬಹುದು? ಇತ್ತೀಚೆಗೆ ನಮ್ಮನ್ನು ಅಗಲಿದ ಸ್ಟೀಫ‌ನ್‌ ಹಾಕಿಂಗ್‌, ಆ ಎಲ್ಲ ಆಪಾದನೆಗಳನ್ನು ಮೆಟ್ಟಿ ನಿಂತಿದ್ದರು…

Advertisement

“ಸಾವು ಸನಿಹದಲ್ಲಿಯೇ ಬಂದು ಕಾಯುತ್ತಿದೆ ಅಂತ ಗೊತ್ತಾದಾಗಲೇ ಬದುಕಿನ ಬೆಲೆ ಗೊತ್ತಾಗೋದು. ನಾವು ಮಾಡಬೇಕಾದ ಕೆಲಸ ಇನ್ನೂ ಬೇಕಾದಷ್ಟಿದೆ ಅಂತ ಗೊತ್ತಾಗುವುದೂ ಆಗಲೇ…’ ಈ ಮಾತನ್ನು ಹೇಳಿದ್ದು ಇತ್ತೀಚೆಗೆ ನಮ್ಮನ್ನಗಲಿದ ಜಗದ್ವಿಖ್ಯಾತ ವಿಜ್ಞಾನಿ ಸ್ಟೀಫ‌ನ್‌ ಹಾಕಿಂಗ್‌. ಇಡೀ ಜೀವಮಾನವನ್ನು ವೀಲ್‌ಚೇರ್‌ ಮೇಲೆಯೇ ಕಳೆದ, ದೇಹದ ಬಹುತೇಕ ಅಂಗಗಳು ನಿಷ್ಕ್ರಿಯವಾದರೂ, ಕೈ ಬೆರಳ ಚಲನೆಯಿಂದ ಹೊಸ ಹೊಸ ಸಂಗತಿಗಳನ್ನು ಕೆದಕಿ ಸಂಚಲನ ಮೂಡಿಸಿದ ಮೇಧಾವಿ ಈತ.

ಆತನ ಬದುಕಿನ ಗಾಥೆಯೂ, ಆತನ ಸಂಶೋಧನೆಗಳಷ್ಟೇ ರೋಚಕವಾಗಿವೆ. ಎಂಟನೇ ವರ್ಷದವರೆಗೆ ಸ್ಟೀಫ‌ನ್‌ಗೆ ಓದುವುದಕ್ಕೂ ಬರುತ್ತಿರಲಿಲ್ಲ. ಆತನ ಅಕ್ಕ ನಾಲ್ಕನೇ ವರ್ಷಕ್ಕೆಲ್ಲ ಸರಾಗವಾಗಿ ಓದುವುದನ್ನು ಕಲಿತಿದ್ದಳು. ಓದು- ಬರಹದಲ್ಲಿ ಆಸಕ್ತಿ ಇರದಿದ್ದ ಈತ ಎಲ್ಲರ ಕಣ್ಣಿಗೆ ನಿಷ್ಪ್ರಯೋಜಕನಂತೆ ಕಾಣಿಸುತ್ತಿದ್ದ. ಶಾಲೆಯಲ್ಲಿ ಸ್ಟೀಫ‌ನ್‌ ಹೆಸರು ಮಾಡಿದ್ದೂ ತನ್ನ ಅತ್ಯಂತ ಕೆಟ್ಟ ಕೈ ಬರಹದ ಮೂಲಕ. ಆತ ಬರೆದಿದ್ದನ್ನು ಓದಲು ಶಿಕ್ಷಕರು ತಡವರಿಸುತ್ತಿದ್ದರು.

ಹೋಂ ವರ್ಕ್‌ ಪುಸ್ತಕವನ್ನು ಆತ ಸರಿಯಾಗಿ ಬರೆದ ದಿನಗಳೇ ಇಲ್ಲ. ವಿಭಿನ್ನವಾಗಿ ಯೋಚಿಸುತ್ತಿದ್ದ ಕಾರಣದಿಂದಲೋ ಏನೋ ಆತನ ಸ್ನೇಹಿತರು ಅವನನ್ನು “ಐನ್‌ಸ್ಟಿàನ್‌’ ಎಂದು ಕರೆಯುತ್ತಿದ್ದರು. ಶಿಕ್ಷಕರಿಂದ, ಸೋಮಾರಿ ಹುಡುಗ, ಶತದಡ್ಡ ಅನ್ನಿಸಿಕೊಂಡಿದ್ದ ಸ್ಟೀಫ‌ನ್‌ಗೆ ರುಚಿಸುತ್ತಿದ್ದುದು ಗಣಿತದ ಕ್ಲಾಸ್‌ ಮಾತ್ರ! ಸೇಂಟ್‌ ಆಲ್ಬನ್‌ ಶಾಲೆಯಲ್ಲಿ ಗಣಿತ ಶಿಕ್ಷಕರಾಗಿದ್ದ ತಹ್ತಾ, ಸ್ಟೀಫ‌ನ್‌ನ ಮೆಚ್ಚಿನ ಶಿಕ್ಷಕರಾಗಿದ್ದರು.

“ಇಡೀ ವಿಶ್ವದ ನೀಲನಕ್ಷೆಯೇ ಗಣಿತ’ ಅಂತ ಅರ್ಥ ಮಾಡಿಸಿದರು. ಸೋಮಾರಿ ಹುಡುಗನಲ್ಲಿದ್ದ ವಿಜ್ಞಾನದ ಬಗೆಗಿನ ಆಸಕ್ತಿಯನ್ನು ಗುರುತಿಸಿದವರೂ ಅವರೇ. ಅವರಿಂದಾಗಿಯೇ ತಾನು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಗಣಿತದ ಪ್ರೊಫೆಸರ್‌ ಆಗಲು ಸಾಧ್ಯವಾಯ್ತು ಎಂದು ಸ್ಟೀಫ‌ನ್‌ ನೆನಪಿಸಿಕೊಂಡಿದ್ದಾರೆ. ಮುಂದೆ ಆಕ್ಸ್‌ಫ‌ರ್ಡ್‌ ವಿವಿಯಲ್ಲಿ ಭೌತಶಾಸ್ತ್ರದಲ್ಲಿ ಪ್ರಥಮ ದರ್ಜೆಯಲ್ಲಿ ಪಾಸ್‌ ಆದರೂ, ಸ್ಟೀಫ‌ನ್‌ ಓದುತ್ತಾ ಇದ್ದುದು ಕೇವಲ ಒಂದು ಗಂಟೆ ಮಾತ್ರ.

Advertisement

ಯಾವುದರಲ್ಲೂ ಸ್ಟೀಫ‌ನ್‌ಗೆ ಹೆಚ್ಚಿನ ಆಸಕ್ತಿ ಇರಲಿಲ್ಲ. ಹೀಗಿರುವಾಗ 21ನೇ ವರ್ಷದಲ್ಲಿ ಆತ ಎಎಲ್‌ಎಸ್‌ ಎಂಬ ಕಾಯಿಲೆಗೆ ತುತ್ತಾದರು. ವೈದ್ಯರು “ನೀವಿನ್ನು ಬದುಕುವುದು ಕೆಲವೇ ವರ್ಷಗಳು’ ಅಂದುಬಿಟ್ಟರು! “ಅಯ್ಯೋ, ನನಗಿರೋದು ಇಷ್ಟೇ ಸಮಯವಾ? ಮಾಡೋ ಕೆಲಸ ಬೇಕಾದಷ್ಟಿದೆಯಲ್ಲ’ ಅಂತನ್ನಿಸಿತು. ನಾನು ಏನಾದರೂ ಮಾಡೇ ಮಾಡ್ತೀನಿ ಅಂತ ಛಲ ಹುಟ್ಟಿತು. ಮುಂದೆ ಸ್ಟೀಫ‌ನ್‌ ಸಂಶೋಧಿಸಿದ್ದೆಲ್ಲವೂ ಸಾಧನೆಯೇ.

ಬದುಕಿನ ಮೌಲ್ಯವೇನೆಂದು ಕಲಿಸಿದ ಸಾವಿನೊಡನೆ ನಿತ್ಯ ಸೆಣಸುತ್ತಲೇ ಸಾರ್ಥಕವಾಗಿ ಬದುಕಿಬಿಟ್ಟರು, ಎಂದಿಗೂ ಸಾವೇ ಇಲ್ಲದಂತೆ. ಯಾರನ್ನು ನಾವು ಶಾಲೆಗಳಲ್ಲಿ, ಅಂಕದ ಆಧಾರದ ಮೇಲೆ ಮೂಲೆಗುಂಪು ಮಾಡುತ್ತೇವೋ ಅವರು ದಡ್ಡರಲ್ಲ. ಮುಂದೊಂದು ದಿನ ಅವರೇ ಇತಿಹಾಸ ಸೃಷ್ಟಿಸಲೂಬಹುದು. ಮಗುವಿಗೆ ತನ್ನ ಆಸಕ್ತಿಯ ವಿಷಯವನ್ನು ಗುರುತಿಸುವ, ಅದರಲ್ಲಿ ಮುಂದೆ ಹೋಗುವ ಸ್ವಾತಂತ್ರ್ಯ, ಪ್ರೋತ್ಸಾಹ ಸಿಗಬೇಕಷ್ಟೇ. ಹಾಗಾದಾಗಲಷ್ಟೇ ನಮ್ಮ ನಡುವೆಯೂ ಸ್ಟೀಫ‌ನ್‌ನಂಥ ಅಚ್ಚರಿಗಳು ಅರಳಲು ಸಾಧ್ಯ.

* ಪ್ರಿಯಾಂಕಾ

Advertisement

Udayavani is now on Telegram. Click here to join our channel and stay updated with the latest news.

Next