ತೆಕ್ಕಟ್ಟೆ : ಇಲ್ಲಿನ ಬೇಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಳ್ಳಾಡಿ ಸೇತುವೆ ತಳಭಾಗದಲ್ಲಿ ಜನ ವಸತಿ ಪ್ರದೇಶದ ಸಮೀಪದಲ್ಲಿಯೇ ಕೊಳೆತು ನಾರುತ್ತಿರುವ ಕೋಳಿ ತ್ಯಾಜ್ಯವನ್ನು ತಂದು ಎಲ್ಲೆಂದರಲ್ಲಿ ಎಸೆಯಲಾಗಿದೆ. ಪರಿಣಾಮ ಗ್ರಾಮದಲ್ಲಿ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದ್ದು ಈ ಕುರಿತು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಗಬ್ಬು ನಾರುತ್ತಿದೆ ಪರಿಸರ
ಮಣೂರು ಕೊೖಕೂರು ಮಾರ್ಗದಿಂದ ಬೇಳೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗದ ಗುಳ್ಳಾಡಿ ಸೇತುವೆಯ ಎರಡು ಭಾಗಗಳ ಕೋಳಿ ಫಾರ್ಮ್ ಗಳಿಂದ ಹೊರ ಹಾಕುವ ಕೋಳಿ ತ್ಯಾಜ್ಯ, ಹೊಟೇಲ್ ತ್ಯಾಜ್ಯ ಹಾಗೂ ಮೂಟೆಗಟ್ಟಲೆ ಪ್ಲಾಸ್ಟಿಕ್‌ಗಳನ್ನು ಎಲ್ಲೆಂದರಲ್ಲಿ ಎಸೆದ ಪರಿಣಾಮವಾಗಿ ಪರಿಸರ ಸಂಪೂರ್ಣ ಗಬ್ಬುನಾರುತ್ತಿದೆ. ಪರಿಣಾಮವಾಗಿ ಈ ಮಾರ್ಗದಲ್ಲಿ ಶಾಲಾ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಮೂಗು ಮುಚ್ಚಿಕೊಂಡೆ ಸಂಚರಿಸಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.
ಬೀದಿ ನಾಯಿಗಳ ಕಾಟ
ಕೋಳಿ ತ್ಯಾಜ್ಯವನ್ನು ಅರಸಿ ಬರುತ್ತಿರುವ ಬೀದಿ ನಾಯಿಗಳು ಒಂದೆಡೆ ಸೇರುತ್ತಿವೆ. ಪರಿಣಾಮವಾಗಿ ಸ್ಥಳೀಯ ಸರಕಾರಿ ಶಾಲೆಗಳಿಗೆ ತೆರಳುವ ವಿದ್ಯಾರ್ಥಿಗಳು ಭಯದ ನೆರಳಲ್ಲಿ ತಿರುಗಬೇಕಾದ ಪರಿಸ್ಥಿತಿ ಇದೆ. ಸಂಭವನೀಯ ಅವಘಡಗಳು ಸಂಭವಿಸುವ ಮುನ್ನ ಸ್ಥಳೀಯಾಡಳಿತ ಮುಂಜಾಗ್ರತ ಕ್ರಮ ಕೈಗೊಂಡಲ್ಲಿ ಉತ್ತಮ ಎಂಬುದು ಸಾರ್ವಜನಿಕರ ಅಭಿಪ್ರಾಯ.
– ಲೋಕೇಶ್ ಆಚಾರ್ಯ ತೆಕ್ಕಟ್ಟೆ