ಬೆಂಗಳೂರು: ಹಗಲು ಮತ್ತು ರಾತ್ರಿ ವೇಳೆ ಮನೆಗಳವು ಹಾಗೂ ವಾಹನ ಕಳವು ಮಾಡುತ್ತಿದ್ದ ಪ್ರಕರಣಗಳ ಸಂಬಂಧ ನಗರದ ಕುಖ್ಯಾತ ಮನೆಗಳ್ಳ ಕೊಮ್ಮಘಟ್ಟ ಮಂಜನ ಸಹಚರ ಸೇರಿದಂತೆ 11 ಆರೋಪಿಗಳನ್ನು ಬಂಧಿಸಿರುವ ಉತ್ತರ ವಿಭಾಗದ ಪೊಲೀಸರು, 72 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
ಆರೋಪಿಗಳ ಬಂಧನದಿಂದ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ 41 ಪ್ರಕರಣಗಳು ಪತ್ತೆಯಾಗಿದ್ದು, ಬಂಧಿತರಿಂದ ಚಿನ್ನಾಭರಣಗಳು, ಮೊಬೈಲ್, ಬೈಕ್, ತ್ರಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತೆ ಮಾಲಿನಿ ಕೃಷ್ಣಮೂರ್ತಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಗರದ ಜೆ.ಕೆ.ಡಬ್ಲೂ ಲೇಔಟ್‌ನಲ್ಲಿ ಬೀಗ ಹಾಕಿದ್ದ ಮನೆಗಳ ಬಾಗಿಲು ಒಡೆದು ಚಿನ್ನಾಭರಣ ಹಾಗೂ ಹಣ ದೋಚುತ್ತಿದ್ದ ಆರೋಪಿ ಶಿವರಾಜ ಎಂಬಾತನನ್ನು ರಾಜಗೋಪಾಲನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕುಣಿಗಲ್ ಮೂಲದ ಶಿವರಾಜ ಇತ್ತೀಚೆಗೆ ಶೂಟೌಟ್‌ನಲ್ಲಿ ಗಾಯಧಿಗೊಂಡ ಕುಖ್ಯಾತ ಮನೆ ಕಳ್ಳ ಕೊಮ್ಮಘಟ್ಟ ಮಂಜನ ಶಿಷ್ಯ ಎಂಬುದು ತಿಳಿದುಬಂದಿದೆ. ಈತನಿಂದ 12 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಮಕ್ಕಳನ್ನು ಆಟವಾಡಿಸುವ ನೆಪದಲ್ಲಿ ಅಕ್ಕಪಕ್ಕದ ಮನೆಯವರನ್ನು ಪರಿಚಯಿಸಿಕೊಂಡು ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಹಣ ದರೋಡೆ ಮಾಡುತ್ತಿದ್ದ ಶಿಲ್ಪಾ ಎಂಬಾಕೆಯನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೋಜಿನ ಜೀವನಕ್ಕಾಗಿ ಈ ಕೃತ್ಯವೆಸಗುತ್ತಿದ್ದ ಶಿಲ್ಪಾ, ಮಕ್ಕಳನ್ನು ಆಟವಾಡಿಸುವ ನೆಪದಲ್ಲಿ ಸ್ಥಳೀಯರ ಮನೆಗಳಿಗೆ ಹೋಗಿ ಮನೆ ಸದಸ್ಯರ ಮಾಹಿತಿ ಸಂಗ್ರಹಿಸಿ, ಮನೆಯಲ್ಲಿ ಯಾರು ಇಲ್ಲದ ವೇಳೆ ಕಳವು ಮಾಡುತ್ತಿದ್ದಳು.
ಮೊಬೈಲ್ ಶೋ ರೂಂನ ಶೆಲ್ಟರ್ ಮುರಿದು ವಿವಿಧ ಕಂಪನಿಯ ಮೊಬೈಲ್‌ಗಳನ್ನು ಕಳವು ಮಾಡಿದ್ದ ಜಬಿ, ಸೈಯದ್ ಹಾಗೂ ಮುಜಾಹೀದ್ ಎಂಬುವರನ್ನು ಗಂಗಮ್ಮನಗುಡಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 3 ಲಕ್ಷ ಮೌಲ್ಯದ 88 ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಮೋಜಿನ ಜೀವನಕ್ಕಾಗಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್, ಆಟೋಗಳನ್ನು ಕಳವು ಮಾಡುತಿದ್ದ ರಾಮಲಿಂಗಪ್ಪ, ಬಾಷಾ ಎಂಬುಧಿವರನ್ನು ಪೀಣ್ಯ ಪೊಲೀಸರು ಬಂಧಿಸಿದ್ದು, 16 ಲಕ್ಷ ಮೌಲ್ಯದ 25 ಬೈಕ್‌ಗಳು, ಒಂದು ಆಟೋ ವಶಪಡಿಸಿಕೊಂಡಿದ್ದಾರೆ. ಆರೋಪಿಗಳು, ಕಳವು ಮಾಡಿದ ವಾಹನಗಳನ್ನು ಜಸ್ವಂತ್ ಶರತ್‌ಬಾಬು ಎಂಬಾತನ ಸಹಾಯದಿಂದ ರಾಯಚೂರು, ಕೊಪ್ಪಳ ಜಿಲ್ಲೆಗಳಿಗೆ ಕೊಂಡೊಯ್ದು ಮಾರಾಟ ಮಾಡುತ್ತಿದ್ದರು ಎಂದು ವಿವರಿಸಿದರು.
ಮೂವರು ಮನೆಗಳ್ಳರನ್ನು ಬಂಧಿಸಿರುವ ಯಶವಂತಪುರ ಪೊಲೀಸರು 32 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 2 ಬೈಕ್ ವಶಪಡಿಸಿಕೊಂಡಿದ್ದಾರೆ ಶ್ರೀನಿವಾಸ, ಸತೀಶ್ ಹಾಗೂ ಶ್ರೀಧರ್ ಅಲಿಯಾಸ್ ಮಾಲಾಶ್ರೀ ಬಂಧಿತರು. ಆರೋಪಿಗಳು ಹಗಲು ಮತ್ತು ರಾತ್ರಿ ವೇಳೆ ಬೀಗ ಹಾಕಿದ್ದ ಮನೆಗಳನ್ನು ಗುರುತಿಸಿಕೊಂಡು ಕಳವು ಮಾಡುತ್ತಿದ್ದರು ಎಂದು ಮಾಲಿನಿ ಕೃಷ್ಣಮೂರ್ತಿ ತಿಳಿಸಿದರು.