ನಾನು ಭೂಮಿಗಿಳಿದು, ಕಣ್ಣು ಬಿಡುವ ಮುನ್ನ ನಡೆದ ಘಟನೆಯಿದು. ನಾನು ಪ್ರತ್ಯಕ್ಷ ಸಾಕ್ಷಿಯೇ ಆದರೂ, ನನಗೇನೂ ಗೊತ್ತಿಲ್ಲದ, ಅಮ್ಮ- ಅಜ್ಜಿಯಿಂದ ಕೇಳಿ ರೋಮಾಂಚಿತನಾದ, ನನ್ನ ಜೀವದಾತನನ್ನು ಸದಾ ನೆನೆಯುವಂತೆ ಮಾಡಿದ ಘಟನೆ. ಮಲೆನಾಡಿನಲ್ಲಿ ಮುಂಗಾರಿನ ಆರ್ಭಟ.
ಮಗು ಹುಟ್ಟಿದ ಕೂಡಲೆ ಅಳುವುದು ಸಾಮಾನ್ಯ. ಆದರೆ ಹುಟ್ಟಿ, ದಿನ ಕಳೆದರೂ ಅಳುವನ್ನೇ ಹೊರಹಾಕದೆ, ಉಸಿರಿದ್ದೂ ಉಸಿರಾಡದಂತಿದ್ದು, ಎಲ್ಲರೆದೆಯೊಳಗೂ ತಲ್ಲಣ ಹುಟ್ಟಿಸಿದ್ದೆನಂತೆ. ಆಗ ಹಳ್ಳಿಯ ಸೂಲಗಿತ್ತಿಯರೇ ಹೆರಿಗೆ ಮಾಡಿಸುತ್ತಿದ್ದರು. ನಾನೂ ಒಬ್ಬ ಸೂಲಗಿತ್ತಿಯ ಸಹಾಯದಿಂದ ಭೂಮಿಗಿಳಿದೆ. ಆದರೆ ಅಳಲಿಲ್ಲ, ಅಲುಗಾಡಲಿಲ್ಲ.
ನನ್ನಜ್ಜಿ ಮನೆಯಲ್ಲಿ ನನ್ನಮ್ಮನ ಹೆರಿಗೆಯಾದುದ್ದರಿಂದ, ಮಾವಂದಿರು ಎದ್ದೆವೋ, ಬಿದ್ದೆವೋ ಎಂದು ದೂರದ ನಗರಕ್ಕೆ ಓಡಿ, ಅಲ್ಲಿದ್ದ ಬೆಳ್ಳಿ ಡಾಕ್ಟರಿಗೆ ದುಂಬಾಲು ಬಿದ್ದು, ಸುರಿಯುವ ಮಳೆಯಲ್ಲಿ, ಬೈಕುಗಳಿಲ್ಲದ, ಸೈಕಲ್ಲುಗಳು ಓಡಾಡದ, ಕಾಲಿಟ್ಟಲ್ಲೆಲ್ಲಾ ಕೆಸರು ಮಾತ್ರ ಮೆತ್ತುವ ಗದ್ದೆ ದಾರಿಯಲ್ಲಿ ಮನೆಗೆ ಕರಕೊಂಡು ಬಂದು ತೋರಿಸಿದರೆ, ಆ ಡಾಕ್ಟರ್, ಸೂಲಗಿತ್ತಿಗೆ ಒಂದಿಷ್ಟು ಬಯ್ದು, ನಾನು ಬರುವುದು ಸ್ವಲ್ಪ ತಡವಾಗಿದ್ದರೆ, ಮಗು ಬದುಕುತ್ತಲೇ ಇರಲಿಲ್ಲವೆಂದು, ಅವರ ಎಲ್ಲಾ ವಿದ್ಯೆ ಉಪಯೋಗಿಸಿ, ಕೊನೆಗೂ ನನ್ನನ್ನು ಮೊದಲ ಬಾರಿ ಅಳಿಸಿ, ನಗಿಸಿ ನಿಜವಾಗಿಯೂ ಜೀವ ಮರಳಿಸಿದರು.
ಬಡತನದ ಬೇಗೆಯಲ್ಲಿ ಬೇಯುತ್ತಿದ್ದ ನನ್ನಜ್ಜಿ ಮನೆಯ ಪರಿಸ್ಥಿತಿ ನೋಡಿ, ಒಂದು ರೂಪಾಯಿಯನ್ನೂ ಪಡೆಯದೇ ನನ್ನ ಜೀವವುಳಿಸಿ, ಹೊರಟು ಹೋದರಂತೆ. ಇಂದಿಗೂ ಆ ವೈದ್ಯರ ಸಂಪರ್ಕ ಸಾಧ್ಯವಾಗಿಲ್ಲ. ಆದರೂ ಕೆಲವೇ ನಿಮಿಷಗಳ ಕಾಲ ನನ್ನೊಡನಿದ್ದು, ನನಗೆ ಜೀವ ನೀಡಿದ ಆ ಡಾಕ್ಟರನ್ನು ನನ್ನ ಪ್ರತಿ ಉಸಿರಿನಲ್ಲೂ ನೆನೆಯುತ್ತೇನೆ.
* ರಾಘವೇಂದ್ರ ಈ ಹೊರಬೈಲು