ಮೈಸೂರು: 2-3 ಜಿಲ್ಲೆ ಬಿಟ್ಟರೆ ಜೆಡಿಎಸ್ ಅಸ್ತಿತ್ವ ಎಲ್ಲಿದೆ? ಅಪ್ಪ-ಮಕ್ಕಳ ಪಕ್ಷ ಅಂಥ ಹೇಳ್ತಾ ಇಧ್ದೋರು ಈಗ ಅಪ್ಪ-ಮಕ್ಕಳಾಗಿ ಬಿಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕುಟುಕಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಜಿಲ್ಲೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರ ಸೇರಿ 9 ಸ್ಥಾನ ಗೆಲ್ಲುತ್ತೇವೆ. ಜಿಲ್ಲೆಯ 11 ಕ್ಷೇತ್ರಗಳಲ್ಲಿ ಕೃಷ್ಣರಾಜ, ವರುಣಾ ಬಿಟ್ಟು 9 ಸ್ಥಾನ ಗೆದ್ದೇ ಗೆಲ್ಲುತ್ತೇವೆ. ನನ್ನ ರಾಜಕೀಯ ಅನುಭವದ ಆಧಾರದ ಮೇಲೆ ಕೃಷ್ಣರಾಜ, ವರುಣಾದಲ್ಲಿ ಗೆಲುವು ಕಷ್ಟ. ಇನ್ನೂ ಕೆಲಸ ಮಾಡಬೇಕಿದೆ ಎಂದರು.
ತಿ.ನರಸೀಪುರದಿಂದ ಶಿಡ್ಲಘಟ್ಟದವರೆಗೆ ರೋಡ್‌ಶೋ: ಚುನಾವಣಾ ಪ್ರಚಾರಕ್ಕೆ ಹಾಲಿ-ಮಾಜಿ ಪ್ರಧಾನಮಂತ್ರಿಗಳು, ಎಐಸಿಸಿ ಅಧ್ಯಕ್ಷರು ಬಂದು ಅವರವರ ಭಾವನೆ ಹಂಚಿಕೊಂಡಿದ್ದಾರೆ. ಈ ಚುನಾವಣೆ ದೇಶದ ಮುಂದಿನ ರಾಜಕೀಯ ಭವಿಷ್ಯವನ್ನು ನಿರ್ಧರಿಸುವ ಕಾರಣ ಹೆಚ್ಚು ಆಸಕ್ತಿವಹಿಸಿ ಓಡಾಡುತ್ತಿದ್ದಾರೆ.
ನರೇಂದ್ರ ಮೋದಿ, ರಾಹುಲ್‌ಗಾಂಧಿಯಷ್ಟು ದೊಡ್ಡ ಮಟ್ಟದಲ್ಲಿ ರೋಡ್ ಶೋ, ಸಮಾವೇಶ ಮಾಡಲಾಗದಿದ್ದರೂ ಸಣ್ಣದಾಗಿ ನಾವೂ ರೋಡ್ ಶೋ ಮಾಡುತ್ತೇವೆ. ತಿ.ನರಸೀಪುರದಿಂದ ಶಿಡ್ಲಘಟ್ಟದವರೆಗೆ ನಾನೂ ರೋಡ್‌ಶೋ ಮಾಡುವೆ ಎಂದರು.
ಕಾಂಗ್ರೆಸ್-ಬಿಜೆಪಿ ಪ್ರಣಾಳಿಕೆಗಿಂತ ಜೆಡಿಎಸ್ ಪ್ರಣಾಳಿಕೆ ಉತ್ತಮವಾಗಿದೆ. ಹೀಗಾಗಿಯೇ ಕುಮಾರಸ್ವಾಮಿ ನಮ್ಮ ಪ್ರಣಾಳಿಕೆಯನ್ನು ಒಪ್ಪಿ ಬರುವವರ ಬೆಂಬಲ ಪಡೆಯುತ್ತೇವೆ ಎಂದಿರುವುದು, ಅವರ ಮಾತಿನಲ್ಲಿ ತಪ್ಪೇನಿಲ್ಲ. ಕುಮಾರಸ್ವಾಮಿ ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ, ಹಠ-ಛಲದಿಂದ ಜೆಡಿಎಸ್ ಅಧಿಕಾರಕ್ಕೆ ತರಲು ಹೋರಾಟ ಮಾಡುತ್ತಿದ್ದಾರೆ. ನಮ್ಮ ಹೋರಾಟವನ್ನು ಮನಗಂಡಿರುವ ರಾಜ್ಯದ ರೈತರು ಜೆಡಿಎಸ್‌ಗೆ ಮನ್ನಣೆ ಕೊಡಲಿದ್ದಾರೆ.
ಕಾಂಗ್ರೆಸ್ ಅಥವಾ ಬಿಜೆಪಿಗೆ ನಾವು ಬೆಂಬಲ ನೀಡುವ ಅಥವಾ ತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು. ಜೆಡಿಎಸ್ ನಗರಾಧ್ಯಕ್ಷ ಕೆ.ಟಿ.ಚೆಲುವೇಗೌಡ, ಚಾಮರಾಜ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರೊ.ಕೆ.ಎಸ್.ರಂಗಪ್ಪ, ಮಾಜಿ ಮೇಯರ್ ಆರ್.ಲಿಂಗಪ್ಪ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
ಹಣಕ್ಕೆ ಸಮೀಕ್ಷೆ
ಕೆಲವು ಏಜೆನ್ಸಿಗಳು ಸಮೀಕ್ಷೆ ಹೆಸರಿನಲ್ಲಿ ಜೆಡಿಎಸ್‌ಗೆ 32, 40, 45 ಸ್ಥಾನಗಳು ಎಂದು ಹೇಳುತ್ತಿವೆ. ದೃಶ್ಯಮಾಧ್ಯಮಗಳು ಸಮೀಕ್ಷೆ ಮಾಡಿ ಒಂದು ಸಂಖ್ಯೆ ಹೇಳುತ್ತಿವೆ. ಕೆಲವು ಏಜೆನ್ಸಿಗಳಂತು ಹಣಕಾಸು ಸಂಪಾದನೆ ಮಾಡುವುದಕ್ಕೋಸ್ಕರವೇ ಇವೆ. ಸಮೀಕ್ಷೆ ಮಾಡಲು ಹಣ ಪಡೆದಾಗ ಹಣ ಕೊಟ್ಟವರ ಬಗ್ಗೆ ಸ್ವಲ್ಪ ಜಾಸ್ತಿ ಒತ್ತುಕೊಡುವುದು ಸಹಜ.
-ದೇವೇಗೌಡ, ಮಾಜಿ ಪ್ರಧಾನಿ