ಬೆಂಗಳೂರು: 15ನೇ ಆವೃತ್ತಿಯ ಐಪಿಎಲ್ ನ ತಯಾರಿ ಜೋರಾಗುತ್ತಿದೆ. ಮೆಗಾ ಹರಾಜಿಗೆ ಸಿದ್ದತೆ ನಡೆಯುತ್ತಿದೆ. ಶನಿವಾರ- ಭಾನುವಾರ ಬೆಂಗಳೂರಿನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ತಮ್ಮ ಆಯ್ಕೆಯ ಆಟಗಾರರನ್ನು ಖರೀದಿ ಮಾಡಲು ಹತ್ತು ತಂಡಗಳು ತಯಾರಿ ನಡೆಸುತ್ತಿದೆ.
ಈ ಬಾರಿಯ ಹರಾಜಿನಲ್ಲಿ ಕೆಲವು ವಿದೇಶಿ ಆಟಗಾರರು ಮಿಂಚುವ ಸಾಧ್ಯತೆಯಿದೆ. ಹಲವು ಸೂಪರ್ ಸ್ಟಾರ್ ಆಟಗಾರರ ಖರೀದಿಗೆ ಫ್ರಾಂಚೈಸಿಗಳು ಮುಗಿಬೀಳುವ ಸಾಧ್ಯತೆಯಿದೆ. ಅಂತಹ ಕೆಲವು ಆಟಗಾರರ ಪಟ್ಟಿ ಇಲ್ಲಿದೆ.
ಕಗಿಸೋ ರಬಾಡ: ದಕ್ಷಿಣ ಆಫ್ರಿಕಾದ ಈ ವೇಗಿ ಇದುವರೆಗೆ ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಆಡಿದ್ದರು. ಇದೀಗ ಹರಾಜಿಗೆ ಬಂದಿದ್ದು, ರಬಾಡ ಖರೀದಿಗೆ ತಂಡಗಳು ಮುಗಿಬೀಳಲಿದೆ. 2 ಕೋಟಿ ರೂ. ಮೂಲಬೆಲೆ ಹೊಂದಿರುವ ರಬಾಡಾ ಉತ್ತಮ ಬೆಲೆಗೆ ಬಿಕರಿಯಾಗಬಹುದು.
ಇದನ್ನೂ ಓದಿ:ಅಂತಿಮ ಏಕದಿನ: ಟಾಸ್ ಗೆದ್ದ ಭಾರತ; ತಂಡದಲ್ಲಿ 4 ಬದಲಾವಣೆ ಮಾಡಿದ ರೋಹಿತ್
ಡೇವಿಡ್ ವಾರ್ನರ್: ಸನ್ ರೈಸರ್ಸ್ ಹೈದರಾಬಾದ್ ತಂಡದ ಮಾಜಿ ನಾಯಕ, ಆಸೀಸ್ ಆಟಗಾರ ಡೇವಿಡ್ ವಾರ್ನರ್ ಅವರು ಈ ಬಾರಿಯ ಹರಾಜಿನ ಅತ್ಯಂತ ಬೇಡಿಕೆಯ ಆಟಗಾರನಾಗಿದ್ದಾರೆ. ಆರಂಭಿಕ ಆಟಗಾರ, ನಾಯಕತ್ವದ ಅರ್ಹತೆ, ಉತ್ತಮ ಫೀಲ್ಡರ್ ಆಗಿರುವ ವಾರ್ನರ್ ಮೇಲೆ ಹಲವು ತಂಡಗಳು ಕಣ್ಣಿಟ್ಟಿದೆ. ಎರಡು ಕೋಟಿ ರೂ ಮೂಲ ಬೆಲೆ ಹೊಂದಿರುವ ವಾರ್ನರ್ ಈ ಬಾರಿ ಅತೀ ಹೆಚ್ಚು ಬೆಲೆ ಪಡೆದರೂ ಅಚ್ಚರಿಯಿಲ್ಲ.
ಪ್ಯಾಟ್ ಕಮಿನ್ಸ್: 2020ರ ಹರಾಜಿನಲ್ಲಿ 15 ಕೋಟಿ ರೂ. ಬಾಚಿಕೊಂಡಿದ್ದ ಪ್ಯಾಟ್ ಕಮಿನ್ಸ್ ಕೂಡಾ 2 ಕೋಟಿ ರೂ. ಮೂಲಬೆಲೆ ಹೊಂದಿದ್ದಾರೆ. ಉತ್ತಮ ವೇಗಿಯಾಗಿರುವ ಆಸೀಸ್ ಟೆಸ್ಟ್ ನಾಯಕ ಕಮಿನ್ಸ್ ಯಾವುದೇ ತಂಡಕ್ಕೂ ಶಕ್ತಿ ತುಂಬಬಲ್ಲರು.
ಕ್ವಿಂಟನ್ ಡಿಕಾಕ್: ಮುಂಬೈ ಇಂಡಿಯನ್ಸ್ ಪರವಾಗಿ ಆಡುತ್ತಿದ್ದ ಕ್ವಿಂಟನ್ ಡಿಕಾಕ್ ವಿಶ್ವದರ್ಜೆಯ ಆರಂಭಿಕ ಆಟಗಾರ ಮತ್ತು ವಿಕೆಟ್ ಕೀಪರ್. ಏಕಾಂಗಿಯಾಗಿ ಪಂದ್ಯದ ಗತಿ ಬದಲಿಸಬಲ್ಲ ಶಕ್ತಿಯಿರುವ ಡಿಕಾಕ್ ಎರಡು ಕೋಟಿ ರೂ. ಮೂಲಬೆಲೆ ಹೊಂದಿದ್ದಾರೆ. ಹರಾಜು ಟೇಬಲ್ ನಲ್ಲಿ ಡಿಕಾಕ್ ರನ್ನು ಖರೀದಿಸಲು ತಂಡಗಳು ಪೈಪೋಟಿ ನಡೆಸಲಿದೆ.