Advertisement

ತಾವೇ ಬೆಳೆದ ಬೆಳೆಯ ರುಚಿಯ ಕಾಣುವ ಭಾಗ್ಯ ಇವರಿಗೆ

10:56 AM Feb 14, 2018 | Team Udayavani |

ಕೊಣಾಜೆ: ನೀನೇ ಬೆಳೆದು ತಿನ್ನು, ಆಗ ಅನ್ನದ ಮೌಲ್ಯ ಗೊತ್ತಾಗುತ್ತದೆ ಎಂಬುದು ಹಿರಿಯರು ಸದಾ ಹೇಳುವ
ಮಾತು.

Advertisement

ಅದನ್ನು ಕಾರ್ಯರೂಪಕ್ಕೆ ಇಳಿಸಿದ್ದಾರೆ ಈ ಸರಕಾರಿ ಕಾಲೇಜಿನ ವಿದ್ಯಾರ್ಥಿಗಳು. ಮಂಗಳೂರಿನ ರಥಬೀದಿಯ ಡಾ. ದಯಾನಂದ ಪೈ, ಸತೀಶ್‌ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ 250 ವಿದ್ಯಾರ್ಥಿಗಳು ಊಟ ಮಾಡುತ್ತಿರುವುದು ತಾವು ಬೆಳೆದ ಅಕ್ಕಿಯನ್ನೇ.

ಇಂದು ಕಾಲೇಜಿನಲ್ಲಿ ಬಿಸಿಯೂಟಕ್ಕೆ ಚಾಲನೆ ದೊರಕಲಿದೆ. ಹಡಿಲು ಬಿದ್ದ ಗದ್ದೆಯಲ್ಲಿ ವಿದ್ಯಾರ್ಥಿಗಳು ಐದು ತಿಂಗಳ ಕಾಲ ಉಳುಮೆಯಿಂದ ಕೊಯ್ಲುವರೆಗೆ ಕೃಷಿ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಅದೇ ಫ‌ಸಲನ್ನೇ ಈಗ ಬಿಸಿಯೂಟಕ್ಕೆ ಬಳಸಲಾಗುತ್ತಿದೆ.

ಎನ್ನೆಸ್ಸೆಸ್‌ ವಿದ್ಯಾರ್ಥಿಗಳು ಕೊಣಾಜೆ ಸಮೀಪದ ಅಣ್ಣೆರೆಪಾಲು, ದೇವಂದಬೆಟ್ಟ, ಗಟ್ಟಿಮೂಲೆಯಲ್ಲಿ ಸುಮಾರು 20 ವರ್ಷಗಳಿಂದ ಕೃಷಿ ಮಾಡದೆ ಹಡಿಲು ಬಿದ್ದಿದ್ದ ನಾಲ್ಕು ಎಕ್ರೆ ಗದ್ದೆಯಲ್ಲಿ ಭತ್ತದ ಕೃಷಿ ಪ್ರಾರಂಭಿಸಿದ್ದರು. ಆಗಸ್ಟ್‌ ನ
ಪ್ರಾರಂಭದಲ್ಲಿ ಭೂಮಿಯ ಸರ್ವೆ ನಡೆಸಿ ಸ್ವಾಂತಂತ್ರೋತ್ಸವವನ್ನು ಕೃಷಿ ನಡೆಸುವ ಮೂಲಕ ಆಚರಿಸಿದ್ದರು. 

ಗದ್ದೆಯಲ್ಲಿನ ಕಳೆಯನ್ನು ತೆಗೆದು, ಟಿಲ್ಲರ್‌ ಮೂಲಕ ಉಳುಮೆ ನಡೆಸಿ, ಬೀಜ ಬಿತ್ತಿ, ಸಸಿಯಾದ ಬಳಿಕ ತೆಗೆದು ನಾಟಿ ಮಾಡಿದ್ದರು. ಡಿ. 28ರಿಂದ ಜ. 4ರವರೆಗೆ ಎನ್ನೆಸ್ಸೆಸ್‌ ಕ್ಯಾಂಪ್‌ ಅಣ್ಣೆರೆಪಾಲಿನಲ್ಲಿ ನಡೆಸಿ ಬೆಳೆದಿದ್ದ ಪೈರನ್ನು ಕಟಾವು ಮಾಡಿ, ಭತ್ತವನ್ನು ಬೇರ್ಪಡಿಸಿ, ಸ್ಥಳೀಯ ಅಕ್ಕಿ ಗಿರಣಿಯಲ್ಲಿ ಅಕ್ಕಿಯನ್ನಾಗಿಸಿಕೊಂಡು ಕಾಲೇಜಿಗೆ ಹಸ್ತಾಂತರಿಸಿದ್ದರು.

Advertisement

ಈ ಕೃಷಿ ಕಾರ್ಯದಲ್ಲಿ ರೋವರ್ ಆ್ಯಂಡ್‌ ರೇಂಜರ್, ಸ್ನಾತಕೋತ್ತರ ವಿದ್ಯಾರ್ಥಿಗಳು, ಪದವಿ ವಿದ್ಯಾರ್ಥಿಗಳು
ಸಹಕರಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಪ್ರೊ| ರಾಜಶೇಖರ್‌ ಹೆಬ್ಟಾರ್‌, ಎನ್ನೆಸ್ಸೆಸ್‌ ಯೋಜನಾಧಿಕಾರಿಗಳಾದ ಡಾ| ನವೀನ್‌ ಎನ್‌. ಕೊಣಾಜೆ, ಪ್ರೊ| ಜೆಫ್ರಿ ರಾಡ್ರಿಗಾಸ್‌, ಯೋಜನಾಧಿಕಾರಿ ಡಾ| ನಾಗವೇಣಿ ಮಂಚಿ ಸಲಹೆ-ಸೂಚನೆ ನೀಡಿದ್ದರು. ಕೃಷಿ ಕಾರ್ಯಕ್ಕೆ ಹರೇಕಳ ದೇವರಾಜ ರೈ ಆರ್ಥಿಕ ಸಹಕಾರ ನೀಡಿದರೆ, ರಾಜ್ಯ ರೈತ ಸಂಘ ಹಸಿರು ಸೇನೆಯ ಮುಖಂಡ ಮನೋಹರ ಶೆಟ್ಟಿ, ಸ್ಥಳೀಯ ಗ್ರಾಮ ಪಂಚಾಯತ್‌ ಸದಸ್ಯರಾದ ರಾಮಚಂದ್ರ ಗಟ್ಟಿ ಮೇಲ್ತೋಟ, ಗೋವಿಂದ ಗೌಡ, ರಾಜೀವಿ ಶೆಟ್ಟಿ ಹೊಸಮನೆ ಮತ್ತು ನರ್ಸುಗೌಡ ಮಾರ್ಗದರ್ಶನ ನೀಡಿದ್ದರು.

ಹದಿನೈದು ಕ್ವಿಂಟಾಲ್‌ ಭತ್ತ
ನಾಲ್ಕು ಎಕ್ರೆಯಲ್ಲಿ ಸುಮಾರು 20 ಕ್ವಿಂಟಾಲ್‌ ಭತ್ತದ ನಿರೀಕ್ಷೆಯಿತ್ತಾದರೂ, 15 ಕ್ವಿಂ. ಭತ್ತವನ್ನು ವಿದ್ಯಾರ್ಥಿಗಳು
ಬೆಳೆದಿದ್ದರು. ಕೃಷಿ ಕಾರ್ಯ ತಡವಾಗಿ ಪ್ರಾರಂಭಿಸಿದ್ದರಿಂದ ಕೆಲವೆಡೆ ಕೀಟಬಾಧೆ ತಟ್ಟಿತು. ಕಾಸರಗೋಡು ಸಹಿತ
ಮಂಗಳೂರಿನ ಒಳಪ್ರದೇಶದಿಂದ ಪ್ರತೀ ವಾರ ವಿದ್ಯಾರ್ಥಿಗಳು ಕೊಣಾಜೆಗೆ ಆಗಮಿಸಿ ಕೃಷಿ ಕಾರ್ಯದಲ್ಲಿ ತೊಡಗುತ್ತಿದ್ದರು.

ಮೂರು ವರ್ಷಕ್ಕೆ ದತ್ತು
ಕೊಣಾಜೆ ಗ್ರಾಮದ ಎರಡು ವಾರ್ಡ್ ಗಳನ್ನು ಕಾಲೇಜಿನ ಎನ್ನೆಸ್ಸೆಸ್‌ ಘಟಕ ದತ್ತು ಸ್ವೀಕರಿಸಿದ್ದು, ಮೂರು ವರ್ಷ
ಭತ್ತದ ಕೃಷಿಯೊಂದಿಗೆ, ಸಾಮಾಜಿಕ, ಅರಣ್ಯ, ಇಂಗುಗುಂಡಿ ರಚನೆ, ಪ್ಲಾಸ್ಟಿಕ್‌ ತ್ಯಾಜ್ಯ ನಿರ್ವಹಣೆಯನ್ನೂ ಕೈಗೆತ್ತಿಕೊಂಡಿದೆ. ಈಗಾಗಲೇ ಇಂಗು ಗುಂಡಿ ಮತ್ತು ಸಾಮಾಜಿಕ ಅರಣ್ಯ ರಚನೆ ಆರಂಭವಾಗಿದೆ. ಕಾಲೇಜಿನ ಈ ಕಾರ್ಯಕ್ಕೆ ಕೊಣಾಜೆ ಗ್ರಾ.ಪಂ., ಸ್ಥಳೀಯ ಸಂಘ ಸಂಸ್ಥೆಗಳು, ಮಾಧ್ಯಮ ಕೇಂದ್ರ ಉಳ್ಳಾಲ ಸಹಿತ ಅಣ್ಣೆರೆಪಾಲು ನಾಗರಿಕರು ಸಹಕಾರ ನೀಡಿದ್ದಾರೆ.

ಸೌಲಭ್ಯ ಕಲ್ಪಿಸಲಾಗುವುದು
ಜಿಲ್ಲೆಯಲ್ಲಿ ಬಿಸಿಯೂಟ ನೀಡುತ್ತಿರುವ ಎರಡನೇ ಕಾಲೇಜು ನಮ್ಮದು. ಆರಂಭದಲ್ಲಿ 250ರಿಂದ 300 ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡಲಾಗುತ್ತಿದ್ದು, ಮುಂದಿನ ವರ್ಷ ದಾನಿಗಳು, ಹಳೇ ವಿದ್ಯಾರ್ಥಿ ಸಂಘ ಇತ್ಯಾದಿ ಸಂಘಟನೆಗಳ ನೆರವು
ಪಡೆದು ಎಲ್ಲರಿಗೂ ಸೌಲಭ್ಯ ಕಲ್ಪಿಸಲಾಗುವುದು. ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳೇ ಭತ್ತ ಬೆಳೆದು ಅದರ ಅಕ್ಕಿಯಲ್ಲಿ ಬಿಸಿಯೂಟ ಆರಂಭಿಸಿರುವ ಏಕೈಕ ಕಾಲೇಜು ನಮ್ಮದು. ವಿದ್ಯಾರ್ಥಿಗಳನ್ನು ಬಳಸಿಕೊಂಡು ಮುಂದಿನ ಸಾಲಿನಲ್ಲಿ ಇನ್ನಷ್ಟು ಹಡಿಲು ಭೂಮಿಯಲ್ಲಿ ಕೃಷಿ ಮಾಡುವ ಯೋಜನೆ ಇದೆ.
– ಪ್ರೊ| ರಾಜಶೇಖರ್‌ ಹೆಬ್ಟಾರ್‌ ಸಿ.,
  ಪ್ರಾಂಶುಪಾಲರು

Advertisement

Udayavani is now on Telegram. Click here to join our channel and stay updated with the latest news.

Next