ಜಗತ್ತಿನಲ್ಲಿ ಪಾಸ್ ಪೋರ್ಟ್ ವ್ಯವಸ್ಥೆ ಜಾರಿಗೆ ಬಂದು ಒಂದು ಶತಮಾನವೇ ಕಳೆದು ಹೋಗಿದೆ. ಯಾವುದೇ ದೇಶದ ಅಧ್ಯಕ್ಷರಾಗಲಿ ಅಥವಾ ಪ್ರಧಾನಿಯಾಗಲಿ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಭೇಟಿ ನೀಡಲು Diplomatic ಪಾಸ್ ಪೋರ್ಟ್ ನ ಅಗತ್ಯವಿದೆ. ಆದರೆ ಜಗತ್ತಿನ ಈ ಮೂರು ವಿಶೇಷ ವ್ಯಕ್ತಿಗಳು ಮಾತ್ರ ಪಾಸ್ ಪೋರ್ಟ್ ರಹಿತವಾಗಿ ವಿಶ್ವದ 200ಕ್ಕೂ ಅಧಿಕ ದೇಶಗಳಿಗೆ ಭೇಟಿ ನೀಡಬಹುದಾಗಿದೆ. ಹಾಗಾದರೆ ಆ ಮೂವರು ವ್ಯಕ್ತಿಗಳು ಯಾರು ಎಂದು ತಿಳಿದುಕೊಳ್ಳುವ ಕುತೂಹಲವಿದೆಯೇ?
ಯಾರು ಆ ಮೂರು ವ್ಯಕ್ತಿಗಳು…
ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಪ್ರಯಾಣಿಸಲು Passport ಅಗತ್ಯವಿಲ್ಲದ ಮೂವರು ವಿಶೇಷ ವ್ಯಕ್ತಿಗಳು ಯಾರೆಂದರೆ…ಬ್ರಿಟನ್ ರಾಜ ಹಾಗೂ ಜಪಾನ್ ರಾಜ ಮತ್ತು ರಾಣಿ. ಚಾರ್ಲ್ಸ್ ಬ್ರಿಟನ್ ರಾಜನಾಗುವ ಮೊದಲು ಈ ಸೌಲಭ್ಯ ರಾಣಿ ಎಲಿಜಬೆತ್ ಗೆ ಇತ್ತು ಎಂದು ವರದಿ ವಿವರಿಸಿದೆ.
ಚಾರ್ಲ್ಸ್ ಅವರು ಬ್ರಿಟನ್ ರಾಜನಾಗಿ ನಿಯುಕ್ತಗೊಂಡ ಹಿನ್ನೆಲೆಯಲ್ಲಿ, ಚಾರ್ಲ್ಸ್ ಅವರ ಕಾರ್ಯದರ್ಶಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಕ ಎಲ್ಲಾ ದೇಶಗಳಿಗೂ ಸಂದೇಶದ ದಾಖಲೆಯನ್ನು ಕಳುಹಿಸಿದ್ದರು. ಆ ಪ್ರಕಾರ ಚಾರ್ಲ್ಸ್ ಅವರು ಬ್ರಿಟನ್ ರಾಜನಾಗಿದ್ದು, ಈ ನಿಟ್ಟಿನಲ್ಲಿ ಜಗತ್ತಿನ ಯಾವುದೇ ದೇಶಕ್ಕೂ ಯಾವ ನಿರ್ಬಂಧವಿಲ್ಲದೆ ಪ್ರಯಾಣಿಸಲು ಅನುವು ನೀಡಬೇಕೆಂದು ತಿಳಿಸಲಾಗಿತ್ತು.
ಪ್ರಸ್ತುತ ಹಿರೊನೋಮಿಯಾ ನರುಹಿಟೋ ಜಪಾನ್ ನ ಚಕ್ರವರ್ತಿಯಾಗಿದ್ದು, ಅವರ ಪತ್ನಿ ಮಸಾಕೋ ಒವಾಡಾ ಮಹಾರಾಣಿಯಾಗಿದ್ದಾರೆ. ಜಪಾನ್ ನ ಡಿಪ್ಲೊಮ್ಯಾಟಿಕ್ ದಾಖಲೆಯ ಪ್ರಕಾರ, ಜಪಾನ್ ಚಕ್ರವರ್ತಿ ಮತ್ತು ಮಹಾರಾಣಿ ಯಾವುದೇ ದೇಶಕ್ಕೆ ಪ್ರವಾಸ ಕೈಗೊಂಡರು ಪಾಸ್ ಪೋರ್ಟ್ ಅಗತ್ಯವಿಲ್ಲ ಎಂದು ತಿಳಿಸಿದೆ.
ನಮ್ಮ ಚಕ್ರವರ್ತಿ ಮತ್ತು ಮಹಾರಾಣಿಯವರು ನಿಮ್ಮ ದೇಶಗಳಿಗೆ ಪಾಸ್ ಪೋರ್ಟ್ ರಹಿತವಾಗಿ ಭೇಟಿ ನೀಡಲು ಅವಕಾಶ ನೀಡಬೇಕೆಂದು ಜಪಾನ್ ಅಧಿಕೃತವಾಗಿ ಜಗತ್ತಿನ ಎಲ್ಲಾ ದೇಶಗಳಿಗೆ ಲಿಖಿತ ಪತ್ರವನ್ನು ಕಳುಹಿಸಿದೆ.
ರಾಜತಾಂತ್ರಿಕ ಪಾಸ್ ಪೋರ್ಟ್:
ಜಗತ್ತಿನ ಎಲ್ಲಾ ಪ್ರಧಾನ ಮಂತ್ರಿಗಳು ಮತ್ತು ಅಧ್ಯಕ್ಷರು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಪಾಸ್ ಪೋರ್ಟ್ ಅನ್ನು ಹೊಂದಿರಬೇಕು. ಅವರ ಪಾಸ್ ಪೋರ್ಟ್ ಗಳು ರಾಜತಾಂತ್ರಿಕ (Diplomatic) ಪಾಸ್ ಪೋರ್ಟ್ ಗಳಾಗಿವೆ. ಆದರೆ ಬೇರೆ ದೇಶದ ಪ್ರಧಾನಮಂತ್ರಿ, ಅಧ್ಯಕ್ಷರು ಭೇಟಿ ನೀಡಿದ ವೇಳೆ ಆತಿಥೇಯಾ ದೇಶವು ಸಂಪೂರ್ಣ ಸವಲತ್ತು ಮತ್ತು ಗೌರವ ನೀಡಿ ಸ್ವಾಗತಿಸುವುದು ಪದ್ಧತಿಯಾಗಿದೆ.
ಯಾವುದೇ ದೇಶದ ಪ್ರಧಾನಿಯಾಗಲಿ ಅಥವಾ ಅಧ್ಯಕ್ಷರಾಗಲಿ ಅವರು ವಲಸೆ ಅಧಿಕಾರಿಗಳ ಮುಂದೆ ದೈಹಿಕವಾಗಿ ಹಾಜರಾಗಬೇಕಾಗಿಲ್ಲ ಮತ್ತು ಭದ್ರತಾ ತಪಾಸಣೆ, ಇನ್ನಿತರ ಪ್ರಕ್ರಿಯೆಗಳಿಂದ ವಿನಾಯ್ತಿ ಪಡೆದಿರುತ್ತಾರೆ. ಭಾರತದಲ್ಲಿ ಈ ಸ್ಥಾನಮಾನ ಪ್ರಧಾನಮಂತ್ರಿ, ರಾಷ್ಟ್ರಪತಿ ಹಾಗೂ ಉಪ ರಾಷ್ಟ್ರಪತಿಗೆ ಲಭ್ಯವಿದೆ.