ಮೈಸೂರು: ಕೊರೊನಾ ವೈರಾಣು ಹರಡುವ ಭೀತಿ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಮಂಗಳವಾರ ಜಿಲ್ಲಾ ನ್ಯಾಯಾಲಯಕ್ಕೆ ಆಗಮಿಸಿದ ಸಾರ್ವಜನಿಕರು ಹಾಗೂ ಸಿಬ್ಬಂದಿಯನ್ನು ಥರ್ಮಲ್ ಸ್ಕ್ರೀನಿಂಗ್ ಮೂಲಕ ತಪಾಸಣೆ ನಡೆಸಿ ಬಳಿಕ ಒಳಬಿಡಲಾಯಿತು.
ಈಗಾಗಲೇ ಮುಂಜಾಗ್ರತಾ ಕ್ರಮವಾಗಿ ಅರಮನೆ, ಮೃಗಾಲಯ ಸೇರಿದಂತೆ ಅನೇಕ ಮಾಲ್‌ಗಳು ಮತ್ತು ಚಿತ್ರಮಂದಿರಗಳನ್ನು ಒಂದು ವಾರದ ವರೆಗೆ ಬಂದ್ ಮಾಡಲಾಗಿದೆ. ಆದರೆ, ಕೋರ್ಟ್‌ಗೆ ಯಾವುದೇ ರಜೆ ಇಲ್ಲದ ಕಾರಣ ನಿತ್ಯ ನೂರಾರು ಜನ ಸೇರುವ ಸ್ಥಳವಾದ್ದರಿಂದ ವಕೀಲರನ್ನೊಳಗೊಂಡಂತೆ ಕೋರ್ಟ್‌ಗೆ ಹಾಜರಾಗುವ ಪ್ರತಿಯೊಬ್ಬರನ್ನೂ ಜಿಲ್ಲಾ ಆರೋಗ್ಯ ಇಲಾಖೆ ಸಿಬ್ಬಂದಿ ಥರ್ಮಲ್ ಸ್ಕ್ರೀನಿಂಗ್ ತಪಾಸಣೆ ನಡೆಸಿ ಒಳ ಬಿಡುತ್ತಿದ್ದರು.
ಕಳೆದ ಒಂದು ವಾರದಿಂದ ಭಾರತದಲ್ಲಿ ವೇಗವಾಗಿ ಎಲ್ಲಾ ರಾಜ್ಯಗಳನ್ನು ಆವರಿಸಿಕೊಂಡಿರುವ ಈ ಕೊರೊನಾ ವೈರಸ್‌ನಿಂದ ಸಾಂಸ್ಕೃತಿಕ ನಗರ ಮೈಸೂರಿನ ಜನತೆಯಲ್ಲಿ ಆತಂಕ ಹೆಚ್ಚಾಗಿದೆ. ಕೊರೊನಾ ವೈರಸ್ ಒಬ್ಬರಿಂದ ಒಬ್ಬರಿಗೆ ಅತಿಬೇಗ ಹರಡುವ ಭೀತಿ ಹಿನ್ನೆಲೆ ಜಿಲ್ಲಾ ಅರೋಗ್ಯ ಅಧಿಕಾರಿಗಳು ಹೆಚ್ಚು ಜನ ಸೇರುವ ಕಡೆಗಳಲ್ಲಿ ಈಗಾಗಲೇ ಥರ್ಮಲ್ ಸ್ಕ್ರೀನಿಂಗ್ ತಪಾಸಣೆ ಮಾಡಲಾಗುತ್ತಿದ್ದು, ಅದರಂತೆ, ಕೋರ್ಟ್ ಆವರಣದಲ್ಲಿ ತಪಾಸಣೆ ನಡೆಸಿ, ಪ್ರತಿಯೊಬ್ಬರ ದೇಹ ತಾಪಮಾನ ಹಾಗೂ ಹೆಸರನ್ನು ನೋಂದಾಯಿಸಿಕೊಂಡರು.
ಬೆಳಗ್ಗೆ 8 ರಿಂದಲೇ ಆರಂಭ: ಆರೋಗ್ಯ ಇಲಾಖೆ ಸಿಬ್ಬಂದಿ ಮಂಗಳವಾರ ಬೆಳಗ್ಗೆ 8 ಗಂಟೆಯಿಂದಲೇ ತಮ್ಮ ಕಾರ್ಯವನ್ನು ಕೋರ್ಟ್ ಆವರಣದಲ್ಲಿ ಪ್ರಾರಂಭಿಸಿದ್ದರು. ನ್ಯಾಯಾಲಯಗಳಿಗೆ ಜನರು ಬೇರೆ ಬೇರೆ ಕಡೆಗಳಿಂದ ಬರುವುದರಿಂದ ಬೇಗನೆ ಬಂದು ಕೂರುತ್ತಾರೆ ಎನ್ನುವ ದೃಷ್ಟಿಂದ 8 ಗಂಟೆಯಿಂದಲೇ ತಪಾಸಣೆ ನಡೆಸಲಾಯಿತು.
ಇನ್ನು ಕೊರೊನಾ ವೈರಸ್ ತಪಾಸಣೆಯನ್ನು ಕೇವಲ ಹೊರಗಡೆಯಿಂದ ಬಂದ ಜನತೆಗೆ ಮಾತ್ರ ಮಾಡಲಾಗುತ್ತಿಲ್ಲ, ಇಲ್ಲಿರುವ ವಕೀಲರು ಹಾಗೂ ಎಲ್ಲಾ ಸಿಬ್ಬಂದಿಯೂ ತಮ್ಮ ಬಿಡುವಿನ ವೇಳೆಯಲ್ಲಿ ತಪಾಸಣೆ ಮಾಡಿಸಿಕೊಳ್ಳಿ ಎಂದು ನ್ಯಾಯಾಲಯದ ಎಲ್ಲಾ ವಕೀಲರು ಹಾಗೂ ಸಿಬ್ಬಂದಿಗೂ ಸಂದೇಶ ನೀಡಲಾಗಿತ್ತು. ಅದರಂತೆ ಹಲವಾರು ವಕೀಲರು ತಮ್ಮ ಬಿಡುವಿನ ವೇಳೆಯಲ್ಲಿ ಬಂದು ತಪಾಸಣೆ ಮಾಡಿಸಿಕೊಂಡರು.
ಸೋಂಕು ತಡೆಗೆ ಪ್ರತಿಯೊಬ್ಬರ ತಪಾಸಣೆ: ಜಿಲ್ಲಾಡಳಿತದ ಆದೇಶದ ಮೇರೆಗೆ ಕೋರ್ಟ್‌ನಲ್ಲಿ ಥರ್ಮಲ್ ಸ್ಕ್ರೀನಿಂಗ್ ಮೂಲಕ ತಪಾಸಣೆ ನಡೆಸುತ್ತಿದ್ದೇವೆ. ನ್ಯಾಯಾಲಯಕ್ಕೆ ಗ್ರಾಮೀಣ ಪ್ರದೇಶದ ಜನತೆ ಆಗಮಿಸುವ ಹಿನ್ನೆಲೆ ಹಾಗೂ ಕೊರೊನಾ ವೈರಸ್ ಒಬ್ಬರಿಂದ ಒಬ್ಬರಿಗೆ ಹರಡುವ ಸಾಂಕ್ರಾಮಿಕ ರೋಗವಾಗಿರುವುದರಿಂದ ಇಲ್ಲಿಗೆ ಬರುವ ಪ್ರತಿಯೊಬ್ಬರನ್ನೂ ತಪಾಸಣೆ ನಡೆಸಲಾಗುವುದು. ಒಂದು ವೇಳೆ ರೋಗ ಲಕ್ಷಣ ಕಂಡು ಬಂದರೆ ಜಿಲ್ಲಾ ಅರೋಗ್ಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಅರೋಗ್ಯ ಅಧಿಕಾರಿ ಡಾ.ಬಸವರಾಜ್ ತಿಳಿಸಿದರು.