ಲಂಡನ್: ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರುವುದಕ್ಕೆ ಸಂಬಂಧಿಸಿದಂತೆ ಸ್ವಪಕ್ಷ ಮುಖಂಡರ ವಿಶ್ವಾಸ ಗಳಿಸುವಲ್ಲಿ ವಿಫಲವಾದ್ದರಿಂದ ಬ್ರಿಟನ್ ಪ್ರಧಾನಿ ಥೆರೇಸಾ ಮೇ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಶುಕ್ರವಾರ ಈ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ ಥೆರೇಸಾ, ಜೂನ್ 7 ರಂದು ಕನ್ಸರ್ವೇಟಿವ್ ಪಕ್ಷದ ಮುಖ್ಯಸ್ಥೆ ಹುದ್ದೆಗೆ ರಾಜೀನಾಮೆ ನೀಡುತ್ತೇನೆ. ನಂತರ ಜೂನ್ 10 ರಿಂದ ಹೊಸ ಪ್ರಧಾನಿ ಹುದ್ದೆಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದಿದ್ದಾರೆ. ಹೊಸ ಪ್ರಧಾನಿ ಆಯ್ಕೆಯಾಗುವವರೆಗೂ ಥೆರೇಸಾ ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.
ನಾನು ಎರಡನೇ ಮಹಿಳಾ ಪ್ರಧಾನಿಯಾಗಿದ್ದೆ. ಆದರೆ ಕೊನೆಯ ಮಹಿಳಾ ಪ್ರಧಾನಿಯಲ್ಲ. ನನ್ನನ್ನು ಪ್ರೀತಿಸುವ ದೇಶಕ್ಕಾಗಿ ನಾನು ಸೇವೆ ಸಲ್ಲಿಸಿದ್ದೇನೆ ಎಂದು ಅವರು ಹೇಳಿದ್ದಾರೆ. ರಾಜೀನಾಮೆ ನಿರ್ಧಾರ ಕುರಿತಂತೆ ರಾಣಿ ಎರಡನೇ ಎಲಿಜಬೆತ್‌ಗೆ ಮಾಹಿತಿ ನೀಡಿರುವುದಾಗಿ ಅವರು ಹೇಳಿದ್ದಾರೆ. ಥೆರೇಸಾ ಮೇ ರಾಜೀನಾಮೆ ಸರಿಯಾದ ನಿರ್ಧಾರ ಎಂದು ವಿಪಕ್ಷ ಲೇಬರ್ ಪಾರ್ಟಿಯ ಮುಖ್ಯಸ್ಥ ಜೆರೆಮಿ ಕಾರ್ಬಿನ್ ಹೇಳಿದ್ದಾರೆ.
ಬ್ರೆಕ್ಸಿಟ್ ಒಪ್ಪಂದವನ್ನು ಅಂತಿಮಗೊಳಿಸಲು ಮಾರ್ಚ್ 29 ಕೊನೆಯ ದಿನವಾಗಿತ್ತಾದರೂ, ಬ್ರೆಕ್ಸಿಟ್ ಕುರಿತ ನೀತಿಗಳ ಬಗ್ಗೆ ಭಿನ್ನಾಭಿಪ್ರಾಯವಿದ್ದುದರಿಂದ ಈ ಅವಧಿಯಲ್ಲಿ ಒಪ್ಪಂದ ಅಂತಿಮಗೊಳಿಸಲು ಬ್ರಿಟನ್‌ಗೆ ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 31ರ ವರೆಗೆ ಕಾಲಾವಕಾಶ ಕೇಳಲಾಗಿದೆ. ಹೊಸ ಪ್ರಧಾನಿಯ ಮೊದಲ ಆದ್ಯತೆಯೇ ಬ್ರೆಕ್ಸಿಟ್ ಒಪ್ಪಂದವನ್ನು ಅಂತಿಮಗೊಳಿಸುವುದಾಗಿರುತ್ತದೆ.
•ಜೂ.10 ರಿಂದ ಬ್ರಿಟನ್‌ಗೆ ಹೊಸ ಪ್ರಧಾನಿ ಆಯ್ಕೆ ಪ್ರಕ್ರಿಯೆ ಆರಂಭ
•ಬ್ರೆಕ್ಸಿಟ್ ಒಪ್ಪಂದದಲ್ಲಿ ಪಕ್ಷ, ವಿಪಕ್ಷದ ಮುಖಂಡರ ಒಮ್ಮತ ಸಾಧ್ಯವಾಗದ ಕಾರಣ