ಲಕ್ನೋ : ಹುಡುಗಿಯೊಬ್ಬಳ ಮೇಲಿನ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿ ನೈತಿಕ ಹೊಣೆ ಹೊತ್ತು ಬನಾರಸ್ ಹಿಂದೂ ವಿಶ್ವವಿದ್ಯಾಲಯದ (ಬಿಎಚ್‌ಯು) ಮುಖ್ಯ ಪ್ರಾಕ್ಟರ್ ಓ ಎನ್ ಸಿಂಗ್ ಅವರು ರಾಜೀನಾಮೆ ನೀಡಿದ ಕೆಲವೇ ತಾಸುಗಳ ಬಳಿಕ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ” ವಾರ್ಸಿಟಿಯೊಳಗೆ ಸಂಚು ನಡೆದಿರುವುದನ್ನು” ಶಂಕಿಸಿದ್ದಾರೆ.
ವಿವಿ ಕ್ಯಾಂಪಸ್ ಒಳಗೆ ಈಚೆಗೆ ನಡೆದ ಹಿಂಸೆಗೆ ಸಮಾಜ ವಿರೋಧಿ ಶಕ್ತಿಗಳ ಪಾತ್ರವಿದೆ ಎಂಬ ಬಗ್ಗೆ ಮೇಲ್ನೋಟದ ವರದಿಗಳು ಬಂದಿರುವುದಾಗಿ ಮುಖ್ಯಮಂತ್ರಿ ಯೋಗಿ ಹೇಳಿದರು.
“ಕ್ಯಾಂಪಸ್ ಒಳಗೆ ಅರಾಜಕತೆ ಸೃಷ್ಟಿಸಲು ಯತ್ನಿಸುವ ಯಾರನ್ನೇ ಆದರೂ ನಾವು ಸುಮ್ಮನೆ ಬಿಡುವುದಿಲ್ಲ; ಅವರ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳುತ್ತೇವೆ; ಪ್ರಾಥಮಿಕ ತನಿಖೆಗಳ ಪ್ರಕಾರ ಸಮಾಜ ವಿರೋಧಿ ಶಕ್ತಿಗಳ ಸಂಚು ನಡೆದಿರುವುದು ಗೊತ್ತಾಗಿದೆ ” ಎಂದು ಯೋಗಿ ಆದಿತ್ಯನಾಥ್ ಹೇಳಿದರು.
ಕಳೆದ ಶನಿವಾರ ರಾತ್ರಿ ವಿವಿ ಕ್ಯಾಂಪಸ್ ಒಳಗೆ ಹುಡುಗಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಲಾಯಿತೆಂಬ ಘಟನೆಯನ್ನು ಅನುಸರಿಸಿ ನಡೆದ ಹಿಂಸಾತ್ಮಕ ಪ್ರತಿಭಟನೆಯನ್ನು ನಿಯಂತ್ರಿಸಲು ಪೊಲೀಸರು ನಡೆಸಿದ್ದ ಲಾಠೀ ಚಾರ್ಜ್ ನಿಂದ ಹಲವಾರು ಮಹಿಳೆಯರ ಸಹಿತ ಇಬ್ಬರು ಪತ್ರಕರ್ತರು ಕೂಡ ಗಾಯಗೊಂಡಿದ್ದರು.
ಈ ಹಿಂಸಾತ್ಮಕ ಪ್ರತಿಭಟನೆ ಮತ್ತು ಅದನ್ನು ನಿಯಂತ್ರಿಸುವಲ್ಲಿ ಅತಿಯಾಗಿ ಪೊಲೀಸ್ ಬಲದ ಬಳಕೆ ನಡೆದಿರುವ ಬಗ್ಗೆ ಈಗಗಲೇ ತನಿಖೆಗೆ ಆದೇಶಿಸಲಾಗಿದ್ದು ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿವಿ ಕ್ಯಾಂಪಸ್ ಒಳಗೆ ಸಮಾಜ ವಿರೋಧಿ ಶಕ್ತಿಗಳಿಂದ ದೊಡ್ಡ ಸಂಚೇ ನಡೆದಿರುವುದು ಗೊತ್ತಾಗಿದೆ ಎಂದು ಹೇಳಿದ್ದಾರೆ.