ತೇರದಾಳ: ಪಟ್ಟಣದ ದೇವರಾಜ ನಗರದಿಂದ ಬರುವ ಚರಂಡಿ ನೀರನ್ನು ವಾರ್ಡ್ ನಂ. 2ರ ವ್ಯಾಪ್ತಿಗೆ ಬರುವ ಹೊಸ ಹೆಸ್ಕಾಂ ರಸ್ತೆಯಲ್ಲಿ ಖಾಸಗಿ ವ್ಯಕ್ತಿಯೊಬ್ಬರು ತಮ್ಮ ಜಮೀನುಗಳಲ್ಲಿನ ಬೆಳೆಗಳಿಗೆ ಬಳಕೆ ಮಾಡಿಕೊಳ್ಳುತ್ತಿದ್ದು, ಇದರಿಂದ ಚರಂಡಿ ನೀರು ನಿಲುಗಡೆಯಾಗಿ ಗಬ್ಬೆದ್ದು ನಾರುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಯಿದೆ. ಶೀಘ್ರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮಹಿಳೆಯರು ಸೇರಿದಂತೆ ನಾಗರಿಕರು ಗುರುವಾರ ಪುರಸಭೆ ಮುಖ್ಯಾ ಧಿಕಾರಿ ಈರಣ್ಣ ದಡ್ಡಿ ಅವರಿಗೆ ಮನವಿ ಸಲ್ಲಿಸಿದರು.
ದೇವರಾಜ ನಗರದಿಂದ ಬರುವ ಚರಂಡಿ ನೀರು ರೈತ ಸಂಪರ್ಕ ಕೇಂದ್ರದ ಮುಂದೆ ಇರುವ ದೊಡ್ಡ ಚರಂಡಿಗೆ ಸೇರುತ್ತದೆ. ಈ ಚರಂಡಿ ನೀರನ್ನು ಖಾಸಗಿ ವ್ಯಕಿಯೊಬ್ಬರು ತಮ್ಮ ಜಮೀನಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಬೆಳೆಗೆ ನೀರು ಸಾಕಾದ ಬಳಿಕ ಅದಕ್ಕೆ ಒಡ್ಡು (ತಡೆ) ಕಟ್ಟುತ್ತಾರೆ. ಇದರಿಂದ ಚರಂಡಿ ನೀರು ಹೊಸ ಹೆಸ್ಕಾಂ ರಸ್ತೆಯಲ್ಲಿರುವ ದರ್ಗಾ ಸುತ್ತ ಆವರಿಸುತ್ತದೆ. ದಾರಿ ನಡುವೆ ಚರಂಡಿ ನೀರು ನಿಲ್ಲುತ್ತದೆ. ಇದರಿಂದ ಸಾಕಷ್ಟು ದುರ್ವಾಸನೆ ಎದ್ದು, ಸೊಳ್ಳೆಗಳ ಕಾಟ ಹೆಚ್ಚಾಗಿದೆ.ಈ ಸಮಸ್ಯೆಯಿಂದ ತಮಗೆ ಮುಕ್ತಿ ಕೊಡಿಸಿ ಎಂದು ಮಹಿಳೆಯರು ಮನವಿ ಮಾಡಿದರು.
ಮುಖ್ಯಾಧಿಕಾರಿ ಈರಣ ದಡ್ಡಿ ಮಾತನಾಡಿ, ಚರಂಡಿ ನೀರು ಖಾಸಗಿ ವ್ಯಕ್ತಿ ಬಳಕೆ ಮಾಡದಂತೆ ಕ್ರಮ ಕೈಗೊಳ್ಳಲಾಗುವುದು. ಚರಂಡಿ ನೀರನ್ನು ಜೆಸಿಬಿ ಮುಖಾಂತರ ನೀರು ಹೋಗಲು ದಾರಿ ಮಾಡಿ ಸ್ವಚ್ಛಗೊಳಿಸುವ ಭರವಸೆ ನೀಡಿದರು.
ಪುರಸಭೆ ಸದಸ್ಯ ರುಸ್ತುಮ್ ನಿಪ್ಪಾಣಿ, ರಾಜೇಸಾಬ ನಗಾರ್ಜಿ, ಮೀರಾಸಾಬ ತಾಂಬೊಳಿ, ಶಿವಾನಂದ ಮಾಳಿ, ಬಕ್ಕರ ಸಂಗತ್ರಾಸ, ಸುಲ್ತಾನ ಶೇಖ, ಅಬ್ದುಲ್ ನಿಡಗುಂದಿ, ಮುಬಾರಕ ಅತ್ತಾರ, ವಾಸೀಂ ಝಾರೆ, ಹಬೀಬ ಮೋಮಿನ, ಶಫೀಕ ತಾಂಬೋಳಿ ಪಾಲ್ಗೊಂಡಿದ್ದರು.