Advertisement

ಒಂದು ಹಿಡಿ ಮರಳು ಹೊರ ಜಿಲ್ಲೆಗೆ ಹೋಗದಂತೆ ಕ್ರಮ: ಜಿಲ್ಲಾಧಿಕಾರಿ ಜಿ. ಜಗದೀಶ್

11:55 AM Sep 02, 2019 | Team Udayavani |

ಉಡುಪಿ: ಮರಳಿನ ಸಮಸ್ಯೆಯಿಂದ ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗಿದ್ದು, ಶೀಘ್ರದಲ್ಲಿ  ಮರಳುಗಾರಿಕೆ ಪ್ರಾರಂಭಿಸಬೇಕಾಗಿದೆ. ಒಂದು ಹಿಡಿ ಮರಳು ಹೊರ ಜಿಲ್ಲೆಗೆ ಹೋಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.

Advertisement

ನಗರಸಭೆಯಲ್ಲಿ ರವಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಮರಳು ಸ್ಥಳೀಯವಾಗಿ ಬಳಸಿಕೊಳ್ಳಲಾಗುತ್ತದೆ. ಬಡವರ ಮನೆ ನಿರ್ಮಾಣ, ವಿವಿಧ ಸರಕಾರಿ ಯೋಜನೆಗಳಡಿ ನಿರ್ಮಿಸಲಾಗುವ ಕಟ್ಟಡ, ಮನೆಗಳಿಗೆ ಮೊದಲ ಆದ್ಯತೆಯಲ್ಲಿ ಮರಳು ಸಿಗುವಂತೆ ಕ್ರಮ ವಹಿಸಲಾಗುವುದು. ಮರಳಿನ ಸಮಸ್ಯೆಗೆ ಶೀಘ್ರದಲ್ಲಿ ಪರಿಹಾರ ನೀಡಲಾಗುತ್ತದೆ ಎಂದರು.

ಶೀಘ್ರದಲ್ಲೇ ಮರಳುಗಾರಿಕೆ ಆರಂಭ
ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಲಾಗಿರುವ ಮರಳು ದಿಬ್ಬಗಳಿಗೆ ಮರು ಸರ್ವೆ ಮಾಡುವ ಅಗತ್ಯವಿಲ್ಲ. ನಾನ್ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಇಬ್ಬರಿಗೆ ಮರಳು ದಿಬ್ಬ ತೆರವುಗೊಳಿಸಲು ಪರವಾನಗಿ ನೀಡಲಾಗಿದೆ. ಹಾಗೆಯೇ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಯಾವುದೇ ಕಾನೂನು ತೊಡಕು ಇಲ್ಲದೆ ಶೀಘ್ರದಲ್ಲಿ ಮರಳು ತೆಗೆಯಲು ಅವಕಾಶ ಕಲ್ಪಿಸಲಾಗುತ್ತದೆ. ಇನ್ನೂ ಬಜೆ ಜಲಾಶಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮರಳು ಲಭ್ಯವಿದೆ. ಆದ್ದರಿಂದ ಕೂಡಲೇ ಜಲಾಶಯದ ಹೂಳೆತ್ತಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.

ತಿಂಗಳಿಗೊಮ್ಮೆ ಪೋನ್ ಇನ್: ಚಿಂತನೆ
ಕೋಲಾರದಲ್ಲಿ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿದ್ದಾಗ ಅಲ್ಲಿನ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತಿಂಗಳಿಗೊಮ್ಮೆ ಪೋನ್ ಇನ್ ಕಾರ್ಯಕ್ರಮವನ್ನು ನಡೆಸುತ್ತಿದ್ದೆ. ಅದನ್ನು ಉಡುಪಿಯಲ್ಲಿ ಸಹ ಮುಂದುವರಿಸುವ ಚಿಂತನೆ ಇದೆ.

ಅದಕ್ಕೆ ಬೇಕಾಗುವ ಪೂರ್ವ ತಯಾರಿ ಮಾಡಿಕೊಂಡು ಶೀಘ್ರದಲ್ಲಿಯೇ ಫೋನ್ ಇನ್ ಪ್ರಾರಂಭಿಸಲಾಗುತ್ತದೆ. ಉಡುಪಿ ಹಾಗೂ ಮಣಿಪಾಲದಲ್ಲಿ ಸಂಚಾರ ದಟ್ಟನೆ ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಸಾರಿಗೆ ಸಚಿವರ ಜತೆ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next