ತುಮಕೂರು: ಉಪಚುನಾವಣೆ ಚನ್ನಪಟ್ಟಣದಲ್ಲಿ ಮಾತ್ರ ಇರುವುದಲ್ಲ. ಸಂಡೂರು, ಶಿಗ್ಗಾವಿ ಸೇರಿ ಮೂರು ಕಡೆ ಉಪಚುನಾವಣೆ ನಡೆಯಬೇಕಿದೆ. ಸಾಕಷ್ಟು ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಬಿಜೆಪಿ ರಾಜ್ಯ ನಾಯಕರು, ನಮ್ಮ ರಾಜ್ಯ ನಾಯಕರು ಸೇರಿ ಚರ್ಚೆ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಹೇಳಿದರು.
ನಗರದ ಹನುಮಂತಪುರದಲ್ಲಿ ಜೆಡಿಎಸ್ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮದ ವೇಳೆ ಮಾತನಾಡಿದ ಅವರು, ಸಿ.ಪಿ ಯೋಗೇಶ್ವರ್ ಗೆ ಟಿಕೆಟ್ ವಿಚಾರವಾಗಿ ಸೂಕ್ತವಾದ ಸಂದರ್ಭದಲ್ಲಿ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು. ಈ ಬಗ್ಗೆ ಚರ್ಚೆಗಳು ಆಗಬೇಕಾಗುತ್ತದೆ. ಆಗ ಫಲಿತಾಂಶ ನಮ್ಮ ಪರ ಬರಲು ಸಾಧ್ಯ. ಅಂತಿಮವಾಗಿ ಎನ್ ಡಿಎ ಅಭ್ಯರ್ಥಿಯಾಗಿರುತ್ತದೆ. ಜೆಡಿಎಸ್- ಬಿಜೆಪಿ ಚರ್ಚೆಯಿಲ್ಲ, ಒಟ್ಟಾಗಿದ್ದೇವೆ. ಹಾಗಾಗಿ ಎನ್ ಡಿಎ ಅಭ್ಯರ್ಥಿ ಕಣದಲ್ಲಿ ಇರಲಿದ್ದಾರೆ ಎಂದು ನುಡಿದರು.
ಪಕ್ಷದ ಸಂಘಟನೆ ಕುರಿತು ಸರಣಿ ಸಭೆಗಳು ನಡೆದಿವೆ. ತುಮಕೂರು ಜಿಲ್ಲೆಗೆ ಸಂಬಂಧಿಸಿದ್ದಂತೆ ಸದಸ್ಯತ್ವ ನೋಂದಣಿ, ಬೂತ್ ಕಮಿಟಿ ರಚನೆ ಸಭೆ ನಡೆಯುತ್ತಿದೆ ಎಂದರು.
ಲೋಕಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಜೆಡಿಎಸ್ ಗೆ ಹುಮ್ಮಸ್ಸು. ರಾಜ್ಯದ ಜನತೆ ಬಿಜೆಪಿ- ಜೆಡಿಎಸ್ ಸಮ್ಮಿಲನ ಒಪ್ಪಿದ್ದಾರೆ. ಹೆಚ್ಚು ಸಂಸದರನ್ನು ಆಯ್ಕೆ ಮಾಡಿ ಪ್ರಧಾನಿ ಮೋದಿಗೆ ಕೊಡುಗೆ ನೀಡಿದ್ದಾರೆ. ತುಮಕೂರಿನಲ್ಲಿ ವಿ.ಸೋಮಣ್ಣ ಗೆದ್ದಿದ್ದಾರೆ. ಮಂತ್ರಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಸ್ಥಳೀಯ ಚುನಾವಣೆ, ವಿಧಾನಸಭೆ ಚುನಾವಣೆಯಲ್ಲಿ ಒಟ್ಟಾಗಿ ಹೋಗುತ್ತೇವೆ ಎಂದರು.
ನಟ ದರ್ಶನ ಕೊಲೆ ಪ್ರಕರಣ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ನಿಖಿಲ್, ಇದರ ಬಗ್ಗೆ ನಾನು ಹೆಚ್ಚಾಗಿ ಮಾತನಾಡಲ್ಲ. ಕಾನೂನುಗಿಂತ ಯಾರು ದೊಡ್ಡವರಲ್ಲ. ಕಾನೂನಿಗೆ ಎಲ್ಲರೂ ಕೂಡ ತಲೆಬಾಗಬೇಕು. ಇದಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡುವ ಅವಶ್ಯಕತೆ ಏನಿಲ್ಲ. ದರ್ಶನ್ ಅಭಿಮಾನಿಗಳಿಗೆ ಏನು ಹೇಳಲ್ಲ ಎಂದು ಹೇಳಿದರು.