ಪ್ರಸಕ್ತ ಸಾಲಿನ ಕೇಂದ್ರ ಸರಕಾರದ ಬಜೆಟ್‌ನ್ನು ಈಗಾಗಲೇ ಮಂಡಿಸಲಾಗಿದೆ. ಮಂಗಳೂರು ನಗರಕ್ಕೆ ಸಂಬಂಧಿಸಿದಂತೆ ಬಜೆಟ್‌ನಲ್ಲಿ ಹಲವಾರು ನಿರೀಕ್ಷೆಗಳಿದ್ದರೂ ಹೊಸ ಯೋಜನೆಗಳು ಸಿಗದ ಕಾರಣ ನಿರಾಸೆ ಮೂಡಿಸಿದೆ. ಏತನ್ಮಧ್ಯೆ ರೈಲ್ವೇ ಸಂಬಂಧಿಸಿದಂತೆ ಹಲವು ಬೇಡಿಕೆಗಳಲ್ಲಿ ಯಾವುದೇ ಹೊಸ ಯೋಜನೆಗಳು ಸಿಗದಿರುವುದರಿಂದ ಸಾಮಾನ್ಯವಾಗಿ ಜನರ ನಿರೀಕ್ಷೆಗಳು ಹುಸಿಯಾಗಿವೆ. ಈ ನಿಟ್ಟಿನಲ್ಲಿ ಮಂಗಳೂರು ನಗರದ ರೈಲ್ವೇ ಸಂಬಂಧಿಸಿದಂತೆ ನಿರೀಕ್ಷೆಗಳು ಏನೇನು ಇದ್ದವು ಎಂಬುದನ್ನು ಈ ಲೇಖನದಲ್ಲಿ ತಿಳಿಯಬಹುದಾಗಿದೆ.
ರೈಲ್ವೇಗೆ ಸಂಬಂಧಿಸಿದಂತೆ ಕೇಂದ್ರ ಸರಕಾರದ 2020-21ನೇ ಸಾಲಿನ ಬಜೆಟ್‌ನಲ್ಲಿ ಮಂಗಳೂರಿಗೆ ಹೊಸ ಯೋಜನೆಗಳು ಸಿಗಲಿಲ್ಲ. ಇದು ಈ ಭಾಗದ ಜನರಲ್ಲಿ ಒಂದಷ್ಟು ನಿರಾಸೆ ಮೂಡಿಸಿದೆ. ಯೋಜನೆಗಳಂತೂ ಸಿಗಲಿಲ್ಲ. ಕನಿಷ್ಠ ಬೇಡಿಕೆಯಲ್ಲಿರುವ ಹೊಸ ರೈಲುಗಳನ್ನಾದರೂ ನೀಡುವ ಮನಸ್ಸು ರೈಲ್ವೇ ಇಲಾಖೆ ಮಾಡಬೇಕಾಗಿದೆ.
ಕರಾವಳಿಯ ಬೇಡಿಕೆಗಳಲ್ಲಿ ಕೆಲವು ಅಂಶಗಳಾದರೂ ಈ ಬಾರಿ ಬಜೆಟ್‌ನಲ್ಲಿ ಪರಿಗಣನೆಗೆ ಬರಬಹುದು ಎಂಬ ನಿರೀಕ್ಷೆ ಈ ಭಾಗದ ಜನರಲ್ಲಿತ್ತು. ಬಜೆಟ್‌ಗಿಂತ ಸಾಕಷ್ಟು ಮುಂಚಿತವಾಗಿ ರೈಲ್ವೇಗೆ ಸಂಬಂಧಿಸಿದಂತೆ ಹಲವಾರು ಬೇಡಿಕೆಗಳನ್ನು ರೈಲ್ವೇ ಸಚಿವ ಪಿಯೂಷ್ ಗೋಯಲ್ ಹಾಗೂ ಸಹಾಯಕ ಸಚಿವ ಸುರೇಶ್ ಅಂಗಡಿಯವರಿಗೆ ಸಲ್ಲಿಸಲಾಗಿತ್ತು. ಮಂಗಳೂರು ರೈಲ್ವೇ ವಿಭಾಗ, ಮಂಗಳೂರಿಗೆ ರೈಲ್ವೇ ಪ್ರಾದೇಶಿಕ ಕಚೇರಿ, ಮಂಗಳೂರಿನಿಂದ ರೈಲ್ವೇ ಜಾಲಗಳ ವಿಸ್ತರಣೆ ಸೇರಿದಂತೆ ಹಲವಾರು ಬೇಡಿಕೆಗಳು ಇದರಲ್ಲಿ ಒಳಗೊಂಡಿತ್ತು. ಮೈಸೂರು- ಮಂಗಳೂರು ಮಡಿಕೇರಿ ಮೂಲಕ 272 ಕಿ. ಮೀ. ಹೊಸ ಮಾರ್ಗ ಯೋಜನೆಗಳಿಗೆ ಪ್ರಾಥಮಿಕ ತಾಂತ್ರಿಕ ಮತ್ತು ಸಂಚಾರ ಸರ್ವೆ ( ಪ್ರಿಲಿಮಿನರಿ ಎಂಜಿನಿಯರಿಂಗ್ ಕಮ್ ಟ್ರಾಫಿಕ್ ಸರ್ವೆ) ಕಾರ್ಯವನ್ನು ಕೆಲವು ವರ್ಷಗಳ ಹಿಂದೆ ಬಜೆಟ್‌ನಲ್ಲಿ ಪ್ರಕಟಿಸಲಾಗಿತ್ತು. ಆದರೆ ಇದ್ಯಾವುದಕ್ಕೂ ಈ ಬಾರಿಯ ಬಜೆಟ್‌ನಲ್ಲಿ ಮನ್ನಣೆ ಸಿಗಲಿಲ್ಲ. ಕರಾವಳಿ ಭಾಗಕ್ಕೆ ಹೇಳಿಕೊಳ್ಳಲು ಯಾವುದೇ ಒಂದು ಯೋಜನೆ ಬರಲಿಲ್ಲ.
ಹೊಸ ರೈಲು
ಮಂಗಳೂರಿನಿಂದ ಒಂದಷ್ಟು ಹೊಸ ರೈಲುಸಂಚಾರಗಳನ್ನು ಆರಂಭಿಸಬೇಕು ಎಂಬ ಬೇಡಿಕೆ ಕಳೆದ ಹಲವಾರು ವರ್ಷಗಳಿಂದ ಇವೆ. ಯಶವಂತಪುರ-ಮಂಗಳೂರು ಜಂಕ್ಷನ್ ಗೋಮ್ಮಟೇಶ್ವರ ರೈಲುನ್ನು ಮಂಗಳೂರೂ ಸೆಂಟ್ರಲ್‌ಗೆ ವಿಸ್ತರಿಸಬೇಕು. ಬೆಂಗಳೂರಿಗೆ ಪ್ರತಿದಿನ ಹಗಲು ರೈಲು ಆರಂಭಿಸಬೇಕು, ಮಂಗಳೂರಿನಿಂದ ಅರಸಿಕೆರೆ ಮಾರ್ಗವಾಗಿ ಮೀರಜ್‌ಗೆ 1990ರ ದಶಕದಲ್ಲಿ ಸಂಚಾರ ನಡೆಸುತ್ತಿದ್ದ ಮಹಾಲಕ್ಷ್ಮೀ ಎಕ್ಸ್‌ಪ್ರೆಸ್ ರೈಲುಗಾಡಿಯನ್ನು ಮರು ಆರಂಭಿಸಬೇಕು, ಗೋವಾದ ವಾಸ್ಕೋಡಗಾಮಾದಿಂದ ಮಂಗಳೂರು ಮೂಲಕ ಸುಬ್ರಹ್ಮಣ್ಯದವರೆಗೆ ಪ್ಯಾಸೆಂಜರ್ ರೈಲು ಓಡಿಸಬೇಕು, ಮಂಗಳೂರು-ಹಾಸನ-ಬೆಂಗಳೂರು- ತಿರುಪತಿಗೆ ನೂತನ ರೈಲು ಸೌಲಭ್ಯ, ಮಂಗಳೂರಿನಿಂದ ಬೆಂಗಳೂರಿಗೆ ವಿಕೇಂಡ್ ಹಾಗೂ ರಜಾ ವಿಶೇಷ ರೈಲುಗಳನ್ನು ಓಡಿಸಬೇಕು, ಪ್ರಸ್ತುತ ಸ್ಥಗಿತಗೊಂಡಿರುವ ಕಣ್ಣೂರು-ಬೈಂದೂರು ಪ್ಯಾಸೆಂಜರ್-ಮಂಗಳೂರು ಪ್ಯಾಸೆಂಜರ್ ರೈಲ್‌ನ್ನು ವಾಸ್ಕೊ/ಮಡಂಗಾವ್ ತನಕ ವಿಸ್ತರಿಸಬೇಕು, ಮಂಗಳೂರು ಜಂಕ್ಷನ್ -ವಿಜಯಪುರ ( ಬಿಜಾಪೂರ) ರೈಲು ಮಂಗಳೂರು ಸೆಂಟ್ರಲ್‌ವರೆಗೆ ವಿಸ್ತರಿಸಬೇಕು ಮುಂತಾದ ಬೇಡಿಕೆಗಳನ್ನು ರೈಲ್ವೇà ಮಂಡಳಿಗೆ ಈಗಾಗಲೇ ಸಲ್ಲಿಸಲಾಗಿದೆ. ಕರಾವಳಿ ಭಾಗದ ರೈಲು ಯಾತ್ರಿಕರ ಸಂಘಟನೆಗಳು, ಅಭಿವೃದ್ಧಿಪರ ಸಂಘಟನೆಗಳು ರೈಲ್ವೇ ಮಂಡಳಿಗೆ ಬಗ್ಗೆ ಸಚಿವರನ್ನು, ಜನಪ್ರತಿನಿಧಿಗಳನ್ನು ಈ ಬಗ್ಗೆ ಆಗ್ರಹಿಸಿತ್ತು. ಕರಾವಳಿ ಭಾಗಕ್ಕೆ ಯಾವುದೇ ಹೊಸ ಯೋಜನೆಗಳನ್ನು ನೀಡದಿರುವ ನಿರಾಸೆಯ ಮಧ್ಯೆ ಹೊಸ ರೈಲುಗಳ ಬೇಡಿಕೆಗಳನ್ನಾದರೂ ಈಡೇರಿಸುವ ಮೂಲಕ ಕರಾವಳಿ ಭಾಗಕ್ಕೆ ನ್ಯಾಯ ನೀಡುವ ಕಾರ್ಯ ಮಾಡಬೇಕು ಎಂಬ ಬಲವಾದ ಆಗ್ರಹ ವ್ಯಕ್ತವಾಗಿದೆ. ಬದಲಾಗಿ ಚೆರ್ವತ್ತೂರು ಮಂಗಳೂರು- ಬೆಂಗಳೂರು, ಮಂಗಳೂರು- ಚೆನ್ನೈ ಹಾಗೂ ಮಂಗಳೂರು-ಹೈದರಾಬಾದ್‌ಗೆ ವಂದೇ ಭಾರತ್ ರೈಲು ಸಂಚಾರ ಆರಂಭಿಸುವುದಾಗಿ ರೈಲ್ವೇ ಸಚಿವ ಪಿಯೂಷ್ ಗೋಯಲ್ ಕೆಲವು ತಿಂಗಳುಗಳ ಹಿಂದೆ ಬೆಂಗಳೂರಿನಲ್ಲಿ ಘೋಷಿಸಿದ್ದರು.
ಇದು ರೈಲು ಸೇವೆಯಲ್ಲಿ ಶತಮಾನದ ಇತಿಹಾಸ ಇರುವ ಆದರೆ ರೈಲು ಸಂಚಾರ ಸೇವೆಯಲ್ಲಿ ಸದಾ ನಿರ್ಲಕ್ಷ್ಯಕ್ಕೊಳಪಟ್ಟಿರುವ ಕರಾವಳಿ ಪ್ರದೇಶಕ್ಕೆ ರೈಲು ಸಂಚಾರದ ಸೇವೆಯಲ್ಲಿ ಹೊಸ ಆರಂಭವೊಂದರ ಆಶಾವಾದ ಮೂಡಿಸಿತ್ತು. ಮೈಸೂರು ಹಾಗೂ ಮಂಗಳೂರು ಮಧ್ಯೆ ಹಗಲು ರೈಲು ಸಂಚಾರ ಆರಂಭಿಸಬೇಕು ಎಂದು ಮೈಸೂರು ಸಂಸದ ಪ್ರತಾಪಸಿಂಹ ಆಗ್ರಹಿಸಿದ್ದಾರೆ. ಮಂಗಳೂರಿನಿಂದ ಗುಲ್ಬರ್ಗಾಕ್ಕೆ ರೈಲು ಸಂಚಾರ ಆರಂಭಿಸಬೇಕು ಎಂಬ ಬೇಡಿಕೆ ಧಾರವಾಡ ಸಂಸದ ಪ್ರಹ್ಲಾದ ಜೋಶಿ ಹಾಗೂ ಕರಾವಳಿ ಭಾಗದ ಪ್ರಯಾಣಿಕರ ಕಡೆಯಿಂದ ವ್ಯಕ್ತವಾಗಿದೆ. ಗುಲ್ಬರ್ಗಾದಿಂದ ವಾಡಿ-ಯಾದಗಿರಿ-ರಾಯಚೂರು-ಗುಂಟಕಲ್, ಬಳ್ಳಾರಿ, ಚಿಕ್ಕಮಗಳೂರು- ಬೀರೂರು, ಕಡೂರು, ಅರಸೀಕೆರೆ, ಹಾಸನ- ಸಕಲೇಶಪುರ, -ಸುಬ್ರಹ್ಮಣ್ಯ ರಸ್ತೆ, ಪುತ್ತೂರು, ಬಂಟ್ವಾಳ ಮೂಲಕ ಮಂಗಳೂರಿಗೆ ಸಂಚಾರ ನಡೆಸಬಹುದಾಗಿದೆ ಎಂದು ಸಲಹೆ ಮಾಡಲಾಗಿತ್ತು. ಮಹಾಲಕ್ಷ್ಮೀ ಎಕ್ಸ್‌ಪ್ರೆಸ್ ರೈಲುಗಾಡಿಯನ್ನು ಮಂಗಳೂರು ಮೀರಜ್ ನಡುವೆ ಮರು ಆರಂಭಿಸುವುದರಿಂದ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಸಾಂಗ್ಲಿ ಹಾಗೂ ಮೀರಜ್ ನಡುವೆ ನೇರ ರೈಲು ಸಂಪರ್ಕ ಸಾಧ್ಯವಾಗುತ್ತದೆ. ಜತೆಗೆ, ಮಂಗಳೂರು-ಧಾರವಾಡ ನಡುವೆಯೂ ರೈಲ್ವೇ ಪ್ರಯಾಣ ಜಾಲ ಬೇರ್ಪಡುತ್ತದೆ. ಸುಮಾರು 14 ತಾಸಿನಲ್ಲಿ ಮಂಗಳೂರಿನಿಂದ ಮೀರಜ್‌ಗೆ ಪ್ರಯಾಣಿಸಬಹುದು.
ಈ ಬೇಡಿಕೆಗಳಲ್ಲಿ ಕನಿಷ್ಠ ಕೆಲವು ಬೇಡಿಕೆಗಳನ್ನಾದರೂ ಈಡೇರಿಸುವ ನಿಟ್ಟಿನಲ್ಲಿ ರೈಲ್ವೇ ಇಲಾಖೆ ಪೂರಕ ಸ್ಪಂದನೆ ನೀಡಬೇಕಾಗಿದೆ. ಜನಪ್ರತಿನಿಧಿಗಳು ಈ ದಿಶೆಯಲ್ಲಿ ರೈಲ್ವೇ ಇಲಾಖೆ ಹಾಗೂ ಸರಕಾರದ ಮೇಲೆ ಒತ್ತಡ ತರಬೇಕಾಗಿದೆ.
– ಕೇಶವ ಕುಂದರ್