ಶ್ರೀ ಸಿದ್ಧಗಂಗಾ ಶ್ರೀಗಳ ಕುರಿತ ಸಾಕ್ಷ್ಯಚಿತ್ರಗಳು, ಚಲನಚಿತ್ರಗಳು ಬಂದಿವೆ. ಅದ್ಭುತ ಹಾಡುಗಳೂ ಹೊರಬಂದಿವೆ. ಆದರೆ, ಇತ್ತೀಚೆಗೆ ಅವರ ಕುರಿತು ರಚನೆಯಾಗಿದ್ದ ಹಾಡೊಂದು ಮಾತ್ರ ಬಿಡುಗಡೆಯಾಗಲೇ ಇಲ್ಲ. ಅವರ ಆಶೀರ್ವಾದ ಪಡೆದು, ಅವರ ಕಾಯಕ ಮತ್ತು ತ್ರಿವಿಧ ದಾಸೋಹದ ಕುರಿತಂತೆ ರಚನೆಯಾಗಿದ್ದ ಹಾಡು ಅವರ ಕೈಯಿಂದಲೇ ಬಿಡುಗಡೆಯಾಗಬೇಕಿತ್ತು. ಆದರೆ, ಕೊನೆಗೂ ಆ ಹಾಡು ಹೊರಬರಲಿಲ್ಲ…
ಹೌದು, ಈಗಾಗಲೇ ಎಲ್ಲೆಡೆ ಜೋರು ಸುದ್ದಿಯಾಗಿರುವ “ಒಳಿತು ಮಾಡು ಮನುಸ ನೀ ಇರೋದು ಮೂರು ದಿವಸ…’ಗೀತೆ ಬರೆದಿದ್ದ ನಿರ್ದೇಶಕ, ಗೀತ ಸಾಹಿತಿ ನಮ್‌ಋಷಿ, ಶ್ರೀ ಸಿದ್ಧಗಂಗಾ ಶ್ರೀಗಳ ಕುರಿತು ಹಾಡೊಂದನ್ನು ರಚಿಸಿದ್ದರು. ಆ ಹಾಡಿಗೆ ಗಾಯಕ ರವೀಂದ್ರ ಸೊರಗಾವಿ ಅವರು ಧ್ವನಿ ನೀಡಿದ್ದರು. ಶ್ರೀಗುರು ಸಂಗೀತ ನಿರ್ದೇಶಿಸಿದ ಹಾಡಿಗೆ ಎಚ್.ಎಸ್.ಸೋಮಶೇಖರ್ ನಿರ್ಮಾಪಕರು.
7.40 ನಿಮಿಷ ಅವಧಿಯಲ್ಲಿರುವ ಶ್ರೀಗಳ ಕುರಿತಾದ ಆ ಹಾಡು ರೆಡಿಯಾಗಿದ್ದರೂ, ಶ್ರೀಗಳಿಂದ ಬಿಡುಗಡೆಯಾಗಲಿಲ್ಲ ಎಂಬ ನೋವು ಗೀತರಚನೆಕಾರ ನಮ್‌ಋಷಿ ಅವರಿಗಿದೆ. ಶ್ರೀಗಳ ಕುರಿತು ಹಾಡು ಬರೆದ ಬಗ್ಗೆ “ಉದಯವಾಣಿ’ ಜೊತೆ ಮಾತನಾಡಿದ ನಮ್‌ಋಷಿ, “ಒಳಿತು ಮಾಡು ಮನಸ..’ ಹಾಡಿನ ಕುರಿತು ಾಹಿನಿಯೊಂದರಲ್ಲಿ ಸಂದರ್ಶನ ಬಂದ ಸಮಯದಲ್ಲಿ, ಒಬ್ಬರು, ಶ್ರೀಗಳನ್ನು ಭೇಟಿ ಮಾಡಿಸಿದ್ದರು.
ಆ ಸಮಯದಲ್ಲಿ ಶ್ರೀಗಳ ಆಶೀರ್ವಾದ ಪಡೆದು, ಗೀತೆ ರಚನೆ ಮಾಡುವುದಾಗಿ ಹೇಳಿದ್ದೆ. ಶ್ರೀಗಳು ಕೂಡ “ಓಂ ನಮಃ ಶಿವಾಯ’ ಎನ್ನುವ ಮೂಲಕ ಆಶೀರ್ವದಿಸಿದ್ದರು. ಆಗ ಬರೆದಿದ್ದ ಹಾಡನ್ನು, ಶ್ರೀಗಳ ಕೈಯಿಂದಲೇ ಬಿಡುಗಡೆ ಮಾಡಿಸಬೇಕು ಎಂಬ ಆಸೆ ಇತ್ತು. ಆದರೆ ಆಗಲಿಲ್ಲ’ ಎನ್ನುವ ನಮ್ ಋಷಿ ಅವರು ಶ್ರೀಗಳ ಕುರಿತು ಬರೆದ ಗೀತೆಯ ಸಾಲುಗಳಿವು.
ನಡೆದಾಡುವ ದೈವ….
ಪಲ್ಲವಿ
ಕಾಯಕ ಕೈಲಾಸ ಅಂದರು ಬಸವ
ಅದರಂತೆ ನಡೆದರು ನಡೆದಾಡೋ ದೈವ
ಸಿದ್ಧಗಂಗಾ ಕ್ಷೇತ್ರವೇ ಪೂಜ್ಯರ ಉಸಿರು
ಪ್ರತಿ ಕಲ್ಲು ಹೇಳುತ್ತಿವೆ ಬುದ್ಧಿಯ ಹೆಸರು
ಚರಣ
ನೋಡು ನೋಡು ನೋಡಿಲ್ಲಿ ಬಂದು
ಆರಿಲ್ಲ, ಹಚ್ಚಿದ ಒಲೆಯು ಎಂದು
ಊರೂರು ತಿರುಗಿ ಭಿಕ್ಷೆಯ ಬೇಡಿ
ಅನ್ನವ ಹಾಕಿದ ಯೋಗಿಯ ನೋಡಿ
ಜಾತಿ ಮತಗಳಿಗೆ ಬೆಂಕಿಯ ಇಟ್ಟು
ಎಲ್ಲರೂ ಒಂದೇ ಎನುವುದಾ ನೆಟ್ಟು
ಜ್ಞಾನದ ಜ್ಯೋತಿಯ ಹಚ್ಚುತ್ತಾ ನಡೆದ
ಧರೆಯಲ್ಲಿ ಅಳಿಯದ ಇತಿಹಾಸ ಬರೆದ
ಕಾಯಕ ಕೈಲಾಸ ಅಂದರು ಬಸವ
ಅದರಂತೆ ನಡೆದರು ನಡೆದಾಡೋ ದೈವ