Advertisement

ಸಂಕ್ರಾಂತಿ ನಂತರ ಯಾವುದೇ ಕ್ರಾಂತಿಯೂ ಆಗಲ್ಲ

12:30 AM Jan 13, 2019 | |

ಬೆಳಗಾವಿ/ಹುಬ್ಬಳ್ಳಿ: ಸಂಕ್ರಾಂತಿ ನಂತರ ರಾಜ್ಯದಲ್ಲಿ ಯಾವುದೇ ಕ್ರಾಂತಿಯೂ ಆಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕುರಿತ ಬಿಜೆಪಿ ಮುಖಂಡರ ಹೇಳಿಕೆಗೆ ಕಿಡಿಕಾರಿದರು. ಬಿಜೆಪಿಯವರಿಗೆ ದೇಶಕ್ಕಾಗಿ ಕ್ರಾಂತಿ ಮಾಡಿ ಗೊತ್ತಿಲ್ಲ. ಸಂಕ್ರಾಂತಿಗೂ, ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ. ಕ್ರಾಂತಿನೂ ಆಗಲ್ಲ, ಏನೂ ಆಗಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದವರು ಯಾವ ಕ್ರಾಂತಿ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿ ಬಗ್ಗೆ ಮಾತುಕತೆ ನಡೆದಿದೆ. ಯಾರು, ಯಾವ ಕ್ಷೇತ್ರದಲ್ಲಿ ಗೆಲ್ಲುತ್ತಾರೆ ಎಂಬುದನ್ನು ಲೆಕ್ಕಾಚಾರ ಹಾಕಿ ಅಭ್ಯರ್ಥಿಯನ್ನು ನಿಲ್ಲಿಸಲಾಗುವುದು. ಈ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಹಾಸನ ಇಲ್ಲವೇ ಮಂಡ್ಯವನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ವಿಷಯದಲ್ಲಿ ಹೈಕಮಾಂಡ್‌ ನಿರ್ಧಾರವೇ ಅಂತಿಮ ಎಂದರು.

ಕೋಮುವಾದಿ ಪಕ್ಷ ಬಿಜೆಪಿಯನ್ನು ಸೋಲಿಸಬೇಕೆಂಬುದೇ ಎಲ್ಲರ ಉದ್ದೇಶವಾಗಿದ್ದು, ಎಲ್ಲರೂ ಒಗ್ಗೂಡಿಕೊಂಡು ಲೋಕಸಭಾ ಚುನಾವಣೆ ಎದುರಿಸಿದರೆ ಅನುಕೂಲವಾಗುತ್ತದೆ. ಅಖೀಲೇಶ ಯಾದವ್‌, ಮಾಯಾವತಿ ಸೇರಿದಂತೆ ಮಹಾಘಟಬಂಧನ್‌ದಿಂದ ಯಾರೂ ದೂರವಾಗಬಾರದು ಎಂಬುದು ನನ್ನ ಅಭಿಪ್ರಾಯ ಎಂದರು.

ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಯವರು ಪಕ್ಷ ಅಧಿಕಾರಕ್ಕೆ ಬಂದರೆ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವುದಾಗಿ ಹೇಳಿರುವುದರಲ್ಲಿ ತಪ್ಪೇನಿಲ್ಲ. ಹಿಂದೆ ಬಿಜೆಪಿಯವರು ಚಂದ್ರಬಾಬು ನಾಯ್ಡು ಅವರಿಗೆ ಇದೇ ರೀತಿ ಭರವಸೆ ಕೊಟ್ಟು  ಕೈಕೊಟ್ಟರು. ಆದರೆ, ರಾಹುಲ್‌ ತಾವು ಅಧಿಕಾರಕ್ಕೆ ಬಂದರೆ ಅದನ್ನು ಈಡೇರಿಸುವುದಾಗಿ ಭರವಸೆ ಕೊಟ್ಟಿದ್ದಾರೆ ಎಂದರು.

Advertisement

ಕೇಂದ್ರ ಹುನ್ನಾರ:
ಕೇಂದ್ರ ಸರ್ಕಾರ ಸಿಬಿಐಗೆ ಸ್ವತಂತ್ರವಾಗಿ ಕೆಲಸ ಮಾಡಲು ಬಿಡುತ್ತಿಲ್ಲ. ಎಲ್ಲ ಸ್ವತಂತ್ರ ಸಂಸ್ಥೆಗಳನ್ನು ತನ್ನ ಅಧೀನಕ್ಕೆ ತೆಗೆದುಕೊಂಡು ಕೈಗೊಂಬೆ ಮಾಡಿಕೊಳ್ಳುತ್ತಿದೆ. ರಫೇಲ್‌ ಹಗರಣದಲ್ಲಿ ಎನ್‌ಡಿಎ ಸರಕಾರದ ಬಣ್ಣ ಬಯಲಾಗಲಿದೆ ಎಂಬ ಭಯದಿಂದ ಸಿಬಿಐ ಮಾಜಿ ನಿರ್ದೇಶಕ ಅಲೋಕ ವರ್ಮಾ ಅವರನ್ನು ವಜಾ ಮಾಡಿ, ಸೇವೆಯಿಂದ ನಿರ್ಗಮಿಸುವಂತೆ ಮಾಡಲಾಯಿತು. ಇದು ಕೇಂದ್ರ ಸರಕಾರ ಮಾಡಿದ ದೊಡ್ಡ ಹುನ್ನಾರ ಎಂದು ಆರೋಪಿಸಿದರು.

ಮಾಜಿ ಸಚಿವ ರಮೇಶ ಜಾರಕಿಹೊಳಿ ನನ್ನ ಗುಡ್‌ ಫ್ರೆಂಡ್‌. ಮಾತನಾಡಬೇಕೆಂದು ನಿರಂತರ ಸಂಪರ್ಕ ಮಾಡುತ್ತಿದ್ದರೂ ನನ್ನ ಕಾಲ್‌ ರಿಸೀವ್‌ ಮಾಡುತ್ತಿಲ್ಲ. ನನ್ನ ಮೇಲೆ ರಮೇಶಗೆ ಯಾವುದೇ ಕೋಪ ಇಲ್ಲ. ಆದರೆ, ಯಾವ ಕಾರಣಕ್ಕೆ ನನ್ನ ಫೋನ್‌ ರಿಸೀವ್‌ ಮಾಡುತ್ತಿಲ್ಲ ಎಂಬುದು ಗೊತ್ತಿಲ್ಲ. ರಮೇಶ ಸೇರಿ ಕಾಂಗ್ರೆಸ್‌ನ ಯಾವೊಬ್ಬ ಶಾಸಕರೂ ಬಿಜೆಪಿಗೆ ಹೋಗುವುದಿಲ್ಲ.
– ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ.

ಮಾಜಿ ಮುಖ್ಯಮಂತ್ರಿಗಳ ಸಮಾಗಮ, ಚರ್ಚೆಗೆ ಕಾರಣ:
ದೇಶದಲ್ಲಿ ಮಹಾ ಘಟಬಂಧನ್‌ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಇಬ್ಬರು ಪ್ರಮುಖ ನಾಯಕರು ಶನಿವಾರ ಬೆಳಗಾವಿ ಜಿಲ್ಲೆ ಕಡೋಲಿ ಗ್ರಾಮದಲ್ಲಿ ನಡೆದ ಶಿವಾಜಿ ಪ್ರತಿಮೆ ಅನಾವರಣ ಕಾರ್ಯಕ್ರಮದ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು, ತೀವ್ರ ಚರ್ಚೆಗೆ ಕಾರಣವಾಯಿತು. ವೇದಿಕೆಯಲ್ಲಿ ಕುಳಿತಿದ್ದಾಗಲೇ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶರದ್‌ ಪವಾರ್‌ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗುಸುಗುಸು ಚರ್ಚೆ ಮಾಡುತ್ತಿದ್ದರು. ಸಿದ್ದರಾಮಯ್ಯ ಬರುವ ಮುನ್ನವೇ ಶರದ್‌ ಪವಾರ್‌ ಭಾಷಣ ಮುಗಿಸಿದ್ದರು. ಸಿದ್ದರಾಮಯ್ಯ ತಮ್ಮ ಭಾಷಣದಲ್ಲಿ ಶರದ್‌ ಪವಾರ್‌ ಅವರನ್ನು ಹಾಡಿ ಹೊಗಳಿದರು. ವೇದಿಕೆ ಮೇಲೆ ಸಚಿವ ಸತೀಶ ಜಾರಕಿಹೊಳಿ ಕೂಡ ಇದ್ದರು. ಈ ಕಾರ್ಯಕ್ರಮ ಮುಗಿದ ಬಳಿಕ ಎಲ್ಲ ನಾಯಕರೂ ಗ್ರಾಮದಿಂದ ಸ್ವಲ್ಪ ದೂರದಲ್ಲಿರುವ ಕಲ್ಯಾಣ ಮಂಟಪಕ್ಕೆ ಹೋಗಿ ಭೋಜನ ಸವಿದರು. ಆಗ ಅಲ್ಲಿಯೂ ಕೆಲ ಹೊತ್ತು ರಾಜಕೀಯದ ಬಗ್ಗೆ ಚರ್ಚೆ ನಡೆಸಿದರು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next