ಬೆಂಗಳೂರು: ನಾಗಮಂಗಲದಲ್ಲಿ ಗಣೇಶ ಮೆರವಣಿಗೆ ವೇಳೆ ನಡೆದ ಗಲಾಟೆ ಸಣ್ಣ ಪ್ರಮಾಣದಲ್ಲಿ ಪ್ರಾರಂಭವಾಗಿ ಅಲ್ಲಿಯೇ ಅಂತ್ಯಗೊಂಡಿದೆ ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಘಟನೆ ನಡೆಯಬಾರದಾಗಿತ್ತು. ಆದರೆ, ಸಣ್ಣ ಪ್ರಮಾಣದಲ್ಲಿ ಪ್ರಾರಂಭವಾಗಿ ಅಂತ್ಯವಾಗಿದೆ. ಮುಂಜಾಗ್ರತೆಯ ಕ್ರಮವಾಗಿ ಕೆಎಸ್‌ಆರ್‌ಪಿ ತುಕಡಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು. ಪೊಲೀಸರು ಹತೋಟಿಗೆ ತೆಗೆದುಕೊಂಡಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಏನೂ ಗಲಾಟೆ ಆಗಿಲ್ಲ ಎಂದು ಹೇಳಿದರು.
ಮೆರವಣಿಗೆ ವೇಳೆ ಕಲ್ಲು ತೂರಾಟವಾದಾಗ ಒಬ್ಬರಿಗೊಬ್ಬರಿಗೆ ಘರ್ಷಣೆ ಮಾಡಿಕೊಂಡಿದ್ದಾರೆ. ಅನಂತರ ಎಲ್ಲವೂ ಸರಿ ಹೋಯಿತು ಅಂತ ವಾಪಸ್ ಹೋಗುವಾಗ ಕೆಲವರು ವಾಹನಗಳಿಗೆ ಬೆಂಕಿ ಇಟ್ಟಿದ್ದಾರೆ. ಅಷ್ಟರೊಳಗೆ ಪೊಲೀಸರು ಎಚ್ಚೆತ್ತುಕೊಂಡು ಹತೋಟಿಗೆ ತೆಗೆದುಕೊಂಡಿದ್ದಾರೆ ಎಂದರು.
ಎಸ್‌ಪಿ, ಐಜಿಪಿ, ಕೆಎಸ್‌ಆರ್‌ಪಿ ತುಕಡಿ ಸ್ಥಳದಲ್ಲಿದೆ. ಕಾನೂನು ಸುವ್ಯವಸ್ಥೆ ಎಡಿಜಿಪಿ ಅವರನ್ನು ಸ್ಥಳಕ್ಕೆ ಕಳುಹಿಸಿಕೊಟ್ಟಿದ್ದೇವೆ. ಈ ಘಟನೆಯನ್ನು ಕೋಮುಗಲಭೆ ಅಂತ ಹೇಳಲಾಗುವುದಿಲ್ಲ. ಇದನ್ನು ಹೆಚ್ಚು ಬೆಳೆಯಲು ಬಿಡುವುದಿಲ್ಲ, ಪೊಲೀಸರು ಬಿಟ್ಟಿಲ್ಲ. ಹೆಚ್ಚು ಪ್ರಚಾರ ನೀಡುವುದೂ ಬೇಡ ಎಂದು ಮನವಿ ಮಾಡಿದರು.
ಘಟನೆಗೆ ಅತಿಯಾದ ಓಲೈಕೆಯೇ ಕಾರಣ ಎಂದಿರುವ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ಬಗ್ಗೆ ಕೇಳಿದಾಗ, ಅದರ ಬಗ್ಗೆ ನಾನು ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ. ಅವರು ಈ ಹಿಂದೆ ಯಾವ ರೀತಿ ಓಲೈಕೆ ಮಾಡುತ್ತಿದ್ದರೋ ಗೊತ್ತಿಲ್ಲ ಎಂದರು.