Advertisement

‘ಹಿಂದೆಲ್ಲ  ಚುನಾವಣೆ ಅಂದರೆ ಹಬ್ಬದ ವಾತಾವರಣವಿತ್ತು ‘

12:42 PM May 05, 2018 | Team Udayavani |

ಮಂಗಳೂರು: ಎಲ್ಲಿಯೂ ಅಬ್ಬರದ ಪ್ರಚಾರವಿಲ್ಲ. ಫ್ಲೆಕ್ಸ್‌, ಪೋಸ್ಟರ್‌ಗಳ ಭರಾಟೆಯಿಲ್ಲ. ಬೀದಿ, ವೃತ್ತಗಳಲ್ಲಿ ಯಾವುದೇ ಕಟೌಟ್‌, ಬ್ಯಾನರ್‌ ಕಾಣಿಸುತ್ತಿಲ್ಲ. ಅತ್ತ ಮತದಾರರು ತಮ್ಮ ಪಾಡಿಗೆ ತಾವು ಎನ್ನುತ್ತಿದ್ದಾರೆ. ಆದರೂ ಜನರಲ್ಲಿ ಚುನಾವಣೆಯ ಬಗ್ಗೆ ಕುತೂಹಲ, ಕಾತರವಿದೆ.

Advertisement

ಮಂಗಳೂರಿನ ಹೃದಯ ಭಾಗವನ್ನು ಆವರಿಸಿಕೊಂಡಿರುವ ದಕ್ಷಿಣ ಕ್ಷೇತ್ರದಲ್ಲಿ ಸುತ್ತಾಡಿದಾಗ ಆದ ಅನುಭವವಿದು. ನಮ್ಮ ತಂಡವು ನಗರದ ರಥಬೀದಿ, ಬಂದರು, ಗೋಕರ್ಣ, ಹಂಪನಕಟ್ಟೆ, ಸ್ಟೇಟ್‌ಬ್ಯಾಂಕ್‌ ಪ್ರದೇಶಗಳಲ್ಲಿ ಸುತ್ತಾಟ ನಡೆಸಿದಾಗ, ಎಲ್ಲಿಯೂ ಈ ಬಾರಿಯ ಚುನಾವಣೆಯು ಜನಜೀವನ ಮೇಲೆ ಅಷ್ಟೊಂದು ಪ್ರಭಾವ ಬೀರಿದ್ದು ಅಥವಾ ಆ ಬಗ್ಗೆ ಜನರಲ್ಲಿ ಅಷ್ಟೊಂದು ಗಂಭೀರತೆ ಇರುವುದು ಕಾಣಿಸಲಿಲ್ಲ.

‘ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿ ಬಹಿರಂಗ ಪ್ರಚಾರ ಅಬ್ಬರ ಗೋಚರಿಸುತ್ತಿಲ್ಲ. ನಾವು ಸಣ್ಣದಿರುವಾಗ ಚುನಾವಣೆ ಎಂದರೆ ಹಬ್ಬದ ವಾತಾವರಣವಿತ್ತು. ಈಗ ಏನಿದ್ದರೂ ಸದ್ದು-ಗದ್ದಲವಿಲ್ಲದ ಪ್ರಚಾರ. ಚುನಾವಣಾ ನೀತಿ-ಸಂಹಿತೆ ಈಗ ಕಟ್ಟುನಿಟ್ಟಾಗಿ ಜಾರಿಯಾಗುತ್ತಿದೆ. ಅಬ್ಬರದ ಪ್ರಚಾರ ಇಲ್ಲದಿದ್ದರೂ ಮತದಾನದ ಪ್ರಮಾಣ ಏರಿಕೆಯಾಗಿದೆ’ ಎನ್ನುತ್ತಾರೆ ರಥಬೀದಿಯ ಉದ್ಯಮಿ ಮಹೇಶ್‌ ರಾವ್‌. 

ಪ್ರಗತಿ, ಶಾಂತಿ ಬಯಕೆ
ಚುನಾವಣೆಯ ಟ್ರೆಂಡ್‌ ಹೇಗಿದೆ?ಎಂದು ವ್ಯಾಪಾರಿ ಉಮೇಶ್‌ ಅವರನ್ನು ಪ್ರಶ್ನಿಸಿದಾಗ ‘ಯಾರೇ ಚುನಾವಣೆಯಲ್ಲಿ ಬರಲಿ; ಆದರೆ ಪ್ರಗತಿ, ಶಾಂತಿಯ ವಾತಾವರಣಕ್ಕೆ ಆದ್ಯತೆ ನೀಡಲಿ’ ಎಂದರು. ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆ ಬಗ್ಗೆ ಗೊತ್ತೇ ಎಂದು ಕೇಳಿದಾಗ ‘ಇಲ್ಲ. ಆದರೆ ಈಗ ಚುನಾವಣಾ ಪ್ರಣಾಳಿಕೆಗಳನ್ನು ಜನ ಗಮನಿಸುತ್ತಾರೆ ಎಂಬ ಅರಿವು ರಾಜಕೀಯ ಪಕ್ಷಗಳಲ್ಲಿವೆ. ಹಾಗಾಗಿ ಆಶ್ವಾಸನೆ ನೀಡುವಾಗ ಎಚ್ಚರ ವಹಿಸುತ್ತಿದ್ದು, ಇದು ಒಳ್ಳೆಯ ಲಕ್ಷಣ’ ಎಂದರು.

ಮತದಾನದಲ್ಲಿ ಆಸಕ್ತಿ, ರಾಜಕೀಯದಲ್ಲಿ ನಿರಾಸಕ್ತಿ
ಸ್ಟೇಟ್‌ಬ್ಯಾಂಕ್‌ ಬಳಿ ಒಂದಷ್ಟು ಯುವಕರನ್ನು ಮಾತನಾಡಿಸಿದಾಗ, ‘ಮತದಾನ ಮಾಡಲು ಹೋಗುತ್ತೇವೆ. ಆದರೆ ರಾಜಕೀಯದ ಬಗ್ಗೆ ನಮಗೆ ಆಸಕ್ತಿ ಇಲ್ಲ. ಆದರೆ ಓಟು ಹಾಕುತ್ತೇವೆ. ಜತೆಗೆ ಯಾವುದಕ್ಕೆ ಮತ ಹಾಕಬೇಕು ಎಂಬುದು ಕೂಡ ನಿರ್ಧರಿಸಿದ್ದೇವೆ’ ಎನ್ನುವ ಪ್ರತಿಕ್ರಿಯೆ ಕೊಟ್ಟರು.

Advertisement

ಏರ್‌ ಬತ್ತ್ಂಡ ದಾನೆ ?
ಓಟು ಬೈದ್‌ಂಡ್‌… ಓಟುದಾಕ್ಲು ಇಲ್ಲಗ್‌ ಬೈದ್‌ ಜೆರಾ (ಓಟು ಬಂದಿದೆ. ಪ್ರಚಾರದವರು ಮನೆಗೆ ಬಂದಿಲ್ವ)ಎಂದು ಸೆಂಟ್ರಲ್‌ ಮಾರುಕಟ್ಟೆ ಬಳಿ ತರಕಾರಿ ಮಾರಾಟ ಮಾಡುತ್ತಿದ್ದ ಮಹಿಳೆಯನ್ನು ಪ್ರಶ್ನಿಸಿದಾಗ ‘ಬೈದೇರ್‌; ಬರಂದೆ ದಾನಿ? ಏರ್‌ ಬತ್ತ್ಂಡ ದಾನಿ… ಓಟುದಪಗ ಅವು ಕೊರ್ಪೆ… ಉಂದು ಕೊರ್ಪೆ ಪನ್ಪೆರ್‌… ಬೊಕ್ಕ ಮರಪುವೆರ್‌. ಎನ್ನ ಬಂಜಿ ದಿಂಜೋಡ್ಡ ಈ ದೊಂಬುಡ್‌ ತರಕಾರಿ ಮಾರೋಡೆ (ಬಂದಿದ್ದಾರೆ, ಬರದೇ ಏನು? ಚುನಾವಣೆ ಬಂದಾಗ ಅದು ನೀಡುತ್ತೇನೆ, ಇದು ನೀಡುತ್ತೇನೆ ಎನ್ನುತ್ತಾರೆ. ಮತ್ತೆ ಮರೆಯುತ್ತಾರೆ. ನನ್ನ ಹೊಟ್ಟೆ ತುಂಬಬೇಕಾದರೆ ಈ ಬಿಸಿಲಿನಲ್ಲಿ ತರಕಾರಿ ಮಾರಲೇಬೇಕು) ಎಂದು ತುಸು ಆವೇಶಭರಿತ ಧ್ವನಿಯಲ್ಲೇ ಹೇಳಿದರು. 

ಡಿಜಿಟಲ್‌ ಪ್ರಚಾರಕ್ಕೆ ಒತ್ತು 
ಅಬ್ಬರದ ಪ್ರಚಾರ ಇಲ್ಲದಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳ ಪರವಾಗಿ ಪ್ರಚಾರದ ಭರಾಟೆ ಜೋರಾಗಿದೆ. ‘ಯುವಜನರನ್ನು ಹೆಚ್ಚು ತಲುಪುವ ನಿಟ್ಟಿನಲ್ಲಿ ಅಭ್ಯರ್ಥಿಗಳು ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿರುವುದು ಈ ಬಾರಿಯ ಚುನಾವಣಾ ಪ್ರಚಾರದ ವಿಶೇಷತೆಯಾಗಿದೆ. ಆದರೆ ಕೆಲವು ಇದರಲ್ಲಿ ಸುಳ್ಳು ಪ್ರಚಾರಗಳು ನಡೆಯುತ್ತಿರುವುದು ಕಂಡುಬರುತ್ತಿದೆ. ಈ ಬಗ್ಗೆ ಎಚ್ಚರ ಅಗತ್ಯ ಎನ್ನುತ್ತಾರೆ’ ಮಹೇಶ್‌ ರಾವ್‌.

ಪ್ರಚಾರ, ಸದ್ದುಗದ್ದಲ ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದ್ದು. ಈ ಬಗ್ಗೆ ನಾವು ತಲೆಕೆಡಿಸಲು ಹೋಗುವುದಿಲ್ಲ. ಮತದಾರ ತಾನು ಯಾವ ಪಕ್ಷಕ್ಕೆ, ಅಭ್ಯರ್ಥಿಗೆ ಮತ ನೀಡಬೇಕು ಎಂಬುದನ್ನು ಮೊದಲೇ ನಿರ್ಧರಿಸಿರುತ್ತಾನೆ. ಮತದಾನದ ದಿನ ಮತಚಲಾಯಿಸುತ್ತೇನೆ. 
 – ರಮೇಶ್‌, ರಿಕ್ಷಾಚಾಲಕ

ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next