ಬೆಂಗಳೂರು: ಇಂದು ವಿಕಾಸಸೌಧದಲ್ಲಿ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ನೇತೃತ್ವದಲ್ಲಿ ನೂತನ ಯುವ ನೀತಿ 2021 ರಚನಾ ಸಮಿತಿ ಸಭೆ ನಡೆಯಿತು.
ನೂತನ ಯುವನೀತಿ 2021 ರೂಪಿಸಲು ಡಾ.ಬಾಲಸುಬ್ರಹ್ಮಣ್ಯಂ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ಸಮಿತಿ ಕರಡು ವರದಿಯನ್ನು ಸಲ್ಲಿಸಿತು.
ಕರಡು ವರದಿಯಲ್ಲಿರುವ ಅಂಶಗಳ ಕುರಿತು ಸಚಿವ ಡಾ.ನಾರಾಯಣಗೌಡ ಅವರು, ಡಾ.ಬಾಲಸುಬ್ರಹ್ಮಣ್ಯಂ ಅವರ ನೇತೃತ್ವದ ರಚನಾ ಸಮಿತಿ ಜೊತೆ ಸುದೀರ್ಘವಾಗಿ ಚರ್ಚೆ ನಡೆಸಿದರು.
ಪ್ರತಿಯೊಬ್ಬ ಯುವಕ-ಯುವತಿಯರು ಕೇವಲ ಉದ್ಯೋಗಿಗಳಾಗದೇ ಉದ್ಯಮಿಗಳನ್ನಾಗಿ/ಆವಿಷ್ಕಾರದ ಪೇಟೆಂಟ್ ಪಡೆಯುವಂತರನ್ನಾಗಿಸುವತ್ತಾ ಮುನ್ನೋಟ ಇರಬೇಕು. ವೃತ್ತಿ ಕೌಶಲ್ಯ ತರಬೇತಿ, ಕೋರ್ಸ್‌ಗಳಿಗೆ ಸಂಬಂಧವಿಲ್ಲದಿದ್ದರೂ ಆಸಕ್ತಿ ಕ್ಷೇತ್ರದಲ್ಲಿ ತರಬೇತಿ/ಉದ್ಯೋಗ ನೀಡುವಂತಹ ಯೋಜನೆ ರೂಪುಗೊಳ್ಳಬೇಕು. ಕೃಷಿಯನ್ನು ಉದ್ಯಮವನ್ನಾಗಿಸಲು ಯುವ ಜನರಿಗೆ ಅತ್ಯಾಕರ್ಷಕವಾಗಿಸಲು ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ವರದಿಯಲ್ಲಿ ಹೇಳಬೇಕಿದೆ. ಯುವ ಸಮೂಹ ನಗರ ಕೇಂದ್ರಿತವಾಗುತ್ತಿರುವುದನ್ನು ವಿಕೇಂದ್ರಿಕರಣಗೊಳಿಸಲು ಮಾರ್ಗದರ್ಶನ ನೀಡುವ ಸಲಹೆಗಳನ್ನು ನೀಡಬೇಕಾಗುತ್ತದೆ. ಯುವ ಸಂಪನ್ಮೂಲವನ್ನು ಸದ್ಬಳಕೆ ಮಾಡಿಕೊಂಡಿರುವ ಬೇರೆ-ಬೇರೆ ದೇಶಗಳ ನೀತಿಗಳ ಬಗ್ಗೆ ಅಧ್ಯಯನ ನಡೆಸಬೇಕಿದೆ. ಈ ಎಲ್ಲಾ ಅಂಶಗಳನ್ನು ನೂತನ ಯುವನೀತಿ 2021ರಲ್ಲಿ ಅಳವಡಿಸಬೇಕು ಎಂದು ಸಚಿವ ಡಾ.ನಾರಾಯಣಗೌಡ ಅವರು ಹೇಳಿದರು.