ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ದೇಶೀಯ ಕಾರ್ಪೊರೇಟ್ ಕಂಪನಿಗಳ ಮತ್ತು ಹೊಸ ಉತ್ಪಾದಕ ಕಂಪೆನಿಗಳ ಕಾರ್ಪೊರೇಟ್ ತೆರಿಗೆ ಕಡಿತ ಘೋಷಿಸುವ ಮೂಲಕ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂದಗತಿಯಲ್ಲಿ ಸಾಗುತ್ತಿರುವ ಆರ್ಥಿಕತೆಯನ್ನು ಮೇಲೆತ್ತುವ ಇನ್ನೊಂದು ದೊಡ್ಡ ಪ್ರಯತ್ನವನ್ನು ಮಾಡಿದ್ದಾರೆ. ಅಧ್ಯಾದೇಶದ ಮೂಲಕ ಏ.1ಕ್ಕೆ ಅನ್ವಯವಾಗುವಂತೆ ಈ ತೆರಿಗೆ ಕಡಿತ ಕ್ರಮಗಳನ್ನು ಜಾರಿಗೊಳಿಸಲು ಮುಂದಾಗಿರುವುದರಿಂದ ಆರ್ಥಿಕತೆಯ ಅಭಿವೃದ್ಧಿಗೆ ತಕ್ಷಣಕ್ಕೆ ಇದರಿಂದ ಉತ್ತೇಜನ ಸಿಗುವ ನಿರೀಕ್ಷೆಯಿದೆ. ಎನ್‌ಡಿಎ ಸರ್ಕಾರ ಸರ್ಕಾರ ಎರಡನೇ ಅವಧಿಯಲ್ಲಿ ಆರ್ಥಿಕತೆಯ ಪುನಶ್ಚೇತನಕ್ಕೆ ಘೋಷಿಸುತ್ತಿರುವ ನಾಲ್ಕನೇ ಸುತ್ತಿನ ಉತ್ತೇಜಕ ಕ್ರಮವಿದು. ಕಾರ್ಪೊರೇಟ್ ತೆರಿಗೆ ಕಡಿತ ಮಾಡಬೇಕೆನ್ನುವುದು ಕಂಪನಿಗಳ ಬಹುಕಾಲದ ಬೇಡಿಕೆಯೂ ಆಗಿತ್ತು.
ನಾಲ್ಕನೇ ಸುತ್ತಿನಲ್ಲಿ ಹೂಡಿಕೆ ಮತ್ತು ಉತ್ಪಾದನೆಯ ಹೆಚ್ಚಳಕ್ಕೆ ಅನುಕೂಲ ವಾಗುವ ಕ್ರಮಗಳನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೈಗೊಂಡಿದ್ದಾರೆ. ಇದು ತೀರಾ ಅನಿವಾರ್ಯವೂ ಆಗಿತ್ತು. ಆರ್ಥಿಕ ಹಿಂಜರಿತಕ್ಕೆ ನೇರ ಕಾರಣವಾದದ್ದೆ ಹೂಡಿಕೆಯಲ್ಲಾದ ಕೊರತೆ ಮತ್ತು ಉತ್ಪಾದನೆ ಕುಂಠಿತ. ಕಾರ್ಪೋರೇಟ್ ತೆರಿಗೆ ಕಡಿತದಿಂದ ಸರ್ಕಾರಕ್ಕೆ 1.45 ಲಕ್ಷ ಕೋಟಿ ರೂ. ವರಮಾನ ಕೊರತೆಯಾಗಲಿದೆ. ಈ ಹೊರೆಯನ್ನು ಹೊರಲು ಸರ್ಕಾರ ತಯಾರಾಗಿರುವುದರಿಂದ ಇದೊಂದು ದಿಟ್ಟ ನಿರ್ಧಾರ ಎಂದೇ ಹೇಳಬಹುದು.
ಹೂಡಿಕೆ ಮತ್ತು ಉತ್ಪಾದನೆ ಕ್ಷೇತ್ರಗಳು ಚೇತರಿಸಿಕೊಂಡರೆ ಅದಕ್ಕೆ ಪೂರಕ ವಾಗಿ ಉದ್ಯೋಗ ಸೃಷ್ಟಿಯಾಗುತ್ತದೆ. ಈ ಮೂಲಕ ಜನರ ಕೈಯಲ್ಲಿ ಹಣ ಓಡಾಡಲು ತೊಡಗಿ ಖರೀದಿ ಚಟುವಟಿಕೆಗಳು ಚುರುಕುಗೊಳ್ಳುತ್ತವೆ ಹಾಗೂ ಇದರಿಂದ ಆರ್ಥಿಕತೆ ಮತ್ತೆ ಹಳಿಗೆ ಬರುತ್ತದೆ ಎಂಬೆಲ್ಲ ಲೆಕ್ಕಾಚಾರ ಗಳು ಕಾರ್ಪೊರೇಟ್ ತೆರಿಗೆ ಕಡಿತದ ಹಿಂದೆ ಇವೆ.
ದೇಶದ ಆರ್ಥಿಕತೆ ಮಂದಗತಿಯಲ್ಲಿ ಸಾಗಲು ತೊಡಗಿ ಎರಡು ವರ್ಷ ವಾಗಿದ್ದರೂ ಅದು ಸ್ಪಷ್ಟವಾಗಿ ಗೋಚರಕ್ಕೆ ಬಂದದ್ದು ನಾಲ್ಕು ತಿಂಗಳ ಹಿಂದೆ. ವಾಹನ ಉದ್ಯಮ ಮೊದಲ ಬಾರಿಗೆ ಮಾರಾಟ ಕುಸಿತ ಕಂಡಾಗ ಆರ್ಥಿಕ ಸ್ಥಿತಿಗತಿಯ ಬಗ್ಗೆ ಕಳವಳ ವ್ಯಕ್ತವಾಗಿತ್ತು. ಇದರ ಬೆನ್ನಿಗೇ ರಿಯಲ್ ಎಸ್ಟೇಟ್, ಸಿಮೆಂಟ್, ರಫ್ತು, ಗ್ರಾಹಕ ಉತ್ಪನ್ನಗಳು, ನಿರ್ಮಾಣ ಸೇರಿದಂತೆ ಆರ್ಥಿಕತೆಯ ಎಂಜಿನ್ ಸುಸೂತ್ರವಾಗಿ ನಡೆಯಲು ಸಹಕಾರಿಯಾಗಿರುವ ಎಲ್ಲ ಕ್ಷೇತ್ರಗಳಿಗೆ ಹಿಂಜರಿತದ ಬಿಸಿ ತಟ್ಟಿದೆ ಎಂದು ಅರಿವಾದ ಬಳಿಕ ಎಚ್ಚೆತ್ತ ಸರ್ಕಾರ ಕ್ಷಿಪ್ರವಾಗಿ ಸುಧಾರಣಾ ಕ್ರಮಗಳನ್ನು ಜಾರಿಗೆ ತಂದ ಕಾರಣ ಇನ್ನಷ್ಟು ಕುಸಿತವಾಗುವುದನ್ನು ತಡೆಯಲು ಸಾಧ್ಯವಾಗಿದೆ.
5 ಲಕ್ಷ ಕೋಟಿಯ ಬೃಹತ್ ಆರ್ಥಿಕತೆಯನ್ನು ಹೊಂದುವ ಗುರಿ ಹಾಕಿಕೊಂಡಿರುವ ಸರ್ಕಾರಕ್ಕೆ ಮಂದಗತಿಯ ಆರ್ಥಿಕತೆ ಸವಾಲಾಗಿ ಪರಿಣಮಿ ಸಿದೆ. ಈ ಗುರಿ ತಲುಪಬೇಕಾದರೆ ಜಿಡಿಪಿ ಅಭಿವೃದ್ಧಿ ದರ ಶೇ. 11ರಿಂದ 12 ರಷ್ಟಿrರಬೇಕು. ಆದರೆ ಪ್ರಸ್ತುತ ಇರುವುದು ಶೇ.5 ಮಾತ್ರ. ತೆರಿಗೆ ಕಡಿತ, ನೆರವಿನ ಪ್ಯಾಕೇಜ್‌ಗಳೆಲ್ಲ ಕುಸಿದಿರುವ ಆರ್ಥಿಕತೆಯ ಚೇತರಿಕೆಗೆ ನೀಡುವ ತಾತ್ಕಾಲಿಕ ಉಪಶಮನಗಳಷ್ಟೆ. ಆರ್ಥಿಕತೆಯ ಅಡಿಪಾಯವನ್ನು ಭದ್ರಗೊಳಿಸಲು ಅದರ ಮೂಲಸ್ವರೂಪಕ್ಕೆ ಚಿಕಿತ್ಸೆ ಮಾಡುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಕೆಲವು ಆರ್ಥಿಕ ತಜ್ಞರು ವ್ಯಕ್ತಪಡಿಸಿರುವ ಕಳವಳಕ್ಕೆ ಅರ್ಥವಿದೆ.
ಕಳೆದ ಐದು ವರ್ಷಗಳಿಂದೀಚೆಗೆ ಖಾಸಗಿ ಹೂಡಿಕೆ ಮತ್ತು ಗ್ರಾಹಕ ಬಳಕೆ ಉತ್ಪನ್ನಗಳ ಮೇಲೆಯೇ ನಮ್ಮ ಆರ್ಥಿಕತೆ ನಿಂತಿತ್ತು. ಈ ಎರಡೂ ಕ್ಷೇತ್ರಗಳಲ್ಲಿ ಕಾಣಿಸಿಕೊಂಡ ಮಂದಗತಿಯ ಅಭಿವೃದ್ಧಿ ಒಟ್ಟಾರೆ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿರುವುದನ್ನು ನಾವಿಂದು ನೋಡುತ್ತಿದ್ದೇವೆ. ಇದೀಗ ಆರ್ಥಿಕ ಅಭಿವೃದ್ಧಿಯ ಬಂಡಿಯನ್ನು ಎಳೆಯುವ ಎಲ್ಲ ಅಂಗಗಳನ್ನು ಸುಸ್ಥಿಯಲ್ಲಿಡುವ ಕೆಲಸವನ್ನು ಆದ್ಯತೆಯಲ್ಲಿ ಮಾಡಬೇಕು. ಇದು ದೀರ್ಘಾವಧಿಯಲ್ಲಿ ಫಲಿತಾಂಶ ತೋರಿಸುವ ಕ್ರಮವಾಗಿದ್ದರೂ ಭವಿಷ್ಯದಲ್ಲಿ ಸುಸ್ಥಿರ ಆರ್ಥಿಕತೆಯನ್ನು ಹೊಂದಲು ಅನುಕೂಲಕರ.