ಕಾರವಾರ/ಅಂಕೋಲಾ: ಸಾರ್ವಜನಿಕರಿಗೆ ಇ-ಖಾತಾ ನೀಡುವಲ್ಲಿ ವಿಳಂಬ ಮತ್ತು ಅಲೆದಾಟ ಆಗದಂತೆ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ| ಹರೀಶ ಕುಮಾರ್ ಕೆ. ಖಡಕ್ ಎಚ್ಚರಿಕೆ ನೀಡಿದ್ದಾರೆ.
ಅಂಕೋಲಾ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಪುರಸಭೆ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇ-ಸ್ವತ್ತು ಪಡೆಯುವಲ್ಲಿ ಅಲೆದಾಟ ಮತ್ತು ವಿಳಂಬವಾಗುತ್ತದೆ ಎಂಬ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿದ್ದು, ಇನ್ನು ಮುಂದೆ ಯಾವುದೇ ಕಾರಣಕ್ಕೂ ಜನರಿಂದ ದೂರುಗಳು ಕೇಳಿ ಬರದಂತೆ ಪುರಸಭೆಯ ಎಲ್ಲ ಸಿಬ್ಬಂದಿ ಕಾರ್ಯನಿರ್ವಹಿಸಬೇಕು ಎಂದು ಮುಖ್ಯಾಧಿಕಾರಿಗೆ ಖಡಕ್ ಸೂಚನೆ ನೀಡಿದರು.
ಪುರಸಭೆಯ ಪ್ರಗತಿ ಕುಂಠಿತವಾಗಿದೆ. ಎಲ್ಲ ಸಿಬ್ಬಂದಿ ತಮಗೆ ವಹಿಸಿಕೊಟ್ಟ ಕೆಲಸಗಳನ್ನು ಪ್ರಾಮಾಣಿಕತೆಯಿಂದ ಮಾಡಬೇಕು ಮತ್ತು ಸಾರ್ವಜನಿಕರಿಗೆ ತೊಂದರೆಯಾಗದಂತೆ ಶೀಘ್ರವಾಗಿ ಕಾರ್ಯ ಮಾಡಿಕೊಡಿ ಹಾಗೂ ಇ-ಖಾತಾ ಕುರಿತು ವಾರ್ಡ್ ಮಟ್ಟದಲ್ಲಿ ಜಾಗೃತಿ ಮೂಡಿಸಿ ಎಂದರು.
ಪುರಸಭೆಯಲ್ಲಿ ಕಳೆದ 4-5 ವರ್ಷಗಳಲ್ಲಿ ವಿವಿಧ ಯೋಜನೆಗಳಡಿ ಉಳಿದಿರುವ 50 ಲಕ್ಷಕ್ಕೆ ಜಿಲ್ಲಾ ಯೋಜನಾ ನಿರ್ದೇಶಕರು ಹೊಸ ಕ್ರಿಯಾ ಯೋಜನೆಯನ್ನು ಶೀಘ್ರವಾಗಿ ಸಲ್ಲಿಸಿ, ಅಂಕೋಲಾ ಪ್ರಗತಿಗೆ ಶ್ರಮಿಸಬೇಕು ಎಂದರು.
ನೀರಿನ ಕರ ವಸೂಲಿಯಲ್ಲಿ ಸಮಾಧಾನಕರ ಪ್ರಗತಿ ಇದ್ದು, ವಿದ್ಯುತ್ ಮತ್ತು ನೀರಿನ ಕರ ವಸೂಲಿಗೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಿ ಎಂದು ಹೇಳಿದರು.
ಜಿಲ್ಲಾ ನಗರಾಭಿವೃದ್ಧಿಕೋಶದ ಮುಖ್ಯ ಅಭಿಯಂತರ ಆರ್.ಪಿ. ನಾಯ್ಕ, ಯೋಜನಾ ನಿರ್ದೇಶಕ ಮುನಿಶ್ಯಾಮಪ್ಪಾ, ಅಂಕೋಲಾದ ತಹಶೀಲ್ದಾರ್ ವಿವೇಕ ಶೇಣ್ವಿ, ಪುರಸಭೆ ಮುಖ್ಯಾಧಿಕಾರಿ ಕೆ.ಪ್ರಹ್ಲಾದ ಸೇರಿದಂತೆ ಇತರರು ಉಪಸ್ಥಿತರಿದ್ದರು.