Advertisement

ಇನ್ನೂ ಹಲವು ಕಡೆ ಇದೆ ಗುಡ್ಡ ಕುಸಿಯುವ ಆತಂಕ

01:09 AM Jul 06, 2020 | Sriram |

ಮಹಾನಗರ: ಗುರುಪುರದ ಬಂಗ್ಲೆ ಗುಡ್ಡೆ ಬಳಿ ರವಿವಾರ ಗುಡ್ಡ ಕುಸಿದು ಅನಾಹುತ್ತ ಸಂಭವಿಸಿದೆ. ನಗರದ ಇನ್ನೂ ಅನೇಕ ಕಡೆಗಳಲ್ಲಿ ಅಂತಹ ಪರಿಸ್ಥಿತಿ ಇದ್ದು, ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

Advertisement

ಮಳೆಗಾಲ ಆರಂಭವಾಗಿದ್ದು, ಮಣ್ಣು ಸಡಿಲವಾಗಿ  ಕುಸಿಯುವ ಸಾಧ್ಯತೆ ಹೆಚ್ಚಿರುದೆ. ನಂತೂರು ವೃತ್ತದ ಬಳಿ ಪಂಪ್‌ವೆಲ್‌ಗೆ ತೆರಳುವ ರಾ.ಹೆ.ಯಲ್ಲಿ ಒಂದು ಬದಿಯ ಗುಡ್ಡ ಈಗಾಗಲೇ ಸಣ್ಣ ಮಟ್ಟದಲ್ಲಿ ಜರಿದು ರಸ್ತೆಗೆ ಬೀಳುತ್ತಿದೆ.

ಕಳೆದ ವರ್ಷ ಇಲ್ಲಿ ಗುಡ್ಡದ ಮಣ್ಣಿನೊಂದಿಗೆ ಜಾರಿದ ಮರ ಶಾಲಾ ವ್ಯಾನ್‌ ಮೇಲೆ ಉರುಳಿತ್ತು. ಶಾಲಾ ಬಸ್‌ ಮಾತ್ರವಲ್ಲದೆ ಒಂದು ಟ್ಯಾಂಕರ್‌ ಮತ್ತು ಪಿಕಪ್‌ ವಾಹನ ಮರದಡಿ ಸಿಲುಕಿ ಜಖಂಗೊಂಡಿದ್ದವು. ಅದೃಷ್ಟ ವಶಾತ್‌ ವಿದ್ಯಾರ್ಥಿಗಳು ಪಾರಾಗಿದ್ದರು. ರಾ.ಹೆ. 66ರ ತಲಪಾಡಿ ಸಮೀಪದ ಕೆ.ಸಿ. ರೋಡ್‌ನ‌ಲ್ಲಿಯೂ ಇದೇ ರೀತಿ ಅಪಾಯಕಾರಿಯಾದ ಎತ್ತರದ ಗುಡ್ಡ ಪ್ರದೇಶವಿದೆ.

ಕದ್ರಿ ಬಳಿಯ ಗುಡ್ಡವೊಂದು ಕುಸಿಯುವ ಆತಂಕ ದಲ್ಲಿದೆ. ಇದು ಸ್ಥಳೀಯಾಡಳಿತದ ಗಮನ ದಲ್ಲಿದ್ದರೂ ಸಮಸ್ಯೆ ಬಗೆಹರಿದಿಲ್ಲ. ಕಳೆದ ವರ್ಷ ಇಲ್ಲಿ ಭೂಕುಸಿತವಾಗಿತ್ತು. ಬಳಿಕ ಸ್ಥಳದಲ್ಲಿ ಮರಳು ತುಂಬಿಸಿದ ಗೋಣಿ ಚೀಲಗಳನ್ನು ಪೇರಿಸಿ ತಾತ್ಕಾಲಿಕ ಪರಿಹಾರ ಕಲ್ಪಿಸಲಾಗಿತ್ತು. ಇನ್ನೂ ಶಾಶ್ವತ ಪರಿಹಾರವಾಗಿಲ್ಲ. ಇದೀಗ ಮರಳು ತುಂಬಿದ ಚೀಲಗಳು ರಸ್ತೆಗೆ ಬೀಳುವ ಆತಂಕ ಎದುರಾಗಿದೆ. ಇದೇ ಪ್ರದೇಶದ ಮತ್ತೊಂದೆಡೆ ಕೂಡ ಗುಡ್ಡ ಕುಸಿಯಲು ಆರಂಭವಾಗಿದೆ.

ಈ ಗುಡ್ಡಕ್ಕೆ ಹೊಂದಿಕೊಂಡಂತೆ ರಸ್ತೆ ಕೂಡ ಇದ್ದು, ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಒಂದು ವೇಳೆ ಗುಡ್ಡ ಕುಸಿದರೆ ಅಪಾಯ ನಿಚ್ಚಳ.

Advertisement

ಮನಪಾ ಸ್ಥಳೀಯ ಸದಸ್ಯೆ ಶಕೀಲಾ ಕಾವ ಅವರು “ಸುದಿನ’ಕ್ಕೆ ಪ್ರತಿಕ್ರಿಯಿಸಿ, “ಕಳೆದ ಕೆಲವು ಸಮಯದಿಂದ ಗುಡ್ಡ ಕುಸಿಯುವ ಆತಂಕದಲ್ಲಿದ್ದು, ಇದು ಪಿಡಬ್ಲ್ಯುಡಿ ವ್ಯಾಪ್ತಿಗೆ ಬರುತ್ತದೆ. ತತ್‌ಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು’ ಎಂದಿದ್ದಾರೆ. ಕರಾವಳಿಯಲ್ಲಿ ಮಳೆ ಗಾಲದಲ್ಲಿ ಯಥೇತ್ಛ ಮಳೆ ಸಾಮಾನ್ಯ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆಗಳಲ್ಲಿ ಗುಡ್ಡ ಕುಸಿಯುವ ಆತಂಕ ಇದ್ದು, ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಉದಯವಾಣಿ ಈಗಾಗಲೇ ಎಚ್ಚರಿಸಿದೆ.

ಶಾಶ್ವತ ಪರಿಹಾರ
ಗುರುಪುರ ಬಳಿ ಗುಡ್ಡ ಕುಸಿತ ಉಂಟಾಗಿದ್ದು, ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ್ದೆ. ಜಿಲ್ಲೆಯ ಇನ್ನಿತರ ಪ್ರದೇಶಗಳಲ್ಲಿಯೂ ಗುಡ್ಡ ಕುಸಿಯುವ ಭೀತಿ ಇದೆ. ಶಾಶ್ವತ ಪರಿಹಾರ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಅಪಾಯದ ಅಂಚಿನಲ್ಲಿ ಎಷ್ಟು ಮನೆಗಳಿವೆ ಎಂಬ ಬಗ್ಗೆ ಸರ್ವೇ ಮಾಡುತ್ತೇವೆ.
 - ಕೋಟ ಶ್ರೀನಿವಾಸ ಪೂಜಾರಿ, ದ.ಕ. ಜಿಲ್ಲಾ ಉಸ್ತುವಾರಿ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next