Advertisement
ಪಟ್ಟಣದಲ್ಲಿ ಪ್ಲಾಸ್ಟಿಕ್ ಬಳಕೆ ಕಡ್ಡಾಯವಾಗಿ ನಿಷೇಧ ಮಾಡಿರುವ ಪುರಸಭಾ ಅಡಳಿತ, ಹಲವು ಬಾರಿ ಸಗಟು, ಚಿಲ್ಲರೆ ಮಾರಾಟಗಾರರ ಬಳಿಯಲ್ಲಿನ ಟನ್ ಗಟ್ಟಲೆ ಪ್ಲಾಸ್ಟಿಕ್ ಹಾಳೆ ಮತ್ತು ಕವರ್‌ಗಳನ್ನು ಜಪ್ತಿ ಮಾಡಿತ್ತು. ಆದರೂ ಬಳಕೆ ನಿಲ್ಲದ ಕಾರಣ, ಹೆಚ್ಚಿನ ಪ್ರಮಾಣದಲ್ಲಿ ದಂಡ ವಿಧಿಸಲು ಕ್ರಮ ಕೈಗೊಂಡಿತ್ತು. ಆದರೂ ಬಳಗೆ ಇನ್ನೂ ಕಡಿಮೆಯಾಗಿಲ್ಲ. ಇದಕ್ಕೆ ಮಾರುಕಟ್ಟೆಯಲ್ಲಿ ಗ್ರಾಹಕರು, ವ್ಯಾಪಾರಿಗಳ ಕೈಯಲ್ಲಿ ಇದ್ದ ಪ್ಲಾಸ್ಟಿಕ್ ಚೀಲಗಳೇ ಸಾಕ್ಷಿ. ಪ್ರಧಾನಿ ಮೋದಿ ಗಾಂಧಿ ಜಯಂತಿಯಂದು, ಏಕ ಬಳಕೆ ಪ್ಲಾಸ್ಟಿಕ್ ಬಳಸದಂತೆ ಸಲಹೆ ನೀಡಿದ್ದರು. ಸ್ಥಳೀಯ ಸಂಸ್ಥೆಗಳು ಪ್ಲಾಸ್ಟಿಕ್ ಬಳಕೆ ನಿಷೇಧಿಸಿ ಕಟ್ಟುನಿಟ್ಟಿನ ಕಾನೂನು ಜಾರಿ ಮಾಡಿವೆ. ಆದರೂ ಅಂಗಡಿಗಳಿಗೆ ಯಾವ ಮಾರ್ಗದಲ್ಲಿ ಪ್ಲಾಸ್ಟಿಕ್ ಕವರ್ ಪೂರೈಕೆಯಾಗುತ್ತಿವೆ ಎನ್ನುವುದು ಅಡಳಿತಕ್ಕೆ ತಿಳಿಯದಾಗಿದೆ.
Related Articles
Advertisement
ಸೂಚನ ಫಲಕ ಹಾಕಿದ್ದಾರೆ: ಕೆಲವೊಂದು ಹೋಟೆಲ್, ಬೇಕರಿ, ಅಂಗಡಿ ಮಾಲಿಕರು, ವರ್ತಕರು ಸೇರಿ ಹಲವು ವ್ಯಾಪಾರಿಗಳು ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಸ್ವಯಂ ಪ್ರೇರಿತವಾಗಿ ಮುಂದಾಗಿದ್ದಾರೆ. ಕೆಲವು ಹೋಟೆಲ್‌ಗಳಲ್ಲಿ ಈಗಾಗಲೇ ನಾಮಫಲಕ ಅಳವಡಿಸಿದ್ದು, ಊಟ ತಿಂಡಿ ತೆಗೆದುಕೊಂಡು ಹೋಗುವರು ಟೆಫನ್ ಬಾಕ್ಸ್, ಬಟ್ಟೆ ಚೀಲ ತರುವಂತೆ ಸೂಚನಾ ಫಲಕ ಹಾಕಿದ್ದಾರೆ. ಬೇಕರಿ, ಅಂಗಡಿ ವರ್ತಕರು ಗ್ರಾಹಕರ ಖರೀದಿಸುವ ತಿಂಡಿ ಹಾಗೂ ಇನ್ನಿತರ ವಸ್ತುಗಳಿಗೆ ಬಟ್ಟೆ ಬ್ಯಾಗನ್ನು ನೀಡಿ ಅದಕ್ಕೆ ಪ್ರತ್ಯೇಕ ಹಣ ಪಡೆಯುತ್ತಿದ್ದಾರೆ. ಆದರೆ, ಬೀದಿ ವ್ಯಾಪಾರಿಗಳು, ಸಣ್ಣಪುಟ್ಟ ಅಂಗಡಿ ಹಾಗೂ ಕೆಲವು ದೊಡ್ಡಮಟ್ಟದ ವರ್ತಕರು ವ್ಯಾಪಾರಿಗಳು ಮಾತ್ರ ಪ್ಲಾಸ್ಟಿಕ್ ಕೈಚೀಲಗಳು ಹಾಗೂ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡುವುದನ್ನು ಬಿಡಲಿಲ್ಲ, ಅಂತಹ ವ್ಯಾಪಾರಿಗಳು ಹಾಗೂ ಬಳಸುವವರನ್ನು ಹಿಡಿದು ದಂಡ ವಿಧಿಸಿದಲ್ಲಿ ಕೊಂಚ ತಹಬದಿಗೆ ಬರುತ್ತದೆ.
ಬಿಸಿ ಮುಟ್ಟಿಸಿ: ಗ್ರಾಮೀಣ ಭಾಗದಲ್ಲಿಯೂ ಕಡ್ಡಾಯವಾಗಿ ಪ್ಲಾಸ್ಟಿಕ್ ನಿಷೇಧ ಮಾಡುವ ಬಗ್ಗೆ ತಾಪಂ ಸಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದರೂ ಕಾರ್ಯರೂಪ ಸಾಧ್ಯವಾಗಿಲ್ಲ. ಕೇವಲ ಜಾಗೃತಿಯಿಂದ ಮಾತ್ರ ಪ್ರಾಣ ಹಾನಿಗೆ ಕಾರಣವಾಗುತ್ತಿರುವ ಪ್ಲಾಸ್ಟಿಕ್ ನಿಷೇಧ ಸಾಧ್ಯವಿಲ್ಲ ಎಂಬುದನ್ನು ತಿಳಿದು ತಾಲೂಕು ಅಡಳಿತ ಕಟ್ಟುನಿಟ್ಟಾಗಿ ಕಾನೂನು ಪಾಲನೆ ಮಾಡುವ ಹಾದಿಯಲ್ಲಿ ಬಳಕೆದಾರರು ಮತ್ತು ಮಾರಾಟಗಾರಿಗೆ ಕಾನೂನು ಬಿಸಿ ಮುಟ್ಟಿಸಿದಲ್ಲಿ ಮಾತ್ರ ಸಂಪೂರ್ಣವಾಗಿ ಪ್ಲಾಸ್ಟಿಕ್ ಮುಕ್ತ ಮಾಲೂರು ತಾಲೂಕನ್ನು ಕಾಣಲು ಸಾಧ್ಯ.
ನಾಗರಿಕರು ಅಂಗಡಿ ಹೋಗುವ ಮುನ್ನಾ ಸ್ವಯಂ ಪ್ರೇರಣೆಯಿಂದ ಬಟ್ಟೆ ಚೀಲ, ಬುಟ್ಟಿಯನ್ನು ತೆಗೆದುಕೊಂಡು ಹೋಗಬೇಕು. ಅಂಗಡಿ, ಹೋಟೆಲ್, ಕಲ್ಯಾಣ ಮಂಟಪ ಮಾಲಿಕರು ಪ್ಲಾಸ್ಟಿಕ್ ವಸ್ತು ಬಳಕೆ ಕಡ್ಡಾಯವಾಗಿ ನಿಷೇಧಿಸಬೇಕು. ಉಪಯೋಗಿಸಿದ್ದಲ್ಲಿ ಕಾನೂನು ರೀತಿ ದಂಡ ವಿಧಿಸಲಾಗುವುದು. ಪ್ಲಾಸ್ಟಿಕ್ ನಿಷೇಧ ಮಾಡುವಲ್ಲಿ ಪುರಸಭೆ ಜೊತೆ ಜನರ ಸಹಕಾರವು ಅಗತ್ಯ. ಈಗ ಮಾತ್ರ ಸಂಪೂರ್ಣ ಪ್ಲಾಸ್ಟಿಕ್ ನಿಷೇಧ ಸಾಧ್ಯ. –ಎಸ್.ಪ್ರಸಾದ್, ಮುಖ್ಯಾಧಿಕಾರಿ, ಪುರಸಭೆ ಮಾಲೂರು
-ಎಂ.ರವಿಕುಮಾರ್