Advertisement

ಆರ್‌ಟಿಇ ಅರ್ಜಿ ಸಲ್ಲಿಕೆಗೆಈಗ ಟ್ರೈ ಅಗೇನ್‌ ಸಮಸ್ಯೆ

11:51 AM Mar 05, 2018 | Team Udayavani |

ಹುಬ್ಬಳ್ಳಿ: ಬಡ ಮಕ್ಕಳಿಗೆ ಖಾಸಗಿ ಶಾಲೆಯಲ್ಲೂ ಉಚಿತ ಶಿಕ್ಷಣ ನೀಡಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಸರ್ಕಾರ ಆರ್‌ಟಿಇ ಯೋಜನೆ ಜಾರಿಗೆ ತಂದಿದೆ. ಆದರೆ ಪ್ರಸಕ್ತ ಸಾಲಿಗೆ ಆನ್‌ಲೈನ್‌ ಅರ್ಜಿ ಸಲ್ಲಿಕೆಯಲ್ಲಿ ಉಂಟಾಗುತ್ತಿರುವ ಕಿರಿಕಿರಿಗೆ ಪಾಲಕರಿಗೆ ಆರ್‌ಟಿಇ ಸಹವಾಸವೇ ಸಾಕಪ್ಪ ಎನಿಸುವಂತೆ ಮಾಡಿದೆ.

Advertisement

ಆರ್‌ಟಿಇ ಅರ್ಜಿ ಸಲ್ಲಿಕೆಗೆ ಶಿಕ್ಷಣ ಇಲಾಖೆ ಈಗಾಗಲೇ ಅಧಿಸೂಚನೆ ಹೊರಡಿಸಿದ್ದು, ಫೆ.18ರಿಂದ ಟ್ರಯಲ್‌ (ಪ್ರಾಯೋಗಿಕ) ಆರಂಭಿಸಿತ್ತು. ನಂತರ ಎರಡು ದಿನ ಬಿಟ್ಟು ಅಂದರೆ ಫೆ. 20ರಿಂದ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. ಆದರೆ ತಾಂತ್ರಿಕ ದೋಷದಿಂದ (ಸಾಫ್ಟವೇರ್‌) ಅರ್ಜಿ ಸಲ್ಲಿಕೆಯೇ ಆಗುತ್ತಿಲ್ಲ.

ಅರ್ಜಿ ಸಲ್ಲಿಕೆ ಮೊದಲ ಹಂತದಲ್ಲಿ ಮಕ್ಕಳ ಆಧಾರ್‌ ಸಂಖ್ಯೆ ನಮೂದಿಸಿದಾಗ ಮಕ್ಕಳ ಸಂಪೂರ್ಣ ವಿವರ ದಾಖಲಾಗುತ್ತದೆ. ತದನಂತರ ಪಾಲಕರ ಆಧಾರ್‌ ಸಂಖ್ಯೆ ನಮೂದಿಸಬೇಕು. ಆಗ ಪಾಲಕರ ಸಂಪೂರ್ಣ ವಿವರ ಬರುತ್ತದೆ. ಇಲ್ಲಿ ಮಕ್ಕಳ ಮತ್ತು ಪಾಲಕರ ಆಧಾರ್‌ ಕಾರ್ಡ್‌ನ ವಿಳಾಸ, ಹೆಸರು ಹಾಗೂ ಪಿನ್‌ ಕೋಡ್‌ ಹೊಂದಾಣಿಕೆ ಆಗಬೇಕು.

ಇಲ್ಲವಾದರೆ ಮುಂದಿನ ಹಂತ ತಲುಪುವುದೇ ಇಲ್ಲ. ಇದಾದ ನಂತರ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಆರ್‌ಡಿ ಸಂಖ್ಯೆ ನಮೂದಿಸಬೇಕು. ಸಂಖ್ಯೆ ಹಾಕಿದ ತಕ್ಷಣ ಆದಾಯ ಹಾಗೂ ಜಾತಿಯ ಸಂಪೂರ್ಣ ವಿವರ ಬರುತ್ತದೆ. ಆದರೆ ಈ ಹಂತದಲ್ಲಿ ಎಲ್ಲರಿಗೂ ಬಹುತೇಕ ಸಮಸ್ಯೆಯಾಗುತ್ತಿದೆ.
 
ಹಳೆಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಆರ್‌ಡಿ ಸಂಖ್ಯೆ ಹಾಕಿದರೆ ವಿವರವೇನೊ ಬರುತ್ತದೆ. ಆದರೆ ಮುಂದಿನ
ಹಂತ ತಲುಪುವುದೇ ಇಲ್ಲ. ಇದೇ ರೀತಿ ಹೊಸ ಪ್ರಮಾಣ ಪತ್ರ ಮಾಡಿ, ಆರ್‌ಡಿ ಸಂಖ್ಯೆ ನಮೂದಿಸಿದರೆ ಟ್ರಾಯ್‌ ಅಗೇನ್‌ ಎಂಬ ಸಂದೇಶ ಬರುತ್ತಿದೆ. ಒಂದು ವೇಳೆ ಇದನ್ನು ಪೂರ್ಣಗೊಳಿಸಿ ಮುಂದಿನ ಹಂತ ತಲುಪಿದರೆ ಕೆವೈಪಿ ಸಮಸ್ಯೆ ಎಂಬ ಸಂದೇಶ ಬರುತ್ತಿದೆ. ಇದಕ್ಕೂ ಮೊದಲು ಕೆಲವರಿಗೆ ಆಧಾರ್‌ ಸಂಖ್ಯೆ ಹಾಕಿದಾಗ ಒಟಿಪಿಯೇ ಬರುತ್ತಿಲ್ಲ. ಬಂದರೂ ಅರ್ಧಗಂಟೆ ತಡವಾಗಿ ಬರುತ್ತಿದೆ. ಒಂದಲ್ಲ ಒಂದು ಸಮಸ್ಯೆಯಿಂದ ಅರ್ಜಿ ಮಾತ್ರ ಪೂರ್ಣಗೊಳ್ಳುತ್ತಿಲ್ಲ. 

ಈಗಾಗಲೇ 15 ದಿನಗಳು ಉರುಳಿವೆ. ಅರ್ಜಿ ಸಲ್ಲಿಕೆಗೆ ಮಾ.21 ಕೊನೆಯ ದಿನ! ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಈ ಸಮಸ್ಯೆ ಇದೆ. 15 ದಿನಗಳಿಂದ ಪಾಲಕರು ಅರ್ಜಿ ಸಲ್ಲಿಸಲು ಅಲೆದು ಅಲೆದು ಸುಸ್ತಾಗಿದ್ದಾರೆ. ಮನೆಯಲ್ಲಿಯೇ ಕುಳಿತು ಅರ್ಜಿ ತುಂಬೋಣವೆಂದರೆ ಅಲ್ಲಿಯೂ ಇದೇ ಸಮಸ್ಯೆ. ಸೈಬರ್‌ ಕೆಫೆಗಳಲ್ಲಿ ಇದೇ ರೀತಿ ತೊಂದರೆ ಉಂಟಾಗುತ್ತಿದೆ.

Advertisement

ಸಮಸ್ಯೆ ಇದ್ದದ್ದು ನಿಜ!
ಈ ಕುರಿತು ಬಿಇಒ ಕಚೇರಿ ಅಧಿಕಾರಿಗಳನ್ನು ಕೇಳಿದರೆ, ಇಂತಹ ಸಮಸ್ಯೆ ಇರುವುದು ನಿಜ. ಹಿಂದೆ ಆಧಾರ್‌ ವಿವರ ತೆಗೆದುಕೊಳ್ಳುತ್ತಿರಲಿಲ್ಲ. ಈಗ ಅದು ಸರಿಯಾಗಿದೆ. ಕೆಲವೆಡೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಸಮಸ್ಯೆ ಇದೆ. ಹಳೆಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ತೆಗೆದುಕೊಳ್ಳುತ್ತಿದೆ. ಹೊಸ ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕೆ ಸಮಸ್ಯೆಯಾಗುತ್ತಿದೆ.

ಇದು ಸಾಫ್ಟವೇರ್‌ ಸಮಸ್ಯೆ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಕೆಲವೇ ದಿನಗಳಲ್ಲಿ ಸರಿ ಹೋಗಲಿದೆ ಎನ್ನುತ್ತಿದ್ದಾರೆ. 

24 ಸಾವಿರ ಅರ್ಜಿ ಸಲ್ಲಿಕೆ ಆಧಾರ್‌ ಸಂಖ್ಯೆ ನಮೂದಿಸಿದಾಗ ಮಕ್ಕಳ ಹಾಗೂ ಪಾಲಕರ ಸಂಪೂರ್ಣ ವಿವರ ಬರುತ್ತದೆ. ಅದೇ ರೀತಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಆರ್‌ಡಿ ಸಂಖ್ಯೆ ನಮೂದಿಸಿದ ಕೂಡಲೇ ಕಂದಾಯ ಇಲಾಖೆ ಸರ್ವರ ಜೊತೆ ಪರಿಶೀಲನೆಯಾಗಿ ತಕ್ಷಣ ವಿವರ ಬರುತ್ತದೆ. ಮೊದಲು ಹತ್ತು ದಿನಗಳ ಕಾಲ ಬಹಳ ಸಮಸ್ಯೆಯಾಗಿತ್ತು. ಆದರೆ ಬಹುತೇಕ ಸಮಸ್ಯೆ ಬಗೆಹರಿದಿದೆ. ಈಗಾಗಲೇ ರಾಜ್ಯದ 24 ಸಾವಿರಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಇನ್ನೂ ಏನಾದರು ಸಮಸ್ಯೆ ಇದ್ದರೆ ದೂರು ನೀಡಬಹುದು ಎನ್ನುತ್ತಿದ್ದಾರೆ
 
ಈ ಮೊದಲು ಸಮಸ್ಯೆ ಇದ್ದದ್ದು ನಿಜ. ಬಹುತೇಕ ಎಲ್ಲ ಸಮಸ್ಯೆ ಬಗೆಹರಿಸಲಾಗಿದೆ. ಅರ್ಜಿಗಳು ಕಳೆದ ವರ್ಷಕ್ಕಿಂತ ಹೆಚ್ಚು ಸಲ್ಲಿಕೆಯಾಗುತ್ತಿವೆ. ಇನ್ನೂ ಸಮಸ್ಯೆ ಇದ್ದರೆ ದೂರು ನೀಡಬಹುದು. 
 ಬಿ.ಕೆ. ಬಸವರಾಜು, ನಿರ್ದೇಶಕರು ಪ್ರಾಥಮಿಕ ಶಿಕ್ಷಣ

ಹತ್ತು ದಿನಗಳಿಂದ ಆರ್‌ಟಿಇ ಅರ್ಜಿ ಸಲ್ಲಿಸಲು ಪ್ರಯತ್ನಿಸುತ್ತಿದ್ದೇನೆ. ಒಂದಲ್ಲ ಒಂದು ಸಮಸ್ಯೆಯಿಂದ ಆರ್ಜಿ ಸಲ್ಲಿಕೆಯಾಗುತ್ತಿಲ್ಲ. ಅಲೆದಾಡಿ ಅಲೆದಾಡಿ ಸುಸ್ತಾಗಿದೆ.
 ಗಜಾನನ ನಾಯ್ಕ ಹೊನ್ನಾವರ, ಪಾಲಕರು 

ಕಳೆದ ಕೆಲವು ದಿನಗಳಿಂದ ಆರ್‌ಟಿಇ ಅರ್ಜಿ ಸಲ್ಲಿಸಲು ಪ್ರಯತ್ನಿಸುತ್ತಿದ್ದೇನೆ. ದಿನಕ್ಕೊಂದು ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಇನ್ನೂವರೆಗೆ ಒಂದೂ ಅರ್ಜಿ ಹಾಕಲು ಆಗಿಲ್ಲ.
 ವಿಘ್ನೇಶ್ವರ ಜಿ., ಸೈಬರ್‌ ಕೆಫೆ

„ವಿನಾಯಕ ಜಿ. ನಾಯ್ಕ, ತಾಳಮಕ್ಕಿ

Advertisement

Udayavani is now on Telegram. Click here to join our channel and stay updated with the latest news.

Next