ಬ್ಯಾಡಗಿ: ಆರೋಗ್ಯಕ್ಕಿಂತ ಮಿಗಿಲಾದ ಸಂಪತ್ತು ಇನ್ನೊಂದಿಲ್ಲ. ಪ್ರತಿಯೊಬ್ಬರೂ ಆರೋಗ್ಯ ರಕ್ಷಣೆ ಕಡೆಗೆ ಗಮನ ಹರಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕೆಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.
75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಆರೋಗ್ಯ ಇಲಾಖೆ, ನಾರಾಯಣ ಹೃದಯಾಲಯ, ರೋಟರಿ ಸಂಸ್ಥೆ ವತಿಯಿಂದ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಆರೋಗ್ಯ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಕೋವಿಡ್ ಸಂಕಷ್ಟ ಕಾಲದಲ್ಲಿ ದೇಶದ ಜನರ ಆರೋಗ್ಯ ರಕ್ಷಣೆ ಮಾಡುವುದರ ಜೊತೆಗೆ ಸ್ವದೇಶಿ ಲಸಿಕೆ ಅಭಿವೃದ್ಧಿಪಡಿಸಿ ಕೋವಿಡ್ ಅನ್ನು ಯಶಸ್ವಿಯಾಗಿ ಮೆಟ್ಟಿ ನಿಲ್ಲುವ ಮೂಲಕ ಭಾರತ ಜಗತ್ತಿಗೆ ಮಾದರಿಯಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತಾಲೂಕು ಆರೋಗ್ಯಾಧಿಕಾರಿ ಸೋಹೈಲ್ ಹರವಿ, ಜಿಲ್ಲಾ ಹಂತದಲ್ಲಿ ಆರೋಗ್ಯ ಮೇಳಗಳನ್ನು ನಡೆಸಲಾಗುತ್ತಿತ್ತು. ಇದೀಗ ಸರಕಾರದ ಆದೇಶದ ಮೇರೆಗೆ ತಾಲೂಕು ಮಟ್ಟದಲ್ಲಿ ಆರೋಗ್ಯ ಮೇಳ ಆಯೋಜನೆ ಮಾಡಿ ಜನರ ಆರೋಗ್ಯ ಕಾಪಾಡಲು ಸರಕಾರ ಮುಂದಾಗಿದೆ. ಎಲ್ಲರೂ ಇದರ ಸದುಪಯೋಗ ಮಾಡಿಕೊಳ್ಳುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|ಎಚ್. ರಾಘವೇಂದ್ರಸ್ವಾಮಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎನ್. ತಿಮ್ಮಾರೆಡ್ಡಿ, ಪುರಸಭೆ ಅಧ್ಯಕ್ಷೆ ಸರೋಜ ಉಳ್ಳಾಗಡ್ಡಿ, ಉಪಾಧ್ಯಕ್ಷೆ ಗಾಯತ್ರಿ ರಾಯ್ಕರ್, ಸದಸ್ಯರಾದ ಕಲಾವತಿ ಬಡಿಗೇರ್, ಗಿರಿಜಮ್ಮ ಪಟ್ಟಣಶೆಟ್ಟಿ, ಅಕ್ಕಮ್ಮ ಛಲವಾದಿ, ಸುಭಾಸ ಮಾಳಗಿ, ಡಾ.ಸೌದಾಗರ, ಬನ್ನಿಹಟ್ಟಿ ಗ್ರಾಪಂ ಅಧ್ಯಕ್ಷ ಜಗದೀಶ ಕೆರಕರ, ಸುರೇಶ ಯತ್ನಳ್ಳಿ, ಸುರೇಶ್ ಉದ್ಯೋಗಣ್ಣನವರ, ವೈದ್ಯಾಧಿಕಾರಿ ಡಾ|ಪುಟ್ಟರಾಜು ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.