Advertisement

ಬೆಂದ್ರ್ ತೀರ್ಥ ಬರಿದು: ತಣ್ಣಗಾದ ಬಿಸಿನೀರಿನ ಚಿಲುಮೆ!

02:50 AM May 31, 2018 | Karthik A |

ಪುತ್ತೂರು: ಒಂದು ಕಾಲದಲ್ಲಿ ಪ್ರೇಕ್ಷಣೀಯ ಸ್ಥಳ ಹಾಗೂ ಚರ್ಮರೋಗ ನಿವಾರಣೆ ನಂಬಿಕೆಯ ಸ್ಥಳವಾಗಿ ಗುರುತಿಸಿಕೊಂಡಿದ್ದ ದಕ್ಷಿಣ ಭಾರತದ ಏಕೈಕ ಬಿಸಿನೀರಿನ ಚಿಲುಮೆ ಹೆಗ್ಗಳಿಕೆಯನ್ನು ಹೊಂದಿರುವ ಇರ್ದೆ ಬೆಂದ್ರ್ ತೀರ್ಥ ಇಂದು ಜೀರ್ಣಾವಸ್ಥೆಗೆ ತಲುಪಿದೆ. ಪ್ರವಾಸೋದ್ಯಮ ಇಲಾಖೆ ಬೆಂದ್ರ್ ತೀರ್ಥದ ಅಭಿವೃದ್ಧಿಗೆ ಕೈಹಾಕಿದ್ದರೂ ಹಾಳಾಗುತ್ತಿರುವ ಮೂಲ ವಿಚಾರಗಳ ಅಭಿವೃದ್ಧಿ ಮಾಡದೆ ಬೇರೆಯೇ ಯೋಜನೆಯನ್ನು ಹಾಕಿಕೊಂಡಿದೆ. ಆದರೆ ನಿರ್ವಹಣೆಯೂ ವಿಫಲವಾಗಿ ಈಗ ಮೂಲೆಗುಂಪಾಗಿದೆ.

Advertisement

ಅತಿ ವಿಶೇಷವಾಗಿತ್ತು 
ದಕ್ಷಿಣ ಭಾರತದ ಏಕೈಕ ಬಿಸಿ ನೀರಿನ ಚಿಲುಮೆ ಹಲವು ವರ್ಷಗಳ ಹಿಂದೆ ಪುತ್ತೂರು ತಾ| ನ ಇರ್ದೆ ಗ್ರಾಮದಲ್ಲಿ ಕಾಣಿಸಿಕೊಂಡಿತ್ತು. ಇದರಿಂದ ಗಂಟೆಗೆ 1,350ರಿಂದ 4,600 ಲೀ. ನೀರು ಚಿಮ್ಮುತ್ತಿತ್ತು. 99ರಿಂದ 106 ಡಿಗ್ರಿ ಫಾರನ್‌ ಹೀಟ್‌ ಉಷ್ಣಾಂಶ ಹಾಗೂ ಗಂಧಕದ ವಾಸನೆಯನ್ನು ಹೊಂದಿರುವ ನೀರು ಚಿಮ್ಮುವುದು ಇಲ್ಲಿನ ವಿಶೇಷತೆಯಾಗಿತ್ತು. ಈ ನೀರಿನಲ್ಲಿ ಸ್ನಾನ ಮಾಡಿದರೆ ಚರ್ಮರೋಗಗಳು ವಾಸಿಯಾಗುತ್ತವೆ ಎಂಬ ನಂಬಿಕೆಯಿಂದ ನಿತ್ಯ ನೂರಾರು ಮಂದಿ ಇಲ್ಲಿಗೆ ಆಗಮಿಸುತ್ತಿದ್ದರು.

ಈಗ ಹೀಗಾಗಿದೆ…


ವರ್ಷದ ಎಲ್ಲ ಕಾಲಗಳಲ್ಲೂ ಬಿಸಿ ನೀರಿನ ಚಿಲುಮೆಯನ್ನು ಹೊಂದಿದ್ದ ಇದು ಏಕಾಏಕಿ ನೀರು ಕಡಿಮೆಯಾಗತೊಡಗಿತು. ನೀರಿನ ಉಷ್ಣಾಂಶವೂ ಇಳಿಕೆಯಾಗಿತ್ತು. ಈ ಪರಿಸರದಲ್ಲಿ ಹಲವು ಕೊಳವೆ ಬಾವಿಗಳನ್ನು ಕೊರೆದ ಕಾರಣದಿಂದ ಈ ಸ್ಥಿತಿ ನಿರ್ಮಾಣವಾಗಿದೆ ಎಂಬ ಚರ್ಚೆಗಳು ನಡೆದವು. ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಯೂ ಕಡಿಮೆಯಾಯಿತು. ಆದರೆ ತೀರ್ಥ ಅಮಾವಾಸ್ಯೆ ಹಾಗೂ ಇತರ ವಿಶೇಷ ದಿನಗಳಲ್ಲಿ ಇಲ್ಲಿ ಬಂದು ತೀರ್ಥ ಸ್ನಾನ ಮಾಡುವವರು ಈಗಲೂ ಇದ್ದಾರೆ. ಬೇಸಗೆಯ ಕೊನೆಯಲ್ಲಂತೂ ನೀರು ಪೂರ್ಣ ಆವಿಯಾಗುತ್ತದೆ.

ಪಾಳು ಬಿದ್ದಿರುವ ಕೊಠಡಿ
ಬೆಂದ್ರ್ ತೀರ್ಥ ಕೆರೆ ಬಳಿ ಸ್ನಾನಕ್ಕೆ ಬರುವವರ ಅನುಕೂಲಕ್ಕಾಗಿ ನಿರ್ಮಿಸಲಾಗಿರುವ ಕೊಠಡಿಗಳು ನಿರ್ವಹಣೆಯಿಲ್ಲದೆ ಪಾಳುಬಿದ್ದಿವೆ. ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಬೆಂದ್ರ್ ತೀರ್ಥದ ಕೊಠಡಿಗಳ ಗೋಡೆಗಳು ಕಿಡಿಗೇಡಿಗಳ ಬರಹಗಳಿಗೆ ಜಾಗ ಒದಗಿಸುತ್ತಿವೆ.

6 ವರ್ಷಗಳಿಂದ ಉದ್ಘಾಟನೆಯಿಲ್ಲ


ಬೆಂದ್ರ್ ತೀರ್ಥದ ಬಳಿ ಪ್ರವಾಸೋದ್ಯಮ ಇಲಾಖೆ ವಸತಿ ಗೃಹ ನಿರ್ಮಿಸಿದೆ. ನಿರ್ಮಿತಿ ಕೇಂದ್ರ ಆರಂಭಿಸಿದ ಕಾಮಗಾರಿಯನ್ನು ಭೂ ಸೇನೆಯವರು ಮುಗಿಸಿ, ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಿದ್ದಾರೆ. 25 ಲಕ್ಷ ರೂ. ವೆಚ್ಚದಲ್ಲಿ ಹಾಲ್‌, ಶೌಚಾಲಯ, ಸ್ನಾನ ಗೃಹ, ಅಡುಗೆ ಕೋಣೆ, ಕಚೇರಿ ಸಹಿತ ಎಲ್ಲ ವ್ಯವಸ್ಥೆಗಳಿವೆ. ಆದರೆ ಕಟ್ಟಡ ನಿರ್ಮಾಣಗೊಂಡು 6 ವರ್ಷ ಕಳೆದರೂ ಉದ್ಘಾಟನೆಯ ಭಾಗ್ಯ ಕಂಡಿಲ್ಲ. ಪ್ರಸ್ತುತ ಇಲ್ಲಿ ಸಿಬಂದಿಯೂ ಇಲ್ಲ, ನಿರ್ವಹಣೆಯೂ ಆಗುತ್ತಿಲ್ಲ.

Advertisement

ಇಲಾಖೆಯ ಮೌನ
ಡಾ| ಪಾಲ್ತಾಡಿ ರಾಮಕೃಷ್ಣ ಆಚಾರ್‌ ಅಧ್ಯಕ್ಷತೆಯ ಬೆಂದ್ರ್ ತೀರ್ಥ ಅಭಿವೃದ್ಧಿ ಸಮಿತಿಯಿಂದ ಪ್ರಯತ್ನ ನಡೆಸಿದ ಬಳಿಕ ಅನುದಾನ ಲಭಿಸಿ ಈ ವಸತಿಗೃಹ ಕಟ್ಟಡವನ್ನು ನಿರ್ಮಿಸಲಾಗಿದೆ. ಆದರೆ ಉದ್ಘಾಟನೆ ನಡೆಸದೆ ಹಾಗೆಯೇ ಬಿಡಲಾಗಿದೆ. ಸ್ಥಳೀಯ ಗ್ರಾ.ಪಂ. ಆಡಳಿತಕ್ಕೆ ಹಸ್ತಾಂತರ ಮಾಡುವ ಕ್ರಮವನ್ನೂ ಸಂಬಂಧಪಟ್ಟ ಇಲಾಖೆ ಮಾಡದೆ ಮೌನ ವಹಿಸಿದೆ.

ಸಮನ್ವಯದಿಂದ ಪರಿಹಾರ
ಬೆಂದ್ರ್ ತೀರ್ಥ ಕೆರೆಯ ಪಕ್ಕದಲ್ಲೇ ಖಾಸಗಿಯವರು ಕೊಳವೆ ಬಾವಿ ಕೊರೆಸಿದ ಮೇಲೆ ಇಲ್ಲಿ ನೀರು ಕಡಿಮೆಯಾಗಿದೆ ಎನ್ನುವ ವಿಚಾರಗಳಿವೆ. ತಾ| ವ್ಯಾಪ್ತಿಯ ಪ್ರೇಕ್ಷಣೀಯ ಸ್ಥಳಗಳನ್ನು ಅಭಿವೃದ್ಧಿಪಡಿಸುವ ಇಂಗಿತ ಇದೆ. ಈ ಹಿನ್ನೆಲೆಯಲ್ಲಿ ಖಾಸಗಿಯವರನ್ನು ಸಂಪರ್ಕಿಸಿ ಸಮನ್ವಯದೊಂದಿಗೆ ಸಮಸ್ಯೆ ಬಗೆಹರಿಸಲಾಗುವುದು.
– ಸಂಜೀವ ಮಠಂದೂರು, ಶಾಸಕರು, ಪುತ್ತೂರು

ಮನವಿಗಳಿಗೆ ಬೆಲೆಯಿಲ್ಲ
ಬೆಂದ್ರ್ ತೀರ್ಥದಲ್ಲಿ ಉತ್ತಮ ವಾದ ವಸತಿಗೃಹ ಕಟ್ಟಡ ನಿರ್ಮಾಣವಾಗಿದ್ದರೂ ಉದ್ಘಾಟನೆಯಾಗದೆ ನಿಷ್ಪ್ರಯೋಜಕವಾಗಿದೆ. ಈ ಕುರಿತು ಗ್ರಾ.ಪಂ. ಆಡಳಿತದ ಮೂಲಕ ನಿರ್ಣಯ ಕೈಗೊಂಡು ಪುತ್ತೂರು ಶಾಸಕರಿಗೆ, ದ.ಕ. ಜಿಲ್ಲಾಧಿಕಾರಿಗೆ ಹಾಗೂ ಸಂಬಂಧಪಟ್ಟ ಪ್ರವಾ ಸೋದ್ಯಮ ಇಲಾಖೆಗೆ ಮನವಿ ಮಾಡಲಾಗಿದೆ. ಬೆಂದ್ರ್ತೀರ್ಥ ಅಭಿವೃದ್ಧಿ ಸಮಿತಿಯ ಮೂಲಕವೂ ಮನವಿ ಮಾಡಲಾಗಿದೆ. ಆದರೂ ಪ್ರಯೋಜನವಾಗಿಲ್ಲ. ಇದರ ಜವಾಬ್ದಾರಿಯನ್ನು ಗ್ರಾ.ಪಂ. ವಹಿಸಿದರೆ ಎಂದೋ ಉದ್ಘಾಟನೆಗೊಳ್ಳುತ್ತಿತ್ತು.
– ಪ್ರಕಾಶ್‌ ರೈ ಬೈಲಾಡಿ, ಬೆಂದ್ರ್ತೀರ್ಥ ಅಭಿವೃದ್ಧಿ ಸಮಿತಿ ಸದಸ್ಯರು, 

ಅಭಿವೃದ್ಧಿಗೆ ಕ್ರಮ
ಪುತ್ತೂರು ತಾಲೂಕಿನಲ್ಲಿರುವ ಬಿಸಿ ನೀರಿನ ಚಿಲುಮೆ ಮತ್ತು ಈ ಪ್ರೇಕ್ಷಣೀಯ ಸ್ಥಳ ಅವ್ಯವಸ್ಥಿತವಾಗಿರುವ ಕುರಿತು ಹೆಚ್ಚಿನ ಮಾಹಿತಿ ಇಲ್ಲ. ಸಂಬಂಧಪಟ್ಟವರಿಂದ ಮಾಹಿತಿ ಸಂಗ್ರಹಿಸಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು.
– ಶಶಿಕಾಂತ್‌ ಸೆಂಥಿಲ್‌, ದ.ಕ. ಜಿಲ್ಲಾಧಿಕಾರಿ

ಮುಂದಿನ ವಾರ ಭೇಟಿ
ಬೆಂದ್ರ್ ತೀರ್ಥದ ಅಭಿವೃದ್ಧಿಗೆ ಡಾ| ಪಾಲ್ತಾಡು ರಾಮಕೃಷ್ಣ ಆಚಾರ್‌ ಅವರ ಅವಧಿಯಲ್ಲಿ ಪ್ರಯತ್ನ ನಡೆಸಿರುವುದು ಉತ್ತಮ ಬೆಳವಣಿಗೆ. ಮುಂದಿನ ವಾರದಲ್ಲಿ ಪುತ್ತೂರಿಗೆ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಸಾಧ್ಯತೆಗಳ ಕುರಿತು ಪರಿಶೀಲನೆ ನಡೆಸುತ್ತೇನೆ.
– ಎ.ಸಿ. ಭಂಡಾರಿ, ಅಧ್ಯಕ್ಷರು, ತುಳು ಸಾಹಿತ್ಯ ಅಕಾಡೆಮಿ 

ಒರತೆ ಅಭಿವೃದ್ಧಿಪಡಿಸಿ
ನಾನು ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಅಕಾಡೆಮಿ ಭಾಷೆಗೆ ಮಾತ್ರ ಸೀಮಿತವಾಗದೆ ತುಳುನಾಡಿನ ಸಂಸ್ಕೃತಿ, ವಿಶೇಷತೆಗಳಿಗೂ ಆದ್ಯತೆ ನೀಡಬೇಕೆಂಬ ಉದ್ದೇಶವನ್ನಿಟ್ಟುಕೊಂಡು ಕೋಟಿ ಚೆನ್ನಯ ಕ್ಷೇತ್ರ, ಇರ್ದೆ ಬೆಂದ್ರ್ ತೀರ್ಥದ ಅಭಿವೃದ್ಧಿಗೆ ಜನಪ್ರತಿನಿಧಿಗಳು, ಇಲಾಖೆಗಳ ಸಮನ್ವಯ ಸಾಧಿಸಲು ಪ್ರಯತ್ನಿಸಿದ್ದೆ. ಈ ನಿಟ್ಟಿನಲ್ಲಿ ಬೆಂದ್ರ್ ತೀರ್ಥ ಅಭಿವೃದ್ಧಿ ಸಮಿತಿಯನ್ನೂ ರಚಿಸಿ ಸಭೆಯನ್ನೂ ನಡೆಸಲಾಗಿತ್ತು. ಅಭಿವೃದ್ಧಿಯ ರೂಪರೇಷೆಯ ಯೋಜನೆ ಸಿದ್ಧಪಡಿಸಿ ಜಿಲ್ಲಾಧಿಕಾರಿ, ಪ್ರವಾಸೋದ್ಯಮ ಇಲಾಖೆ, ಜಿ.ಪಂ. ಗೂ ಒತ್ತಡ ಹೇರಲಾಗಿತ್ತು. ಅನಂತರ ನನ್ನನ್ನು ಸಭೆಗೆ ಕರೆದಿಲ್ಲ. ಅನಾರೋಗ್ಯದ ಕಾರಣದಿಂದ ಗಮನಹರಿಸಲೂ ಸಾಧ್ಯವಾಗಿಲ್ಲ. ದೇವಸ್ಥಾನದ ಭಾಗದಿಂದ ಬೆಂದ್ರ್ ತೀರ್ಥದ ಭಾಗಕ್ಕೆ ಬರಲು ತೂಗುಸೇತುವೆ ಆಗಬೇಕು. ಬಿಸಿ ನೀರಿನ ಚಿಲುಮೆಯ ಒರತೆ ಪತ್ತೆ ಮಾಡಿ ಅಭಿವೃದ್ಧಿಪಡಿಸಬೇಕು. ಕೊಳವೆ ಬಾವಿಗಳಿಂದಲೂ ಇದಕ್ಕೆ ಪೆಟ್ಟು ಬಿದ್ದಿದೆ. ಪಕ್ಕದ ಸೀರೆ ಹೊಳೆಯಲ್ಲಿ ನೀರಿಗೆ ಕಟ್ಟ ಕಟ್ಟುವುದರಿಂದಲೂ ಬೆಂದ್ರ್ ತೀರ್ಥ ತಣ್ಣಗಾಗುತ್ತಿದೆ. ಈ ಕಾರಣದಿಂದ ಡ್ಯಾಂನ್ನು ಮೇಲಕ್ಕೆ ಕಟ್ಟಬೇಕು.
– ಡಾ| ಪಾಲ್ತಾಡಿ ರಾಮಕೃಷ್ಣ ಆಚಾರ್‌, ತುಳು ವಿದ್ವಾಂಸರು

— ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next