Advertisement

ವರ್ಷಾವಧಿಯಲ್ಲಿ ಒಂದೂ ರಜೆಯಿಲ್ಲ!

11:30 AM Sep 26, 2017 | Team Udayavani |

ಬೆಂಗಳೂರು: “ನನ್ನ ಒಂದು ವರ್ಷದ ಆಡಳಿತ ಅವಧಿಯಲ್ಲಿ ಸಾರ್ವಜನಿಕ ರಜೆ ದಿನ ಹೊರತುಪಡಿಸಿ ಒಂದು ದಿನವೂ ರಜೆ ಪಡೆಯದೆ ನಗರದ ಅಭಿವೃದ್ಧಿಗೆ ಕೆಲಸ ಮಾಡಿದ್ದೇನೆ,’ ಎಂದು ಮೇಯರ್‌ ಜಿ.ಪದ್ಮಾವತಿ ಹೇಳಿದರು. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಇಂದಿರಾ ಕ್ಯಾಂಟೀನ್‌, ಪೌರಕಾರ್ಮಿಕರಿಗೆ ಬಿಸಿಯೂಟ ಹಾಗೂ ವೇತನ ಹೆಚ್ಚಳ ಸೇರಿ ಹಲವು ಜನಪರ ಯೋಜನೆ ಜಾರಿಗೊಳಿಸಿದ್ದು, ಆಡಳಿತ ತೃಪ್ತಿ ತಂದಿದೆ,’ ಎಂದರು.

Advertisement

“ವೈದ್ಯಕೀಯ ಪರಿಹಾರ ನಿಧಿಯಿಂದ 1,500ಕ್ಕೂ ಹೆಚ್ಚು ಬಡ ರೋಗಿಗಳಿಗೆ ಹಣಕಾಸು ನೆರವು ನೀಡಲಾಗಿದೆ. ಕೆರೆಗಳ ಸಮಗ್ರ ಅಭಿವೃದ್ಧಿ, ನೆನೆಗುದಿಗೆ ಬಿದ್ದಿದ್ದ ಕಿತ್ತೂರು ರಾಣಿ ಚೆನ್ನಮ್ಮ ಮೇಲ್ಸೇತುವೆ, ಮಾಗಡಿ ರಸ್ತೆಯ ಹೌಸಿಂಗ್‌ ಬೋರ್ಡ್‌ ಬಳಿಯ ಅಂಡರ್‌ ಪಾಸ್‌, ರಾಜ್‌ಕುಮಾರ್‌ ರಸ್ತೆಯ ಅಂಡರ್‌ಪಾಸ್‌, ಹೊಸಕೆರೆ ಹಳ್ಳಿ ಹೊರವರ್ತುಲ ರಸ್ತೆಯ ಮೇಲ್ಸೇತುವೆಗಳ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗಿದೆ,’ ಎಂದು ಹೇಳಿದರು.

“ಮೇಯರ್‌ ಹುದ್ದೆಗೆ ಬಂದ ಮೇಲೆ ಹಲವು ಬಾರಿ ವಿದೇಶಗಳ ಸ್ಥಳೀಯ ಸಂಸ್ಥೆಗಳು ಭೇಟಿ ನೀಡುವಂತೆ ಆಹ್ವಾನ ಬಂದರೂ ಹೋಗದೆ, ನಗರದಲ್ಲಿನ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನಿಸಿದ್ದೇನೆ. ಪ್ರತಿಪಕ್ಷ ಹಾಗೂ ಅಧಿಕಾರಿಗಳಿಂದಲೂ ಉತ್ತಮ ಸಹಕಾರ ಸಿಕ್ಕಿದೆ. ಪಾಲಿಕೆಯ 32 ಸಾವಿರ ಪೌರಕಾರ್ಮಿಕರಿಗೆ ಮೊದಲ ಬಾರಿಗೆ ಬಿಸಿಯೂಟ ಯೋಜನೆ ಜಾರಿಗೊಳಿಸಿ, ವೇತನ ಪರಿಷ್ಕರಣೆ ಮಾಡಿದ್ದು, ಎಲ್ಲ ವಾರ್ಡ್‌ಗಳಲ್ಲಿ ಕಾಂಪೋಸ್ಟ್‌ ಸಂತೆ ಮೂಲಕ ತ್ಯಾಜ್ಯ ವಿಂಗಡಣೆ ಕುರಿತು ಜಾಗೃತಿ ಮೂಡಿಸಲಾಗಿದೆ,’ ಎಂದರು.

“ಸಂಚಾರ ದಟ್ಟಣೆ ನಿಯಂತ್ರಿಸುವ ಭರವಸೆಯಂತೆ, ಮೇಲ್ಸೇತುವೆ, ಕೆಳಸೇತುವೆ, ಪಾದಚಾರಿಗಳ ಸುರಕ್ಷತೆಗಾಗಿ ಸ್ಕೈವಾಕ್‌ಗಳ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ. ಅನಧಿಕೃತ ಪಾರ್ಕಿಂಗ್‌ ಶುಲ್ಕ ವಸೂಲಿ ನಿಯಂತ್ರಿಸಲು ಹಲವೆಡೆ ಸ್ಮಾರ್ಟ್‌ ಪಾರ್ಕಿಂಗ್‌ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಕೆ.ಆರ್‌.ಮಾರುಕಟ್ಟೆಯ ಮೂರು ಕಡೆ ಅನಧಿಕೃತವಾಗಿ ಪಾರ್ಕಿಂಗ್‌ ಶುಲ್ಕ ಸಂಗ್ರಹಿಸುತ್ತಿದ್ದುದನ್ನು ತಡೆದಿದ್ದು, ಪಾಲಿಕೆಗೆ ಆದಾಯ ಹೆಚ್ಚಲಿದೆ,’ ಎಂದು ಪದ್ಮಾವತಿ ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಆಡಳಿತ ಪಕ್ಷ ನಾಯಕ ಮಹಮದ್‌ ರಿಜ್ವಾನ್‌ ನವಾಬ್‌, ಜೆಡಿಎಸ್‌ನ ರಮೀಳಾ ಉಮಾಶಂಕರ್‌, ಆಡಳಿತ ಪಕ್ಷ ಮಾಜಿ ನಾಯಕ ಆರ್‌.ಎಸ್‌.ಸತ್ಯನಾರಾಯಣ ಸೇರಿ ಪ್ರಮುಖರು ಹಾಜರಿದ್ದರು. 

Advertisement

ಅಭಿನಂದಿಸುವ ಸೌಜನ್ಯ ತೋರಿಲ್ಲ: “ಪಾಲಿಕೆಯ ಪ್ರತಿಯೊಬ್ಬ ಮೇಯರ್‌ ನಿರ್ಗಮಿಸುವಾಗ, ಅವರ ಕೊನೆಯ ಕೌನ್ಸಿಲ್‌ ಸಭೆಯಲ್ಲಿ ಅವರು ಮಾಡಿದ ಕೆಲಸಗಳನ್ನು ಪ್ರಸ್ತಾಪಿಸಿ  ಅಭಿನಂದಿಸುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದರೆ, ಮೇಯರ್‌ ಜೆ.ಪದ್ಮಾವತಿ ಅವರಿಗೆ ಅಭಿನಂದನೆ ಸಲ್ಲಿಸುವ ಕುರಿತು ಬಿಜೆಪಿ ನಾಯಕರೊಂದಿಗೆ ಸಭೆ ನಡೆಸಿದಾಗ, ಸೌಜನ್ಯಕ್ಕಾದರೂ ಒಪ್ಪಿಕೊಳ್ಳಲಿಲ್ಲ,’ ಎಂದು ಆಡಳಿತ ಪಕ್ಷದ ಮಾಜಿ ನಾಯಕ ಆರ್‌.ಎಸ್‌.ಸತ್ಯನಾರಾಯಣ ಬೇಸರ ವ್ಯಕ್ತಪಡಿಸಿದರು.

ಇವರನ್ನೇ ಮುಂದುವರಿಸಿ ಎಂದಿದ್ದ ಸಿಎಂ ಪತ್ನಿ!: “ಪಾಲಿಕೆ ಮೇಯರ್‌ ಆಗಿ ಪದ್ಮಾವತಿಯವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಎರಡನೇ ಅವಧಿಗೂ ಅವರನ್ನೇ ಮೇಯರ್‌ ಹುದ್ದೆಯಲ್ಲಿ ಮುಂದುವರಿಸಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ, ಅವರ ಪತ್ನಿ ಶಿಫಾರಸ್ಸು ಮಾಡಿದ್ದರಂತೆ. ಅದಕ್ಕೆ ಮುಖ್ಯಮಂತ್ರಿಗಳು “ಮುಂದುವರಿಸಲು ಕೆಎಂಸಿ ಕಾಯ್ದೆಯಲ್ಲಿ ಅವಕಾಶವಿಲ್ಲ’ ಎಂದಿದ್ದರಂತೆ. ಈ ಮಾತನ್ನು ಸ್ವತಃ ಮುಖ್ಯಮಂತ್ರಿಗಳೇ ಕಾರ್ಯಕ್ರಮವೊಂದರಲ್ಲಿ ಪದ್ಮಾವತಿ ಅವರಿಗೆ ಹೇಳಿದ್ದರು ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಈ ವೇಳೆ ಸ್ಮರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next