Advertisement

ಐದು ವರ್ಷದಿಂದ ನಗರದಲ್ಲಿ ಪಿಒಪಿ ಗಣಪನ ಮೂರ್ತಿ ಬಳಕೆಯಿಲ್ಲ

10:04 PM Aug 28, 2019 | Team Udayavani |

ಮಹಾನಗರ: ಗಣೇಶ ಚತುರ್ಥಿ ಸಂದರ್ಭದಲ್ಲಿ ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌(ಪಿಒಪಿ) ಗಣಪನ ಮೂರ್ತಿ ಆರಾಧನೆ ಮಾಡಬಾರದೆಂಬ ನಿಯಮವನ್ನು ದೇಶಾದ್ಯಂತ ಕಟ್ಟುನಿಟ್ಟು ಮಾಡಲಾಗಿದೆ. ನಗರದಲ್ಲಿ ಈ ನಿಯಮ ಚಾಚೂ ತಪ್ಪದೆ ಪಾಲನೆಯಾಗುತ್ತಿದ್ದು, ಐದು ವರ್ಷದಿಂದ ಪರಿಸರಸ್ನೇಹಿ ಗಣಪನ ಆರಾಧನೆ ನಡೆಯುತ್ತಿದೆ. ನಗರದ ಎಲ್ಲಿಯೂ ಪಿಒಪಿ ಗಣಪನ ಮೂರ್ತಿ ಬಳಕೆಯಾಗುತ್ತಿಲ್ಲ.

Advertisement

ಪ್ರತಿ ವರ್ಷ ಗಣೇಶ ಚತುರ್ಥಿ ಸಮಯ ದಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ನಗರದ ಎಲ್ಲ ಮೂರ್ತಿ ತಯಾರಕರ ಮನೆ, ಸಂಸ್ಥೆಗಳಿಗೆ ಮತ್ತು ವಿಗ್ರಹ ಕೂರಿಸುವ ಮನೆಗಳಿಗೂ ಭೇಟಿ ನೀಡಿ ಪರಿಶೀಲಿಸುತ್ತಾರೆ. ಒಟ್ಟಾರೆ ಪರಿಶೀಲನೆ ವೇಳೆ ಕಳೆದೈದು ವರ್ಷಗಳಿಂದ ಯಾವುದೇ ಪಿಒಪಿ ಗಣಪನ ಮೂರ್ತಿ ಕಂಡುಬಂದಿಲ್ಲ. ಆವೆ ಮಣ್ಣಿನಿಂದಲೇ ಮೂರ್ತಿ ತಯಾರಿಕೆ ನಡೆಯುತ್ತಿದೆ ಎಂದು ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

ಮೂರ್ತಿ ಪ್ರತಿಷ್ಠಾಪಿಸಿದ ಬಳಿಕ ಜಿಲ್ಲೆಯಲ್ಲಿ ತಿಂಗಳ ತನಕ ಯಾರೂ ಇರಿಸಿ ಕೊಳ್ಳುವುದಿಲ್ಲ. ವಾರ ಅಥವಾ ಹತ್ತು ದಿನಗಳೊಳಗೆ ವಿಸರ್ಜಿಸುವುದರಿಂದ ಮೂರ್ತಿ ಪ್ರತಿಷ್ಠಾಪನೆ ಸಂಬಂಧ ಮಾಲಿನ್ಯ ನಿಯಂತ್ರಣ ಮಂಡಳಿ ವಿಧಿಸಿರುವ ತಿಂಗಳ ಗಡುವಿನ ಆದೇಶವೂ ನಗರದಲ್ಲಿ ಪಾಲನೆಯಾಗುತ್ತಿದೆ. ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಜಿಲ್ಲೆಯ ಎಲ್ಲ ಸ್ಥಳೀಯಾಡಳಿತಗಳಿಗೂ ಪತ್ರ ಬರೆದು ಆಯಾ ತಾಲೂಕು, ಪ್ರದೇಶಗಳಲ್ಲಿ ಮೂರ್ತಿ ತಯಾರಕರ ಬಳಿಗೆ ತೆರಳಿ ಪರಿಶೀಲಿಸಲು ಸೂಚಿಸಲಾಗಿದೆ. ಪರಿಸರಸ್ನೇಹಿ ಗಣಪನ ಆರಾಧನೆಗೆ ಮತ್ತು ಪಿಒಪಿ ಮೂರ್ತಿ ಬಳಕೆ ಮಾಡದಂತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಅವರು ಆ. 29ರಂದು ಅಧಿಕಾರಿಗಳ ಸಭೆ

ಕರೆದಿದ್ದಾರೆ. ಶಾಲಾ- ಕಾಲೇಜುಗಳಲ್ಲಿಯೂ ಜಾಗೃತಿ ಕಾರ್ಯಗಳು ನಡೆಯುತ್ತಿವೆ.
ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಚಿಕ್ಕ ಮಕ್ಕಳನ್ನು ಕೆರೆಯ ಬಳಿ ಕಳುಹಿಸಬೇಡಿ. ಈಗೆಲ್ಲ ಸೆಲ್ಫಿ ಗೀಳು ಅಧಿಕವಾಗಿದ್ದು, ಕೆರೆಯ ಬಳಿಯಲ್ಲಿ ಮೈಮರೆತು ಸೆಲ್ಫಿ, ಫೋಟೋ ತೆಗೆದುಕೊಳ್ಳದಿರುವುದೇ ಉತ್ತಮ. ಏಕೆಂದರೆ ಕೆಲವೊಮ್ಮೆ ದುರಂತಗಳನ್ನು ಕೈಯಾರೆ ಆಹ್ವಾನ ಮಾಡಿಕೊಂಡಂತಾಗುತ್ತದೆ ಎಂಬ ಕಾರಣಕ್ಕೆ ಈ ಮುನ್ನೆಚ್ಚರಿಕೆಗಳಿರಲಿ.

ಬಣ್ಣದಲ್ಲೂ ಪರಿಸರ ಪೂರಕ
ರಾಸಾಯನಿಕಯುಕ್ತ ಬಣ್ಣಗಳನ್ನು ಬಳಸದೆ, ಕೇವಲ ಮಣ್ಣಿನ ಮೂರ್ತಿಯನ್ನೇ ಆರಾಧಿಸಬೇಕೆಂಬ ಸೂಚನೆಯನ್ನು ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದೆಯಾದರೂ, ಕೆಲವರು ಸಂಪ್ರದಾಯಬದ್ಧವಾಗಿ ಬಣ್ಣ ಬಳಸಬೇಕಾಗುತ್ತದೆ ಎಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ವಾಟರ್‌ ಕಲರ್‌ ಅಥವಾ ತರಕಾರಿ ಪೈಂಟಿಂಗ್‌ನ್ನು ಬಳಸಲು ಅನುಮತಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ನಿಸರ್ಗ ಸ್ನೇಹಿಯಾಗಿರಲಿ
ಗಣಪತಿ ಹಬ್ಬವನ್ನು ನಿಸರ್ಗ ಸ್ನೇಹಿಯಾಗಿಯೇ ಆಚರಿಸಬೇಕು. ನಗರದಲ್ಲಿ ಪಿಒಪಿ ನಿರ್ಮಿತ ಮೂರ್ತಿಗಳ ಬಳಕೆ ಇಲ್ಲವಾದರೂ, ಮೂರ್ತಿ ವಿಸರ್ಜನೆ ಸಂದರ್ಭ ದಲ್ಲಿಯೂ ಪರಿಸರಪೂರಕ ವಿಸರ್ಜ ನೆಯೇ ಇರಲಿ. ಮೂರ್ತಿಗೆ ಬಣ್ಣಗಳನ್ನು ಆದಷ್ಟು ಕಡಿಮೆ ಮಾಡಿದರೆ, ಜಲಮಾಲಿನ್ಯವಾಗದಂತೆ ತಡೆಯಬಹುದು. ಅಲ್ಲದೆ ಅಲಂಕಾರಕ್ಕೂ ಆದಷ್ಟು ಪರಿಸರಸ್ನೇಹಿ ವಸ್ತುಗಳಿಗೇ ಆದ್ಯತೆ ನೀಡಿ. ಪಟಾಕಿ ಸಿಡಿಸುವುದನ್ನು ಕಡಿಮೆ ಮಾಡಿ ದರೆ ಉತ್ತಮ. ಹೂವಿನ ಹಾರ, ತಟ್ಟೆ, ಲೋಟ, ಎಲೆಗಳನ್ನು ಎಲ್ಲೆಂ ದರಲ್ಲಿ ಬಿಸಾಡದೆ ಕಸ ವಿಲೆವಾರಿ ವಾಹನಕ್ಕೇ ನೀಡಿದರೆ ಸ್ವತ್ಛತೆಯನ್ನು ಕಾಪಾಡಬಹುದು.

 ಜಾಗೃತಿ ಕಾರ್ಯ ಮುಂದುವರಿದಿದೆ
ನಗರದಲ್ಲಿ ಕಳೆದೈದು ವರ್ಷಗಳಿಂದ ಪಿಒಪಿ ಮೂರ್ತಿಗಳನ್ನು ಯಾರೂ ಬಳಕೆ ಮಾಡುತ್ತಿಲ್ಲ. ಪರಿಸರಸ್ನೇಹಿ ಗಣಪನ ಆರಾಧನೆಗೆ ಜಾಗೃತಿ ಕಾರ್ಯ ಮುಂದುವರಿದಿದೆ. ಎಲ್ಲ ಸ್ಥಳೀಯಾಡಳಿತಗಳಿಗೂ ಪತ್ರ ಬರೆದು ಪರಿಶೀಲಿಸುವಂತೆ ಹೇಳಲಾಗಿದ್ದು, ಜಿಲ್ಲಾದ್ಯಂತ ಪರಿಶೀಲನೆ ಕಾರ್ಯ ನಡೆದಿದೆ. ಶಾಲಾ-ಕಾಲೇಜುಗಳಲ್ಲಿಯೂ ಪರಿಸರಸ್ನೇಹಿ ಆರಾಧನೆ ಬಗ್ಗೆ ಜಾಗೃತಿ ಉಪನ್ಯಾಸಗಳನ್ನು ಏರ್ಪಡಿಸಲಾಗಿದೆ.
 - ಜಯಪ್ರಕಾಶ್‌ ನಾಯಕ್‌,ದ.ಕ. ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ

 ಉತ್ತಮ ಬೇಡಿಕೆ
ಪರಿಸರಸ್ನೇಹಿ ಗಣಪನ ಮೂರ್ತಿಗೆ ಜನರಿಂದ ಉತ್ತಮ ಬೇಡಿಕೆ ಇದೆ. ಕಳೆದ ವರ್ಷ ಸಾಕಷ್ಟು ಸಂಖ್ಯೆಯಲ್ಲಿ ಇಂತಹ ಮೂರ್ತಿಗಳನ್ನು ನಾವು ಜನರಿಗೆ ನೀಡಿದ್ದೆವು. ಈ ಬಾರಿ 25 ಮೂರ್ತಿಗಳನ್ನು ವಿತರಿಸಲಾಗಿದೆ.
– ರಾಜೇಶ್‌, ಇಕೋ ಫ್ರೆಂಡ್ಸ್‌ ಗ್ರೂಪ್‌

Advertisement

Udayavani is now on Telegram. Click here to join our channel and stay updated with the latest news.

Next