Advertisement

ಚುನಾವಣೆ ಮುಗಿಯೋವರಿಗೆ ಅನಗತ್ಯ ರಜೆ ಇಲ್ಲ

01:20 PM Feb 23, 2018 | Team Udayavani |

ಮೈಸೂರು: ರಾಜ್ಯ ವಿಧಾನಸಭೆಗೆ ಯಾವುದೇ ಕ್ಷಣದಲ್ಲಿ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಗೆ ಬರುವುದರಿಂದ ವೈದ್ಯಕೀಯ ಸಮಸ್ಯೆ ಹೊರತುಪಡಿಸಿ ಬೇರಾವುದೇ ಕಾರಣಕ್ಕೂ ಸಿಬ್ಬಂದಿಗೆ ರಜೆ ಕೊಡದೆ ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಬೇಕು ಎಂದು ಜಿಲ್ಲಾಧಿಕಾರಿ ರಂದೀಪ್‌ ಡಿ., ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ತಿಳಿಸಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಚುನಾವಣೆ ಪೂರ್ವ ಸಭೆ ನಡೆಸಿ ಮಾತನಾಡಿದರು. ನೀತಿ ಸಂಹಿತೆ ಜಾರಿಯಾದ 24ಗಂಟೆಯೊಳಗೆ ಸರ್ಕಾರಿ ಜಾಹೀರಾತು ಫ‌ಲಕಗಳು ಸೇರಿ ಎಲ್ಲಾ ರೀತಿಯ ಜಾಹೀರಾತು ಫ‌ಲಕಗಳನ್ನೂ ತೆರವುಗೊಳಿಸಲು ಸಜಾjಗುವಂತೆ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದರು. ತೆರವುಗೊಳಿಸಲು ಸಾಧ್ಯವಾಗದಿದ್ದಲ್ಲಿ ಅಂಥವನ್ನು ಚುನಾವಣೆ ಪ್ರಕ್ರಿಯೆ ಮುಗಿಯುವರೆಗೆ ಮುಚ್ಚಬೇಕು.

ಅನಧಿಕೃತ ಜಾಹೀರಾತು ತೆರವು: ರಾಜಕೀಯ ಪಕ್ಷಗಳು ಸಾರ್ವಜನಿಕ ಸ್ಥಳಗಳಲ್ಲಿ, ಸ್ವಂತ ಕಟ್ಟಡದಲ್ಲಿ ಪ್ರಚಾರ ಮಾಡುವಂತಹ ಪೋಸ್ಟರ್‌,ಬಂಟಿಂಗ್ಸ್‌, ಫ್ಲೆಕ್ಸ್‌ಗಳನ್ನು ಹಾಕಿದ್ದರೆ ತೆಗೆಸಬೇಕು. ಸರ್ಕಾರಿ ಇಲಾಖೆಗಳು ತಮ್ಮ ಇಲಾಖಾ ಯೋಜನೆಗಳನ್ನು ಬಿಂಬಿಸುವಂತಹ ಹೋರ್ಡಿಂಗ್ಸ್‌ ಹಾಕಿಸಿದ್ದರೆ ತೆರವುಗೊಳಿಸಬೇಕು. ಖಾಸಗಿಯಾಗಿ ಅನಧಿಕೃತ ಜಾಹೀರಾತುಗಳನ್ನು ಹಾಕಿದ್ದರೂ ತೆರವುಗೊಳಿಸಬೇಕು.

ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಲಾಗುವ ಸಿಬ್ಬಂದಿ ಈ ಬಗ್ಗೆ ನಿಗಾಯಿಡಬೇಕು ಎಂದು ಹೇಳಿದರು. 108 ಆಂಬ್ಯುಲೆನ್ಸ್‌ ವಾಹನದ ಮೇಲಿನ ಭಾವಚಿತ್ರ, ಇಂದ್ರಧನುಷ್‌, ಮುಖ್ಯಮಂತ್ರಿ ಹರೀಶ್‌ ಸಾಂತ್ವನ ಯೋಜನೆ ಸೇರಿ ಎಲ್ಲ ಜಾಹೀರಾತನ್ನೂ ತೆರವುಗೊಳಿಸಬೇಕು. ಅಂಗನವಾಡಿ ಕಟ್ಟಡಗಳಲ್ಲಿ ಏನಾದರೂ ಗೋಡೆಬರಹ ಇದ್ದರೆ ಅದನ್ನು ಬಿಳಿಬಟ್ಟೆಯಿಂದ ಮುಚ್ಚಿಸಬೇಕು ಎಂದರು.

ಕಾಮಗಾರಿಗೆ ಅನುಮತಿ ಪಡೆಯಲಿ: ಮೈಸೂರು ಮಹಾ ನಗರಪಾಲಿಕೆ, ಮುಡಾ, ಲೋಕೋಪಯೋಗಿ ಇಲಾಖೆ ಸೇರಿದಂತೆ ಪ್ರತಿಯೊಂದು ಇಲಾಖೆಗಳು ಮುಂದುವರಿದ ಕಾಮಗಾರಿಗಳ ಪಟ್ಟಿಯನ್ನು ಸಲ್ಲಿಸಬೇಕು. ಯಾವ ಕಾಮಗಾರಿಗೆ ಕಾರ್ಯಾದೇಶ ನೀಡಲಾಗಿದೆ, ಕಾಮಗಾರಿಗಳು ಯಾವ ಹಂತದಲ್ಲಿದೆ ಎಂಬುದರ ಮಾಹಿತಿ ನೀಡಬೇಕು. ಆಗ ಮಾತ್ರ ನೀತಿ ಸಂಹಿತೆ ಜಾರಿಯಾದರೂ  ಆಯೋಗದ ಅನುಮತಿ ಪಡೆದು ಕಾಮಗಾರಿ ಮುಂದುವರಿಸಲು ನೆರವಾಗಲಿದೆ ಎಂದು ಹೇಳಿದರು.

Advertisement

ಈ ಬಾರಿ ಮತದಾನಕ್ಕೆ ವಿವಿ ಪ್ಯಾಟ್‌ ಬಳಸುವುದರಿಂದ ಸಿಬ್ಬಂದಿ ಸಂಖ್ಯೆ ಹೆಚ್ಚು ಬೇಕಿದೆ. ಆದರೆ, ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಲು 7 ಸಾವಿರ ಸಿಬ್ಬಂದಿ ಕೊರತೆ ಕಂಡು ಬರುತ್ತಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ, ಈ ಕೂಡಲೇ ತಮ್ಮ ತಮ್ಮ ಇಲಾಖೆಗಳ ಎಲ್ಲಾ ಸಿಬ್ಬಂದಿಯ ವಿವರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸುವಂತೆ ಸೂಚಿಸಿದರು.

ಅಂಚೆ ಮತದಾನ ಕಡಿಮೆ: ಜಿಲ್ಲೆಯಲ್ಲಿ 4 ಸಾವಿರ ಅಂಚೆ ಮತದಾರರಿದ್ದರೂ ಅಂಚೆ ಮತದಾನದ ಪ್ರಮಾಣ ಕಡಿಮೆಯಾಗುತ್ತಿದೆ. ಹೀಗಾಗಿ, ಈ ಬಾರಿ ಅಂಚೆ ಮತದಾನಕ್ಕೆ ಸಂಬಂಧಿಸಿದಂತೆ ಕ್ಷೇತ್ರ, ಕಾರ್ಯನಿರ್ವಹಿಸುವ ಸ್ಥಳದ ಕ್ಷೇತ್ರದ ಬಗ್ಗೆ ವಿವರವನ್ನು ಪಡೆದುಕೊಂಡು ಮತಪತ್ರ ನೀಡಲಾಗುವುದು ಎಂದರು.

ಸರ್ಕಾರಿ ಶಾಲೆ, ಅಂಗನವಾಡಿ ಕಟ್ಟಡಗಳಲ್ಲಿ  ತೆರೆಯುವ ಮತಗಟ್ಟೆಗಳಲ್ಲಿ ಕುಡಿಯುವ ನೀರು, ವಿದ್ಯುತ್‌, ಶೌಚಾಲಯ, ರ್‍ಯಾಂಪ್‌ ವ್ಯವಸ್ಥೆ ಮಾಡಿರಬೇಕು. ಈಗಾಗಲೇ 430ಮತಗಟ್ಟೆಗಳಿಗೆ ಈ ಸೌಲಭ್ಯವಿಲ್ಲವೆಂದು ಪಟ್ಟಿ ಬಂದಿರುವ ಕಾರಣ, ಇಲ್ಲಿಗೆ ಮೂಲ ಸೌಕರ್ಯ ಒದಗಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಯೋಗೇಶ್‌ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next