Advertisement
ನನ್ನ ಪರಿಚಯದವರೊಬ್ಬರಿದ್ದರು. ತುಂಬಾ ದರ್ಪದ ಮನುಷ್ಯ. ತಾನು ಹೇಳಿದ್ದೇ ವೇದವಾಕ್ಯ ಅನ್ನುವ ಮನೋಭಾವದವರು. ಅವರಿಗೆ ಒಬ್ಬ ಮಗ, ಒಬ್ಬ ಮಗಳು ಇದ್ದರು. ಹೆಂಡತಿ-ಮಕ್ಕಳು ಗಂಡನ ಮಾತಿಗೆ ಎದುರಾಡುತ್ತಿರಲಿಲ್ಲ, ಅವರು ಮನೆಗೆ ಬರುತ್ತಿ¨ªಾರೆ ಎಂದು ಸುಳಿವು ಸಿಕ್ಕಾಗ ಮನೆಮಂದಿಯೆಲ್ಲ ಗಪ್‌ಚುಪ್. ಅವರ ಊಟ-ತಿಂಡಿ ಎಲ್ಲವೂ ಶಿಸ್ತಿನ ಪ್ರಕಾರ ನಡೆಯಬೇಕಿತ್ತು. ಅವೆಲ್ಲವೂ ಹೆಂಡತಿಯ ಕೆಲಸವಾಗಿತ್ತು. ಕಾಲಕ್ರಮೇಣ, ಮಕ್ಕಳಿಗೆಲ್ಲ ಮದುವೆಯಾಯಿತು. ಒಂದು ದಿನ ಮನೆಯ ಯಜಮಾನಿ ಆಕಸ್ಮಿಕವಾಗಿ ಸತ್ತು ಹೋದರು. ಹೆಂಡತಿ ಇರುವಾಗ ಎಲ್ಲರ ಮೇಲೆ ದರ್ಪ ತೋರಿಸುತ್ತಿದ್ದ ಅವರು, ಹೆಂಡತಿ ಸತ್ತ ವರುಷದೊಳಗೆ ಬಾಲ ಮುದುರಿದ ಬೆಕ್ಕಿನಂತಾದರು. ತಾನು ಕಟ್ಟಿದ ಮನೆ ಬಿಟ್ಟು, ಮಕ್ಕಳ ಮನೆಯಲ್ಲಿ ಒಂದಷ್ಟು ಕಾಲ ಇರತೊಡಗಿದರು.
Related Articles
Advertisement
ಸಾಮಾನ್ಯವಾಗಿ ಹೆಣ್ಣುಮಕ್ಕಳು ವಿಚ್ಛೇದನ ಪಡೆದ ನಂತರವೋ ಅಥವಾ ಗಂಡನ ಅಕಾಲಿಕ ಮರಣದಿಂದಲೋ ಒಂಟಿಯಾಗಿತ್ತಾರೆ. ಅವರಲ್ಲಿ ಮಕ್ಕಳಿದ್ದವರು, ನಮಗೆ ಮತ್ತೂಮ್ಮೆ ಈ ಮದುವೆ, ಗಂಡನ ಉಸಾಬರಿ ಬೇಡವೆಂದು ಮಕ್ಕಳಿಗಾಗಿಯೇ ತಮ್ಮ ಜೀವನ ಮುಡಿಪಾಗಿಡುತ್ತಾರೆ. ಪುನಃ ಮದುವೆಗೆ ಕೊರಳೊಡ್ಡಿದರೆ ಸರಿಯಾದ ಸಂಗಾತಿ ಸಿಗುತ್ತಾನಾ ಎಂಬ ಆತಂಕವೂ ಕಾಡುತ್ತಿರುತ್ತದೆ. ಗೆಳತಿಯರು ಅವರವರ ಗಂಡ-ಮಕ್ಕಳ ಜತೆ ನಗುತ್ತ ಸುಖವಾಗಿರುವಾಗ ನಾನ್ಯಾರ ಬಳಿ ನೋವು ಹೇಳಿಕೊಳ್ಳುವುದು? ದುಃಖವಾದಾಗ ಯಾರ ಹೆಗಲೊರಗುವುದು ಎಂಬ ಚಿಂತೆ ಕಾಡುತ್ತದೆ. ಮನೆಯವರ ಬಳಿಯೂ ಈ ವಿಷಯದ ಕುರಿತು ಮಾತನಾಡುವುದಕ್ಕೆ ಆಗದೆ ಒಳಗೊಳಗೇ ಪರಿತಪಿಸುತ್ತಿರುತ್ತಾರೆ.
ಹಾಗಂತ, ಗಂಡಿಗೆ ಈ ಚಿಂತೆ ಇಲ್ಲವೆಂದು ತಿಳಿದುಕೊಳ್ಳಬೇಡಿ. ಹೆಣ್ಣು ತನ್ನ ಭಾವನೆಗಳನ್ನು ಕಣ್ಣೀರಿನ ಮೂಲಕವಾದರೂ ವ್ಯಕ್ತಪಡಿಸಬಹುದು ಆದರೆ ಗಂಡು ಈ ವಿಷಯದಲ್ಲೂ ಅಸಹಾಯಕ. ಹೆಂಡತಿಯಿಲ್ಲದ ಗಂಡು ಕೂಡ ಅಂತರಂಗದಲ್ಲಿ ನೋವಿನ ಮೂಟೆಯನ್ನೇ ಹೊತ್ತುಕೊಂಡಿರುತ್ತಾನೆ. ಹೆಂಡತಿ ಬಿಟ್ಟು ಹೋಗಿದ್ದರೆ ಇವನ ಜತೆ ಬಾಳುವುದಕ್ಕೆ ಆಗದೇ ಬಿಟ್ಟು ಹೋಗಿ¨ªಾಳೆ ಎಂದು ಕೆಲವರು ಮೂದಲಿಸಿದರೆ, ಇನ್ನು ಕೆಲವರು ಇವನಿಗೆ ಇನ್ಯಾವುದೋ ಸಂಬಂಧವಿರಬೇಕು ಎಂದೆಲ್ಲಾ ಮಾತಾಡುತ್ತಾರೆ. ಆದರೆ, ಮನೆಗೆ ಬಂದಾಗ ಒಂದು ಲೋಟ ನೀರು ಕೊಡುವುದಕ್ಕೂ ತನ್ನವರಾರೂ ಇಲ್ಲದೇ ಇ¨ªಾಗ ಆ ಗಂಡಸು ಅನುಭವಿಸುವ ನೋವು ಯಾರಿಗೂ ಕಾಣಿಸುವುದೇ ಇಲ್ಲ. ನೋಡುವವರಿಗೆಲ್ಲ ಅವನು ಸುಖಪುರುಷನಂತೆ ಕಾಣಬಹುದು.
ವಯಸ್ಸಿರುವಾಗ ತನಗೆ ಗಂಡನ ಅಗತ್ಯವಿಲ್ಲವೆಂದು ಹೆಣ್ಣು, ತನಗೆ ಹೆಣ್ಣಿನ ಅವಶ್ಯಕತೆ ಇಲ್ಲವೆಂದು ಗಂಡು ಹೇಳಬಹುದು. ಆದರೆ, ಬದುಕು ಸೋತಾಗ, ಆರೋಗ್ಯ ಕೆಟ್ಟಾಗ, ನೋವು, ನಲಿವು ಕೇಳಿಸಿಕೊಳ್ಳುವ ಒಂದು ಜೀವ ಬೇಕು. ತನ್ನದೇ ಒಂದು ಕುಟುಂಬ ಬೇಕು ಎಂದು ಅನಿಸುತ್ತದೆ. ಸಂಗಾತಿಯ ಸಾಂಗತ್ಯವಿಲ್ಲದ ಬದುಕು ಒಮ್ಮೊಮ್ಮೆ ಜಿಗುಪ್ಸೆ ಮೂಡಿಸುತ್ತದೆ. ಹೆಂಡತಿಯ ಸಾಂಗತ್ಯ ಇಲ್ಲದ ಗಂಡನ ಬದುಕು ಹೇಗೆ ಅಪೂರ್ಣವೋ, ಗಂಡನಿಲ್ಲದ ಹೆಂಡತಿಯ ಬದುಕು ಕೂಡ ಅಷ್ಟೇ ಅಪೂರ್ಣ. ದೈಹಿಕ ವಾಂಛೆಗಾಗಿ ಮಾತ್ರ ಹೆಣ್ಣಿಗೊಂದು ಗಂಡು, ಗಂಡಿಗೊಂದು ಹೆಣ್ಣು ಆವಶ್ಯವಿರುವುದು ಅಲ್ಲ. ಇವೆಲ್ಲದಕ್ಕೂ ಮಿಗಿಲಾಗಿ ಬಾಳಸಂಗಾತಿಯ ಅಗತ್ಯವಿರುತ್ತದೆ.
ಈ ಸರಳ ಸತ್ಯವನ್ನು ಗಂಡು-ಹೆಣ್ಣು ಅರ್ಥ ಮಾಡಿಕೊಳ್ಳಬೇಕು. ತಂದೆ-ತಾಯಿ, ಅಕ್ಕ-ತಮ್ಮ ಯಾರೂ ನಮ್ಮ ಮುಪ್ಪಿನ ಕಾಲದಲ್ಲಿ ಬರುವುದಿಲ್ಲ. ಕಟ್ಟಿಕೊಂಡವನೋ, ಕೈಹಿಡಿದವಳ್ಳೋ ಮಾತ್ರ ನಮ್ಮದೆಯ ನೋವಿಗೆ ದನಿಯಾಗುತ್ತಾರೆ ಎಂಬ ಸತ್ಯವನ್ನು ಅರ್ಥಮಾಡಿಕೊಳ್ಳಬೇಕು.
ಪವಿತ್ರಾ ರಾಘವೇಂದ್ರ ಶೆಟ್ಟಿ