Advertisement

ಜನಸಂಖ್ಯೆಗೆ ಅನುಗುಣವಾಗಿ ನಗರದಲ್ಲಿ ಶೌಚಾಲಯಗಳಿಲ್ಲ

12:45 PM Dec 23, 2017 | Team Udayavani |

ಬೆಂಗಳೂರು: ರಾಜಧಾನಿಯ ಜನಸಂಖ್ಯೆಗೆ ಹೋಲಿಸಿದರೆ ಸುಮಾರು 4,500ಕ್ಕೂ ಹೆಚ್ಚು ಸಾರ್ವಜನಿಕರ ಶೌಚಾಲಯಗಳ ಕೊರತೆಯಿರುವುದು ನೈರ್ಮಲ್ಯ ಕಾಪಾಡುಕೊಳ್ಳುವಲ್ಲಿ ವಿಫ‌ಲವಾದಂತಾಗಿದೆ.

Advertisement

ಸ್ವತ್ಛ ಭಾರತ್‌ ಮಿಷನ್‌ ಪ್ರಕಾರ ಬೆಂಗಳೂರಿನ ಜನಸಂಖ್ಯೆಗೆ ಅನುಗುಣವಾಗಿ 6,595 ಕಮೋಡ್‌ ಸಹಿತ ಶೌಚಾಲಯಗಳು ಇರಬೇಕು. ಆದರೆ ನಗರದಲ್ಲಿ 2,000 ಕಮೋಡ್‌ ಶೌಚಾಲಯಗಳು ಮಾತ್ರ ಇವೆ. ಇದರಿಂದಾಗಿ ಬಯಲು ಪ್ರದೇಶದಲ್ಲಿ ಮಲ-ಮೂತ್ರ ವಿಸರ್ಜನೆ ಮುಂದುವರಿದಿದ್ದು, ಬಯಲು ಬಹಿರ್ದೆಸೆ ಮುಕ್ತವಾಗುವ ಪ್ರಯತ್ನದಲ್ಲಿ ಹಿನ್ನಡೆಯಾದಂತಾಗಿದೆ.

ಬಿಬಿಎಂಪಿ ಹಾಗೂ ಇತರೆ ಸ್ವಯಂ ಸೇವಾ ಸಂಘಗಳಿಂದ ನಗರದ ಪ್ರಮುಖ ಭಾಗಗಳಲ್ಲಿ ಶೌಚಗೃಹಗಳನ್ನು ನಿರ್ಮಿಸಿದ್ದು, ಅದರಂತೆ ಒಟ್ಟು 2000 ಕಮೋಡ್‌ ಶೌಚಾಲಯಗಳಿವೆ ಎಂದು ಅಂದಾಜಿಸಲಾಗಿದೆ. ಆದರೆ, 2 ಸಾವಿರ ಕಮೋಡ್‌ ಶೌಚಾಲಯಗಳ ಪೈಕಿ ಅರ್ಧದಷ್ಟು ಶೌಚಾಲಯಗಳು ಸಮಪರ್ಕವಾಗಿ ನಿರ್ವಹಣೆಯಾಗದೆ ಬಳಕೆಗೆ ಯೋಗ್ಯವಾಗಿಲ್ಲ. ಜತೆಗೆ ಜನರಿಗೆ ಅಗತ್ಯವಿರುವ ಸ್ಥಳಗಳಲ್ಲಿ ಲಭ್ಯವಿಲ್ಲದ ಹಾಗೂ ಶೌಚಾಲಯಗಳು ನಿರ್ವಹಣೆ ಉತ್ತಮವಾಗಿಲ್ಲದ ಕಾರಣ ಸಾರ್ವಜನಿಕರು ಬಳಕೆಗೆ ಮುಂದಾಗುತ್ತಿಲ್ಲ ಎಂದು ಪಾಲಿಕೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕೇವಲ 587 ಶೌಚಗೃಹಗಳು: ಬೆಂಗಳೂರಿನಲ್ಲಿ ಒಂದು ಕೋಟಿಗೂ ಹೆಚ್ಚಿನ ಜನಸಂಖ್ಯೆಯಿದ್ದು, ನಿತ್ಯ ರಾಜ್ಯದ ವಿವಿಧ ಭಾಗಗಳಲ್ಲಿಂದ 15 ಲಕ್ಷಕ್ಕೂ ಹೆಚ್ಚು ಜನರು ನಗರಕ್ಕೆ ಬಂದು ಹೋಗುತ್ತಾರೆ. ಆದರೆ, ನಗರದಲ್ಲಿ 587 ಕಡೆಗಳಲ್ಲಿ ಮಾತ್ರ ಶೌಚಗೃಹಗಳಿದ್ದು, ಸಾರ್ವಜನಿಕರು ಜಲಭಾದೆ ತಡೆಯಲಾಗದೆ ಖಾಲಿ ಜಾಗ, ವಿದ್ಯುತ್‌ ಟ್ರಾನ್ಸ್‌ಫಾರರ್‌ ಸೇರಿ ಸಾರ್ವಜನಿಕ ಸ್ಥಳಗಳನ್ನೇ ಶೌಚಾಗೃಹಗಳನ್ನಾಗಿ ಪರಿವರ್ತಿಸುತ್ತಿದ್ದಾರೆ.

ನಿರ್ವಹಣೆಯಿಲ್ಲದೆ ಬಳಕೆಯಾಗುತ್ತಿಲ್ಲ : ಸಾರ್ವಜನಿಕರ ಅನುಕೂಲಕ್ಕಾಗಿ ಬಿಬಿಎಂಪಿ ಹಾಗೂ ಕೆಲ ಸಂಘ-ಸಂಸ್ಥೆಗಳಿಂದ ಒಟ್ಟು 587 ಕಡೆಗಳಲ್ಲಿ ಶೌಚಗೃಹಗಳನ್ನು ನಿರ್ಮಿಸಲಾಗಿದೆ. ಆದರೆ, ಬಹುತೇಕ ಶೌಚಗೃಹಗಳು ಸೌಕರ್ಯ ವಿಲ್ಲದೆ, ನಿರ್ವಹಣೆಯಾಗದ ಹಿನ್ನೆಲೆಯಲ್ಲಿ ಸಾರ್ವಜನಿಕರು ಬಳಸುತ್ತಿಲ್ಲ. 

Advertisement

ವೈಯಕ್ತಿಕ ಶೌಚಾಲಯಕ್ಕೆ 4 ಸಾವಿರ ಅರ್ಜಿ ಸ್ವತ್ಛ ಭಾರತ ಅಭಿಯಾನದಡಿಯಲ್ಲಿ ಶೌಚಾಲಯಗಳ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಲು ಬಿಬಿಎಂಪಿ ಅರ್ಜಿ ಆಹ್ವಾನಿಸಿದ್ದು, ನಗರದ ವಿವಿಧ ವಾರ್ಡ್‌ಗಳಿಂದ ಒಟ್ಟು 3,956 ಜನರಿಂದ ವೈಯಕ್ತಿಕ ಶೌಚಾಲಯಗಳ ನಿರ್ಮಾಣಕ್ಕೆ ಆರ್ಥಿಕ ನೆರವು ಕೋರಿ ಅರ್ಜಿ ಗಳು ಸಲ್ಲಿಕೆಯಾಗಿವೆ. ಆ ಪೈಕಿ ಪಾಲಿಕೆಯ ಅಧಿಕಾರಿಗಳು 2,028 ಅರ್ಜಿಗಳನ್ನು ಪರಿಶೀಲಿಸಿ ಆರ್ಥಿಕ ನೆರವು ನೀಡಲು ಅರ್ಹತೆ ಹೊಂದಿರುವುದಾಗಿ ದೃಢಪಡಿಸಿದ್ದಾರೆ.

ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶ ದಿಂದ ಈಗಾಗಲೇ ಸಾರ್ವಜನಿಕ ಶೌಚಾಲಯಗಳ ನಿರ್ಮಾಣಕ್ಕೆ ಟೆಂಡರ್‌ ಆಹ್ವಾನಿಸಲಾಗಿದ್ದು, ಕೊಳೆಗೇರಿ ಭಾಗಗಳಲ್ಲಿ ಸಮುದಾಯ ಶೌಚಾಲಯ ನಿರ್ಮಿಸಲು ಕ್ರಮಕೈಗೊಳ್ಳಲಾಗಿದೆ. 
ಸಫ್ರಾಜ್‌ ಖಾನ್‌, ಬಿಬಿಎಂಪಿ ಆರೋಗ್ಯ ವಿಭಾಗದ ಜಂಟಿ ಆಯುಕ್ತ

300 ಕಡೆ ಶೌಚಗೃಹ ನಿರ್ಮಾಣಕ್ಕೆ ಟೆಂಡರ್‌
ಶೌಚಗೃಹಗಳ ಕೊರತೆಯಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ನಿವಾರಿಸಲು ಮುಂದಾಗಿರುವ ಬಿಬಿಎಂಪಿ, ನಗರದಾದ್ಯಂತ 2,212 ಕಡೆಗಳಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬಸ್‌ಶೆಲ್ಟರ್‌ಗಳಲ್ಲಿ ಸೂಕ್ತ ಸ್ಥಳಾವಕಾಶವಿರುವ 300 ಕಡೆಗಳಲ್ಲಿ ಶೌಚಗೃಹ ನಿರ್ಮಿಸಲು ಟೆಂಡರ್‌ ಆಹ್ವಾನಿಸಿದ್ದಾರೆ. ಇದರೊಂದಿಗೆ 100 ಕಡೆಗಳಲ್ಲಿ ಇ-ಶೌಚಾಲಯ ನಿರ್ಮಿಸಲು ಸಹ ಯೋಜನೆ ರೂಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next