ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಕಳಂಕಿತರಿಗೆ ಬಿಜೆಪಿ ಟಿಕೆಟ್ ನೀಡುವ ಪ್ರಶ್ನೆಯೇ ಇಲ್ಲ ಎಂದು ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬಾಂಬ್ ಸಿಡಿಸಿದ್ದಾರೆ. ನಗರದ ಹೊರವಲಯದಲ್ಲಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ನಡೆಯುತ್ತಿರುವ ಸಭೆಯಲ್ಲಿ ಮಾತನಾಡಿದ ಅವರು, ಕಳಂಕಿತರಿಗೆ ಟಿಕೆಟ್ ಕೊಡಬಾರದು ಎಂಬುದು ಪಕ್ಷ ನಿಲುವು. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಆಕಾಂಕ್ಷಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ಇದ್ದರೆ ಆ ಬಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.
ಬಳ್ಳಾರಿಯಲ್ಲಿ ಯಾವುದೇ ಗೊಂದಲ ಇಲ್ಲ, ಶ್ರೀರಾಮುಲು ಅವರೇ ಬಳ್ಳಾರಿ ಜಿಲ್ಲೆಯನ್ನು ನೋಡಿಕೊಳ್ಳುತ್ತಾರೆ. ಬಳ್ಳಾರಿ
ಟಿಕೆಟ್ ಹಂಚಿಕೆ ಬಗ್ಗೆ ಶ್ರೀರಾಮುಲು ಜತೆ ಚರ್ಚೆ ನಡೆಸಿ ಪಟ್ಟಿ ಸಿದ್ಧಪಡಿಸಲಾಗುವುದು ಎಂದು ತಿಳಿಸಿದರು.
ಏ.7ರವರೆಗೂ ಸಭೆ ನಡೆಯಲಿದ್ದು, ಮಧ್ಯ ಕರ್ನಾಟಕ, ಕರಾವಳಿ, ಮೈಸೂರು ಭಾಗದ ಕ್ಷೇತ್ರಗಳ ಪಟ್ಟಿಯೂ ಸಿದ್ಧವಾಗಲಿದೆ. ಬಳಿಕ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಪಟ್ಟಿ ನೀಡಲಾಗುವುದು. ಅವರು ನಡೆಸಿರುವ ಸಮೀಕ್ಷೆ ಹಾಗೂ ನಮ್ಮ ಅಭಿಪ್ರಾಯ ಆಧರಿಸಿ ಟಿಕೆಟ್ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.
ಶಾಸಕ ಸಿ.ಟಿ.ರವಿ ಮಾತನಾಡಿ, ಗುರುವಾರ ಮಧ್ಯ ಕರ್ನಾಟಕ ಜಿಲ್ಲೆಗಳ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ ಎಂದರು.
ಬಿಎಸ್‌ವೈ ಗರಂ: ಯಲಹಂಕ ರೆಸಾರ್ಟ್‌ನಲ್ಲಿ ಬುಧವಾರ ನಡೆದ ಸಭೆಗೆ ಆಗಮಿಸಿದ ಯಡಿಯೂರಪ್ಪ ಅವರ ಕಾಲಿಗೆ ಚಿತ್ತಾಪುರದ ಮುಖಂಡ ಬಸವರಾಜ್ ದೀರ್ಘದಂಡ ನಮಸ್ಕಾರ ಮಾಡಿದರು. ಬಿಎಸ್‌ವೈ ಇದೆಲ್ಲಾ ಬೇಡ ಬಿಡಪ್ಪಾ ಎಂದು ಗರಂ ಆಗಿ ಒಳ ನಡೆದರು.
ಲಡ್ಡು ವಿತರಣೆ: ಮಾಲೂರು ಆಕಾಂಕ್ಷಿ ಕೃಷ್ಣಯ್ಯಶೆಟ್ಟಿ ಸಭೆಗೆ ತಿರುಪತಿ ಲಡ್ಡು ಸಮೇತ ಬಂದಿದ್ದರು. ನಾಯಕರಿಗೆ ಲಡ್ಡು ಕೊಟ್ಟಿದ್ದು ವಿಶೇಷ. ಆಪಾದಿತರಿಗೆ ಟಿಕೆಟ್ ಇಲ್ಲ ಎನ್ನು ವಂತಿಲ್ಲ. ನ್ಯಾಯಾಲಯ ಅಪರಾಧಿ ಎಂದು ನಿರ್ಧರಿಸಿದ್ದರೆ ಅಂತವರಿಗೆ ಟಿಕೆಟ್ ಇಲ್ಲ. ಆಪಾದನೆ ಯಾರಿಗೆ ಬೇಕಾದರೂ ಮಾಡಬಹುದು.
ಸಿ.ಟಿ.ರವಿ, ಶಾಸಕ