ಹೊಸದಿಲ್ಲಿ: ‘ಕನ್ನಡ ಭಾಷೆಗೆ ಇಂಗ್ಲಿಷ್ ಕಂಟಕವಾಗಿದೆ. ಆಡಳಿತ, ಶಿಕ್ಷಣ, ಉದ್ಯೋಗ ಸಹಿತ ಎಲ್ಲ ಕ್ಷೇತ್ರಗಳಲ್ಲೂ ಆಂಗ್ಲ ಭಾಷೆಗೆ ಮಣೆ ಹಾಕಿರುವುದರಿಂದ ಕನ್ನಡ ಅಳಿಯುತ್ತಿದೆ’ ಎಂಬ ಕೂಗು ಹಲವು ದಶಕಗಳಿಂದ ಕೇಳಿ ಬರುತ್ತಿದೆ. ಆದರೆ, ‘ಇಂಗ್ಲಿಷ್‌ನಿಂದ ಕನ್ನಡ ಭಾಷೆಯ ಅಸ್ತಿತ್ವಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಶಾಸ್ತ್ರೀಯ ಭಾಷೆ ಕನ್ನಡವನ್ನು ತುಳಿಯಲು ಇಂಗ್ಲಿಷ್‌ಗೆ ಸಾಧ್ಯವಿಲ್ಲ’ ಎಂದು ಖ್ಯಾತ ಭಾಷಾ ಶಾಸ್ತ್ರಜ್ಞ ಗಣೇಶ್ ಎನ್. ದೇವಿ ಅವರು ಅಭಿಪ್ರಾಯಪಟ್ಟಿದ್ದಾರೆ.
ದಿಲ್ಲಿಯಲ್ಲಿ ಗುರುವಾರ ನಡೆದಿದ್ದ ‘ಪೀಪಲ್ಸ್ ಲಿಂಗ್ವಿಸ್ಟಿಕ್ ಸರ್ವೇ ಆಫ್ ಇಂಡಿಯಾ’ (ಪಿಎಲ್‌ಎಸ್‌ಐ)ದ 11 ಸಂಪುಟಗಳ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಗಣೇಶ್ ಎನ್. ದೇವಿ ಅವರು, ‘ದೇಶದಲ್ಲಿನ ಶೇ. 50ಕ್ಕೂ ಹೆಚ್ಚು ಭಾಷೆಗಳು ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತಿವೆ. ಅದರಲ್ಲೂ ಸಣ್ಣಪುಟ್ಟ ಸಮುದಾಯಗಳಲ್ಲಿ ಮಾತ್ರ ಬಳಕೆಯಲ್ಲಿರುವ ಭಾಷೆಗಳು ಅವಸಾನದ ಕೊನೇ ಮೆಟ್ಟಿಲ ಮೇಲಿದ್ದು, ಮುಂದಿನ 50 ವರ್ಷಗಳಲ್ಲಿ ಇಂಥ ಭಾಷೆಗಳ ಸಣ್ಣ ಕುರುಹು ಕೂಡ ಸಿಗುವುದಿಲ್ಲ,’ ಎಂದು ಪಿಎಲ್‌ಎಸ್‌ಐ ಅಧ್ಯಯನ ವರದಿಯನ್ನು ಉಲ್ಲೇಖೀಸಿ ಹೇಳಿದ್ದಾರೆ. ಇದೇ ವೇಳೆ, ನಾಲ್ಕು ಕೋಟಿಗೂ ಹೆಚ್ಚು ಜನ ಮಾತನಾಡುವ ಕನ್ನಡ ಭಾಷೆಗೆ, ಇಂಗ್ಲಿಷ್‌ನಿಂದ ಯಾವುದೇ ತೊಂದರೆಯಿಲ್ಲ,’ ಎಂದು ಅಭಿಪ್ರಾಯಪಟ್ಟಿದ್ದಾರೆ.
‘ಜಗತ್ತಿನಾದ್ಯಂತ ಒಟ್ಟು 6,000 ಭಾಷಗಳಿದ್ದು, ಅವುಗಳ ಪೈಕಿ 4,000 ಭಾಷೆಗಳು ಅಳಿವಿನಂಚಿನಲ್ಲಿವೆ. ಅಳಿಯುತ್ತಿರುವ ಈ 4,000 ಭಾಷೆಗಳ ಪೈಕಿ ಶೇ. 10ರಷ್ಟು ಭಾಷೆಗಳು ಭಾರತದಲ್ಲೇ ಇವೆ. ದೇಶಾದ್ಯಂತ ಜನ ಬಳಕೆಯಲ್ಲಿರುವ 780 ಭಾಷೆಗಳ ಪೈಕಿ 400ಕ್ಕೂ ಹೆಚ್ಚು ಭಾಷೆಗಳು ಅವಸಾನದ ಹಂತದಲ್ಲಿದ್ದು, ಬಹುತೇಕ ಭಾಷೆಗಳು ಹೆಚ್ಚು ಕಾಲ ಅಸ್ತಿತ್ವದಲ್ಲಿರುವುದಿಲ್ಲ,’ ಎಂದು ದೇವಿ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಇಂಗ್ಲಿಷ್ ಏಕೆ ಮಾರಕವಲ್ಲ?: ‘ದೇಶದಲ್ಲಿ ಹೆಚ್ಚು ಮಂದಿ ಮಾತನಾಡುವ ಕನ್ನಡ, ಹಿಂದಿ, ತೆಲುಗು, ಬಂಗಾಲಿ, ಮಲಯಾಳ ಸಹಿತ ಹಲವು ಭಾಷೆಗಳ ಅಳಿವಿಗೆ ಇಂಗ್ಲಿಷ್ ಕಾರಣ ಎಂಬ ವಾದವಿದೆ. ಆದರೆ ಅದು ಸುಳ್ಳು. ಕಾರಣ ಈ ಭಾಷೆಗಳು ಜಗತ್ತಿನ ಅಗ್ರ 30 ಭಾಷೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಇವುಗಳಿಗೆ ಕನಿಷ್ಠ ಒಂದು ಸಾವಿರ ವರ್ಷಗಳ ಇತಿಹಾಸವಿದೆ. ಒಂದೊಂದು ಭಾಷೆಯನ್ನೂ 2 ಕೋಟಿಗೂ ಹೆಚ್ಚು ಜನ ಮಾತನಾಡುತ್ತಾರೆ. ಇವೆಲ್ಲವುಗಳ ಜತೆಗೆ ಸಿನೆಮಾ ಉದ್ಯಮ, ನಾಟಕ, ಸಂಗೀತ, ಮಾಧ್ಯಮ ಹಾಗೂ ಶಿಕ್ಷಣ ಸಹಿತ ವಿವಿಧ ಕ್ಷೇತ್ರಗಳಲ್ಲಿ ಈ ಭಾಷೆಗಳ ಬಳಕೆ ವ್ಯಾಪಕವಾಗಿದೆ. ಹೀಗಾಗಿ ಈ ಭಾಷೆಗಳಿಗೆ ಇಂಗ್ಲಿಷ್ ಮಾರಕವಾಗಲಾರದು,’ ಎಂಬುದು ಗಣೇಶ್ ದೇವಿ ಅವರ ಅಭಿಪ್ರಾಯ.
MNCಗಳಿಂದ ಭಾಷೆ ಅಳಿವು
ಪ್ರಮುಖವಾಗಿ ಅಳಿವಿನಂಚು ತಲುಪಿರುವುದು ಕರಾವಳಿ ಭಾಗದ ಮೀನುಗಾರರ ಭಾಷೆಗಳು. ಮೀನುಗಾರಿಕೆಗೆ ಇಳಿದ ಬಹುರಾಷ್ಟ್ರೀಯ ಕಂಪೆನಿಗಳು, ಸಮುದ್ರದಾಳಕ್ಕೆ ತೆರಳಿ ಮೀನು ಹಿಡಿಯುತ್ತಿವೆ. ಹೀಗಾಗಿ ಕರಾವಳಿಯ ಮೀನುಗಾರರಿಗೆ ಉದ್ಯೋಗ ಇಲ್ಲದಂತಾಗಿ, ಪಟ್ಟಣ ಸೇರುತ್ತಿದ್ದಾರೆ. ಪೇಟೆ ಜನರಿಗೆ ತಮ್ಮ ಭಾಷೆ ಅರ್ಥವಾಗದ ಕಾರಣ ಮತ್ತೂಂದು ಭಾಷೆ ಮಾತನಾಡುತ್ತಿದ್ದು, ಅವರ ಮೂಲ ಭಾಷೆ ಮರೆಯಾಗುತ್ತಿದೆ. ಇದೇ ವೇಳೆ ಕೆಲವು ಸಣ್ಣ ಭಾಷೆ ಮಾತನಾಡುವ ಸಮುದಾಯಗಳ ವಿದ್ಯಾವಂತರು ತಮ್ಮ ಮೂಲ ಭಾಷೆಯಲ್ಲೇ ಸಾಹಿತ್ಯ ಕೃಷಿ ಆರಂಭಿಸಿ ಭಾಷೆ ಉಳಿವಿಗೆ ನೆರವಾಗಿದ್ದಾರೆ.